ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಬೆಳೆಗಾರರ ನಿರಂತರ ಧರಣಿ

Last Updated 14 ನವೆಂಬರ್ 2011, 19:30 IST
ಅಕ್ಷರ ಗಾತ್ರ

ರಾಮನಗರ: `ಏಳು ಎದ್ದೇಳು ರೈತ, ಸುಮ್ಮನೇ ಕೂಡಬೇಡ, ರೇಷ್ಮೆ ಕೃಷಿ ಉಳಿಸಲು ಮುಂದಾಗು, ಕೇಂದ್ರ ಮತ್ತು ರಾಜ್ಯ ಸರ್ಕಾರದ ರೇಷ್ಮೆ ವಿರೋಧಿ ನೀತಿ ವಿರೋಧಿಸಿ ಸಾರಿರುವ ಧರ್ಮಯುದ್ಧದಲ್ಲಿ ನಿರ್ಭೀತಿಯಿಂದ ಪಾಲ್ಗೊಳ್ಳು-ಬಾ...~

ಇದು, ರೇಷ್ಮೆ ಬೆಳೆಗಾರರ ಸಂಕಷ್ಟ ನಿವಾರಣೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆರಂಭಿಸಿರುವ ಅನಿರ್ದಿಷ್ಟಕಾಲದ ಧರಣಿಯ ಘೋಷ ವಾಕ್ಯ. ರಾಮನಗರದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯ ಮುಂಭಾಗ ರೈತ ಸಂಘ ಅನಿರ್ದಿಷ್ಟಕಾಲ ಪ್ರತಿಭಟನೆ ಮತ್ತು ಧರಣಿಗೆ ಸೋಮವಾರ ಚಾಲನೆ ನೀಡಿತು.
 
ಸಂಘದ ಅಂತರರಾಷ್ಟ್ರೀಯ ಕಾರ್ಯದರ್ಶಿ ಚುಕ್ಕಿ ನಂಜುಂಡಸ್ವಾಮಿ ಮತ್ತು ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನಾ ಧರಣಿಗೆ ಚಾಲನೆ ದೊರೆಯಿತು.

ಎಪಿಎಂಸಿ ಮಾರುಕಟ್ಟೆಯಿಂದ ಮೆರಣಿಗೆ ಮೂಲಕ ಬಂದ ನೂರಾರು ರೈತರು ಮಾರುಕಟ್ಟೆ ಮುಂಭಾಗ ನಿರ್ಮಿಸಲಾಗಿರುವ ಶಾಮಿಯಾನದ ಕೆಳಗೆ ಕುಳಿತು ಪ್ರತಿಭಟನಾ ಧರಣಿ ಆರಂಭಿಸಿದರು.

ಧರಣಿ ಉದ್ದೇಶಿಸಿ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಅವರು ಮಾತನಾಡಿ, `ಒಂದು ಕೆ.ಜಿ ಸಿಗರೇಟಿಗೆ 16 ಸಾವಿರ ರೂಪಾಯಿ ಇದೆ.

ಆದರೆ 1 ಕೆ.ಜಿ. ರೇಷ್ಮೆ ಗೂಡಿಗೆ ಕೇವಲ 150 ರೂಪಾಯಿ ಇದೆ. ಸಿಗರೇಟ್ ಸೇದುವ ಜನ ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ರೇಷ್ಮೆ ಬಟ್ಟೆ ಧರಿಸುವ ಜನತೆ ಹೆಚ್ಚು ಸುಂದರವಾಗಿ ಕಾಣುತ್ತಾರೆ. ಇಂತಹ ರೇಷ್ಮೆ ಗೂಡು ಬೆಳೆಯುವ ರೈತರನ್ನು ನಿರ್ಲಕ್ಷಿಸುವ ಸರ್ಕಾರ ರೈತ ವಿರೋಧಿಯಾಗಿದೆ~ ಎಂದು ದೂರಿದರು.

ರಾಜ್ಯ ಸರ್ಕಾರ ಪ್ರಸ್ತುತ ರೇಷ್ಮೆ ಗೂಡಿಗೆ ಅವೈಜ್ಞಾನಿಕವಾಗಿ 30 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿದೆ. 10ರಿಂದ 12 ದಿನದೊಳಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿ ಮಾಡದಿದ್ದರೆ 50 ಸಾವಿರ ರೈತರು ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

ದೇಶಕ್ಕಾದ ಅವಮಾನ: ಸಂಘದ ಅಂತರರಾಷ್ಟ್ರೀಯ ಕಾರ್ಯದರ್ಶಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ರೇಷ್ಮೆ ಗೂಡಿಗೆ ಕೇವಲ 30 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡುವ ಮೂಲಕ ರಾಜ್ಯ ಸರ್ಕಾರ ಇಡೀ ದೇಶದ ರೈತರಿಗೆ ಅವಮಾನ ಮಾಡಿದೆ ಎಂದು ಕಿಡಿಕಾರಿದರು.

ಬಾಂಗ್ಲಾದೇಶದ ಮಾರ್ಗವಾಗಿ ಕಳ್ಳ ಸಾಗಾಣೆ ಮೂಲಕ ಭಾರತಕ್ಕೆ ನುಸುಳುತ್ತಿರುವ ರೇಷ್ಮೆಯನ್ನು ಮೊದಲು ನಿಯಂತ್ರಿಸಬೇಕು. ಅವೈಜ್ಞಾನಿಕ ಬೆಂಬಲ ಬೆಲೆಯನ್ನು ಕೂಡಲೇ ಹಿಂಪಡೆದು, ರೈತರ ಶ್ರಮಕ್ಕೆ ತಕ್ಕ ಬೆಂಬಲ ಬೆಲೆ ನಿಗದಿಪಡಿಸಬೇಕು. ರೇಷ್ಮೆ ಆಮದು ಸುಂಕು ಹೆಚ್ಚಿಸುವಂತೆ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ, ಜನ ಪ್ರತಿನಿಧಿಗಳು ಆಗ್ರಹಿಸಬೇಕು ಎಂದು ಅವರು ಹೇಳಿದರು.

ರೈತ ವಿರೋಧಿ ನೀತಿ:
ಸಂಘದ ಕಾರ್ಯದರ್ಶಿ ಸಿ. ಪುಟ್ಟಸ್ವಾಮಿ ಮಾತನಾಡಿ, ರೇಷ್ಮೆ ಗೂಡಿಗೆ 30 ವರ್ಷಗಳ ಹಿಂದೆ ಇದ್ದ ಬೆಲೆ ಇಂದಿಗೂ ಇದೆ. ಉತ್ಪಾದನಾ ವೆಚ್ಚದಲ್ಲಿ ಮಿಶ್ರ ತಳಿಗೆ ಕೆ.ಜಿಗೆ 350 ಹಾಗೂ ಬೈವೋಲ್ಟನ್ ತಳಿಗೆ ಕೆ.ಜಿಗೆ 400 ರೂಪಾಯಿ ಆಗುತ್ತಿದೆ. ಆದರೆ ಪ್ರತಿ ದಿನದ ಹರಾಜು ಕೇವಲ ಕೆ.ಜಿಗೆ 50ರಿಂದ 170 (ಸರಾಸರಿ 120) ರೂಪಾಯಿ ಇದೆ. ಈ ವರ್ಷದ ಫೆಬ್ರುವರಿ 27ರಿಂದ ಈ ಬೆಲೆ ಸುಧಾರಣೆಯಾಗಿಲ್ಲ. ಈಗಾಗಲೇ ಕೇಂದ್ರ ಸರ್ಕಾರ ರೇಷ್ಮೆ ಆಮದು ಸುಂಕವನ್ನು ಶೇ 5ಕ್ಕೆ ನಿಗದಿಗೊಳಿಸಿದೆ.

ಇದರಿಂದ ಸಹಸ್ರಾರು ಟನ್ ಚೀನಾ ರೇಷ್ಮೆ ಭಾರತಕ್ಕೆ ಆಮದಾಗುತ್ತಿದೆ. ಇದರ ಜತೆಗೆ ಬಾಂಗ್ಲಾ, ನೇಪಾಳ, ಪಾಕಿಸ್ಥಾನದಿಂದ ಕಳ್ಳ ಮಾರ್ಗದಲ್ಲಿಯೂ ಸಹಸ್ರಾರು ಟನ್ ರೇಷ್ಮೆ ಭಾರತದ ಮಾರುಕಟ್ಟೆಗೆ ಬಂದು ದೇಶೀಯ ರೇಷ್ಮೆ ಉತ್ಪಾದಕರನ್ನು ಸಂಕಷ್ಟದ ಸ್ಥಿತಿಗೆ ತಂದಿಟ್ಟಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ರೇಷ್ಮೆ ಕೃಷಿ ವಿರೋಧಿ ನೀತಿಯನ್ನು ಖಂಡಿಸಿ ರಾಮನಗರ ಮತ್ತು ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆ ಮುಂಭಾಗ ನಿರಂತರ ಧರಣಿ ನಡೆಸಲಾಗುವುದು. ರಾಮನಗರದ ಮಾರುಕಟ್ಟೆ ಮುಂಭಾಗ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ ಮತ್ತು ಉತ್ತರ ಕರ್ನಾಟಕದ ರೇಷ್ಮೆ ಕೃಷಿಕರು ಹಾಗೂ ಶಿಡ್ಲಘಟ್ಟ ಮಾರುಕಟ್ಟೆ ಮುಂಭಾಗ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ರೈತರು ಪ್ರತಿಭಟನಾ ಧರಣಿ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

ಒಂದೊಂದು ದಿನ ಒಂದೊಂದು ಜಿಲ್ಲೆ ಮತ್ತು ಕೆಲ ತಾಲ್ಲೂಕಿನ ರೈತರು ಧರಣಿಯಲ್ಲಿ ಪಾಲ್ಗೊಳ್ಳುವರು. ಧರಣಿ ನಿರತರಿಗೆ ನೀರು, ಊಟ, ತಿಂಡಿ ವ್ಯವಸ್ಥೆಯಲ್ಲಿ ಇಲ್ಲಿಯೇ ಏರ್ಪಡಿಸಲಾಗಿದೆ ಎಂದು ಪುಟ್ಟಸ್ವಾಮಿ ಹೇಳಿದರು.

ದಕ್ಷಿಣ ಭಾರತ ರೈತ ಒಕ್ಕೂಟದ ಅಧ್ಯಕ್ಷ ಕಣ್ಣನ್, ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಮದ್ದೂರಿನ ಅಶೋಕ್, ರೈತ ಮುಖಂಡರಾದ ಲಕ್ಷ್ಮಣ ಸ್ವಾಮಿ ರಾಮು, ವಿಶ್ವನಾಥ್, ಮಹಿಳಾ ಘಟಕದ ಅಧ್ಯಕ್ಷೆ ಅನುಸೂಯಮ್ಮ ಮೊದಲಾದವರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT