ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಆತ್ಮಹತ್ಯೆ ತಡೆಗೆ ಗಂಭೀರ ಚಿಂತನೆ ಅಗತ್ಯ

Last Updated 14 ಫೆಬ್ರುವರಿ 2011, 9:10 IST
ಅಕ್ಷರ ಗಾತ್ರ

ಡಾ.ಭೀಮಸೇನ್ ಜೋಶಿ ಮಹಾಮಂಟಪ (ಗಜೇಂದ್ರಗಡ): ರೈತರ ಆತ್ಮಹತ್ಯೆ ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರ ಚಿಂತನೆ ನಡೆಸುವುದು ಅವಶ್ಯವಿದೆ ಎಂದು ಕೃಷಿ ತಜ್ಞ ರಮೇಶ ಗಡದಣ್ಣವರ ಸಲಹೆ ನೀಡಿದರು.

ಪಂಡಿತ ಡಾ.ಪುಟ್ಟರಾಜ ಕವಿ ಗವಾಯಿಗಳ ವೇದಿಕೆಯಲ್ಲಿ ಶನಿವಾರ ಗದಗ ಜಿಲ್ಲಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಕಬ್ಬು ಮತ್ತು ತೊಗರಿ ಬೆಳೆಗಾರರು ಸೂಕ್ತ ಬೆಂಬಲ ಬೆಲೆ ಸಿಗದ ಕಾರಣ ಆತ್ಮಹತ್ಯೆಗೆ ಶರಣಾಗುತ್ತಿರುವುದು ತೀವ್ರ ನೋವಿನ ಸಂಗತಿಯಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

’ದೇಶದಲ್ಲಿ ಒಟ್ಟು ಆದಾಯದಲ್ಲಿ 1.6 ಸಾವಿರ ಕೋಟಿ ರೂಪಾಯಿಗಳನ್ನು ರಸಾಯನಿಕ ಗೊಬ್ಬರ, ಕೃಷಿ ಕಚ್ಚಾ ವಸ್ತುಗಳಿಗಾಗಿ ಖರ್ಚು ಮಾಡಲಾಗುತ್ತಿದೆ. 60 ಸಾವಿರ ಕೋಟಿ ರೂಪಾಯಿ ಬೀಜ ಖರೀದಿ ವಿಷಯದಲ್ಲಿ ಹಾನಿಯಾಗುತ್ತಿದೆ. ಇದೆಲ್ಲವನ್ನು ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕಿದೆ’ ಎಂದು ಅವರು ತಿಳಿಸಿದರು.

‘ದೇಶದಲ್ಲಿ ಕೃಷಿ ಬದಲಾವಣೆ ಹಾಗೂ ಸಮಸ್ಯೆ ಎದುರಿಸುತ್ತಿರುವ ರೈತರನ್ನು ಪಾರು ಮಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ದೇಶದ ರಾಜಕಾರಣಿಗಳು ವಿಶೇಷ ಕಾಳಜಿ ವಹಿಸುವುದು ಅತ್ಯವಶ್ಯವಿದೆ. ರೈತ ಸಮುದಾಯ ಕಿರುತೆರೆಗಳಲ್ಲಿ ಬರುತ್ತಿರುವ ಜಾಹಿರಾತುಗಳಿಗೆ ಮಾರು ಹೋಗಿ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳದೇ ಸಂಪೂರ್ಣವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು’ ಎಂದು ಅವರು ಅನ್ನದಾತರಿಗೆ ಕಿವಿಮಾತು ಹೇಳಿದರು.

‘ಇಂದು ದೇಶದಲ್ಲಿ ಕೃಷಿ ಕ್ಷೇತ್ರವು ಅತ್ಯಂತ ಸಂಕಷ್ಟದಲ್ಲಿದೆ. ಹೀಗಾಗಿ ರೈತರೆಲ್ಲರೂ ಜಾಗೃತರಾದಾಗ ಮಾತ್ರ ಈ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣಲು ಸಾಧ್ಯ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಹೆಚ್ಚು ಪ್ರಾಮಾಣಿಕವಾಗಿ ರೈತಪರವಾದ ಕೆಲಸಗಳನ್ನು ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ರವಿತೇಜ ಅಬ್ಬಿಗೇರಿ ಆಶಯ ನುಡಿಗೈದರು. ಸಾವಯವ ಉತ್ಪನ್ನಗಳ ಮಾರುಕಟ್ಟೆ ಕುರಿತು ಚನ್ನಬಸಪ್ಪ ಬೂದಿಹಾಳ ಮಾತನಾಡಿದರು. ವಿಷಯುಕ್ತ ಆಹಾರ-ಭೂಮಿ-ಪರಿಸರ ವಿಷಯ ಕುರಿತು ಆರ್.ಎಂ. ಪಾಟೀಲ ಮಾತನಾಡಿದರು. ಡಿ.ಮಂಜುನಾಥ ಉಪಸ್ಥಿತರಿದ್ದರು. ಶಾಂತಕುಮಾರ ಭಜೇಂತ್ರಿ ಸ್ವಾಗತಿಸಿದರು. ಎಸ್.ಐ. ಕೊಣ್ಣೂರ ವಂದಿಸಿದರು. ಕೂಡ್ಲೆಪ್ಪ ಗುಡಿಮನಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT