ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಚಳವಳಿಯ ಪುನರುತ್ಥಾನಕ್ಕೆ ಪ್ರೇರಣೆಯಾದೀತೆ ಪ್ರಶಸ್ತಿ?

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚಿತ್ರದುರ್ಗದ ಮುರುಘಾಮಠವು ಪ್ರತಿವರ್ಷ ದಸರಾ ಮಹೋತ್ಸವದ ಸಂದರ್ಭದಲ್ಲಿ ನೀಡುವ ವಾರ್ಷಿಕ `ಬಸವಶ್ರೀ~ ಪ್ರಶಸ್ತಿಗೆ ಈ ಬಾರಿ ದಿವಂಗತ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
 
ಇದೇ ಮೊದಲನೇ ಬಾರಿಗೆ ಮರಣೋತ್ತರ ಪ್ರಶಸ್ತಿಗೆ ಭಾಜನರಾಗಿರುವ ವ್ಯಕ್ತಿ ನಂಜುಂಡಸ್ವಾಮಿ. ಬಹುಶಃ ನಂಜುಂಡಸ್ವಾಮಿ ಬದುಕಿದ್ದರೆ ಇದನ್ನು ಸ್ವೀಕರಿಸುತ್ತಿದ್ದರೋ ಇಲ್ಲವೋ ..

 ಮೂರು ಲಕ್ಷ ರೂಪಾಯಿ ಮೊತ್ತದ ಶ್ರೀಮಠದ ಈ ಪ್ರಶಸ್ತಿಗೆ  ಈವರೆವಿಗೂ ಭಾಜನರಾಗಿರುವವರೆಲ್ಲರೂ ಸಮಾಜದ ಖ್ಯಾತನಾಮರೇ ಆಗಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಪರ ಸಾಧನೆ ಮಾಡಿದವರನ್ನೇ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಇದರ ವಿಶೇಷ.

ಇದಕ್ಕೆ ಕಾರಣ ಮಠದ ಶ್ರೀಗಳ ಕಾರ್ಯವೈಖರಿ ಮತ್ತು ಮನೋಧರ್ಮವೂ ಒಂದು ಮುಖ್ಯ ಆಧಾರ ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ಅನೇಕ ವೈಚಾರಿಕ ಹಾಗೂ ಪ್ರಗತಿಪರ ಕಾರ್ಯಕ್ರಮಗಳ ಮೂಲಕ ಚಿತ್ರದುರ್ಗ ಮುರುಘಾಮಠವನ್ನು ಎಲ್ಲ ಮಠಗಳಿಗಿಂತಲೂ ಭಿನ್ನವಾಗಿ ನೋಡುವಂತೆ ಮಾಡಿರುವವರು ಶ್ರೀ ಶಿವಮೂರ್ತಿ ಮುರುಘಾ ಶರಣರು.

ಧಾರ್ಮಿಕ ವ್ಯವಸ್ಥೆಯ ಬಗ್ಗೆ ವಿವಿಧ ಸಮುದಾಯಗಳ ಮಠಾಧೀಶರ ಬಗ್ಗೆ ಸಂದರ್ಶನವೊಂದರಲ್ಲಿ ಸ್ವತಃ ನಂಜುಂಡಸ್ವಾಮಿಯವರ ಅಭಿಪ್ರಾಯ ಉಲ್ಲೇಖಾರ್ಹ.

`ಎಲ್ಲ ಜಾತಿಗಳಿಗೂ ಒಂದೊಂದು ಮಠ ಸ್ಥಾಪನೆಯಾಗುತ್ತಿರುವ ನಿಲುವಿಗೆ ನಿಮ್ಮ ಅಭಿಪ್ರಾಯವೇನು~ ಎಂದು ಪತ್ರಕರ್ತ ಕೇಳಿದ್ದ ಪ್ರಶ್ನೆಗೆ, `ಸ್ವಾಮಿಗಳು ಮಾಡಲ್ಪಡುವುದಿಲ್ಲ, ಆಗಲ್ಪಡುತ್ತಾರೆ~ ಎಂದು ಪ್ರೊಫೆಸರ್ ಉತ್ತರ ಕೊಟ್ಟಿದ್ದರು. ಇದು ಮಠಗಳು ಮತ್ತು ಮಠೀಯ ವ್ಯವಸ್ಥೆಯ ಬಗ್ಗೆ ನಂಜುಂಡಸ್ವಾಮಿಯವರಿಗಿದ್ದ ಗಟ್ಟಿ ನಿಲುವು.

ರಾಜ್ಯದ ರೈತರಲ್ಲಿ ಜಾಗೃತಿ ಮೂಡಿಸಿ, ಅವರಲ್ಲಿ ಆತ್ಮಗೌರವ ತುಂಬಿದ ರಾಜ್ಯದ ಮೊದಲ ರೈತ ನಾಯಕ ನಂಜುಂಡಸ್ವಾಮಿ. ಉತ್ತರ ಪ್ರದೇಶದ ಚರಣ್‌ಸಿಂಗ್ ಆಗಲಿ, ಹರಿಯಾಣದ `ತಾವೂಜಿ~ ದೇವಿಲಾಲ್ ಆಗಲಿ ಅಥವಾ ಇತ್ತೀಚಿನ ಮಹೇಂದ್ರ ಸಿಂಗ್ ಟಿಕಾಯತ್ ಅಂಥವರೇ ಆಗಲಿ, ಮಹಾರಾಷ್ಟ್ರದ ಯಾವುದೇ ಶೇತ್ಕರಿ ಸಂಘಟೆಯಾಗಲಿ ಇವರ‌್ಯಾರೂ ಮಾಡದಂತಹ ವಿಭಿನ್ನ ಸಾಧನೆಗಳನ್ನು ಮಾಡಿದವರು ನಂಜುಂಡಸ್ವಾಮಿ.
 
ಸಮಾಜವಾದದ ಹಿನ್ನೆಲೆ, ಕಾನೂನು ಅರಿವು, ಸಮಾಜದ ಬಗೆಗೆ ಅವರಿಗಿದ್ದ ವಿಶಾಲ ನೋಟ ಮತ್ತು ಇವೆಲ್ಲಕ್ಕಿಂತ ಹೆಚ್ಚಾಗಿ ತಮ್ಮ ಕಾಲಘಟ್ಟದಲ್ಲಿ ರಾಜ್ಯದ ರೈತರನ್ನು ಬೃಹತ್ ಪ್ರಮಾಣದಲ್ಲಿ ಹಸಿರು ಟವೆಲ್‌ಗಳ ಕೆಳಗೆ ತಂದು ನಿಲ್ಲಿಸಿದ ಧೀಮಂತ ಇವರು.

ನಂಜುಂಡಸ್ವಾಮಿ ಅವರನ್ನು ಸರ್ವಾಧಿಕಾರಿ ಎಂದು ಕರೆದವರು ಅನೇಕರಿದ್ದರು. ಆದರೆ ಅವರಿಗೆ ಮನದಾಳದಲ್ಲಿ ರೈತರ ಬಗ್ಗೆ ಅಪಾರವಾದ ಪ್ರೀತಿಯಿತ್ತು. ರೈತರ ಬದುಕು ಎಂದು ಸುಧಾರಣೆಯಾದೀತೊ ಎಂದು 24 ಗಂಟೆಗಳ ಕಾಲ ಅವರು ಕನಸು ಕಾಣುತ್ತಿದ್ದರು.

ನಂಜುಂಡಸ್ವಾಮಿಯವರದ್ದು ಮುಲಾಜಿಲ್ಲದ ನೇರ ಮತ್ತು ಅತ್ಯಂತ ತೀಕ್ಷ್ಣವಾದ ತಿವಿತದ ಟೀಕೆ. ಎದುರಿನ ವ್ಯಕ್ತಿ ಯಾರೇ ಇರಲಿ ಅವರನ್ನು ಪ್ರಜಾಪ್ರಭುತ್ವದ ಮಾದರಿಯಲ್ಲಿ ಇನ್ನಿಲ್ಲದಂತೆ ಲೇವಡಿ ಮಾಡಿ ಬೆವರಿಳಿಸುವ ಮಾತುಗಾರಿಕೆ.

ದುರದೃಷ್ಟವಶಾತ್ ಇಂದು ರೈತ ಚಳವಳಿ ಬಹುಮಟ್ಟಿಗೆ ಸತ್ತು ಹೋದ ಸ್ಥಿತಿಯಲ್ಲಿದೆ. ಬರಿ ರೈತ ಚಳವಳಿಯಷ್ಟೇ ಅಲ್ಲ, ರಾಜ್ಯದಲ್ಲಿ ಎಲ್ಲ ಚಳವಳಿಗಳೂ ಸತ್ತು ಹೋಗಿವೆ. ರೈತರಂತೂ ತೀರಾ ಕಂಗಾಲಾಗಿದ್ದಾರೆ. ಎಲ್ಲೆಡೆ ಭೂ ಕಬಳಿಕೆ. ಉನ್ನತ ಅಧಿಕಾರ ಸ್ಥಾನದಲ್ಲಿದ್ದವರೇ ಭೂಮಿ ನುಂಗಣ್ಣಗಳಾಗಿ ಕೋರ್ಟ್ ಬಾಗಿಲಿಗೆ ಅಲೆಯುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ನಂಜುಂಡಸ್ವಾಮಿ ಬದುಕಿರಬೇಕಿತ್ತು ಎಂದು ಈಗ ಅನಿಸುತ್ತದೆ.

ಪ್ರೊಫೆಸರ್ ಮಾರ್ಗದರ್ಶನದಲ್ಲಿ ಸಾವಿರಾರು ಮನಸ್ಸುಗಳು ಅಂದು ಜನಪರ ಹೋರಾಟಕ್ಕೆ ತಯಾರಾಗಿದ್ದವು. ವ್ಯವಸ್ಥೆಯ ವಿರುದ್ಧ ಧಿಕ್ಕಾರ ಕೂಗುವುದೆಂದರೆ, ಬೀದಿಗೆ ಇಳಿಯುವುದೆಂದರೆ ಅದು ನೀಡುವ ತೃಪ್ತಿಯೇ ಬೇರೆಯಿತ್ತು. ಅನ್ಯಾಯದ ವಿರುದ್ಧ ಸಿಡಿದೇಳುವುದು ಹೇಗೆಂದು ಅವರು ಈ ರಾಜ್ಯದ ಎಲ್ಲ ಬಡ ರೈತನಿಗೆ ಕಲಿಸಿಕೊಟ್ಟಿದ್ದರು. ನೂರಾರು ರೈತರನ್ನು ಕಟ್ಟಿಕೊಂಡು ವಿದೇಶಗಳಿಗೆ ಕರೆದುಕೊಂಡು ಹೋಗಿ ಹೋರಾಟ ನಡೆಸಿದ್ದರು.

1996ರಲ್ಲಿ ಒಂದು ತಿಂಗಳ ಕಾಲ ಇಂಟರ್‌ನ್ಯಾಷನಲ್ ಕ್ಯಾರವಾನ್ ಸಂಘಟನೆಯ ಅಡಿಯಲ್ಲಿ ದೇಶದ ಸುಮಾರು 500 ರೈತರು ಯುರೋಪ್ ಪ್ರವಾಸ ಕೈಗೊಂಡಿದ್ದರು. ಅದರಲ್ಲಿ ರಾಜ್ಯದ ರೈತರೇ 200ರಷ್ಟಿದ್ದರು.
 
ಅಂದು ಜರ್ಮನಿಯ ಕಲೋನ್‌ನಲ್ಲಿ ನಾವು ಜಿ-8 ಸಮಾವೇಶದ ಸ್ಥಳದಲ್ಲಿ ಪ್ರತಿಭಟನೆ ನಡೆಸಿದಾಗ ನಮ್ಮನ್ನೆಲ್ಲಾ ಅಲ್ಲಿನ ಪೊಲೀಸರು ಬಂಧಿಸಿದ್ದರು. ಇಟಲಿ, ಸ್ಪೇನ್, ಫ್ರಾನ್ಸ್, ಜರ್ಮನಿ ಮತ್ತು ಸ್ವಿಟ್ಜರ್‌ಲೆಂಡ್‌ಗಳಲ್ಲಿ ನಾವು ಒಂದು ತಿಂಗಳು ಸುತ್ತಾಡಿ ಜಾಗತೀಕರಣ, ರಾಸಾಯನಿಕ ವ್ಯವಸಾಯದ ವಿರುದ್ಧ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ಧ ನಡೆಸಿದ ಹೋರಾಟಕ್ಕೆ ಅಲ್ಲಿನ ಮಾಧ್ಯಮಗಳು ವಿಶೇಷ ಮನ್ನಣೆ ನೀಡಿದ್ದವು. ನಾವು ಹೋದೆಡೆಯಲ್ಲೆಲ್ಲಾ ನಂಜುಂಡಸ್ವಾಮಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಎಂದರೆ ಆತ್ಮೀಯ ಗೌರವದ ಸ್ವಾಗತವೇ ದೊರೆಯುತ್ತಿತ್ತು. ಇದು ಕನ್ನಡಿಗ ರೈತ ನಾಯಕನೊಬ್ಬನ ಅಮೋಘ ಸಾಧನೆ.

ರಾಜ್ಯದಲ್ಲಿ ಯಾವುದೇ ಸರ್ಕಾರ ಪ್ರೊಫೆಸರ್ ಬದುಕಿರುವವರೆಗೂ ರೈತರ ಹೋರಾಟವೆಂದರೆ ಅದುರಿ ಹೋಗುತ್ತಿತ್ತು. ಇಂದು ನಾವೆಲ್ಲಾ ಅನಾಥರಾಗಿದ್ದೇವೆ. ಮತ್ತೊಬ್ಬ ನಂಜುಂಡಸ್ವಾಮಿಯ ಬರುವಿಕೆಗಾಗಿ ಕಾಯುತ್ತಿದ್ದೇವೆ. ನಂಜುಂಡಸ್ವಾಮಿಗಳಿಗೆ ಪ್ರಶಸ್ತಿ, ಸನ್ಮಾನ, ಹಾರ ತುರಾಯಿಗಳಲ್ಲಿ ಯಾವತ್ತೂ ನಂಬಿಕೆ ಇರಲಿಲ್ಲ. ಮತ್ತು ಬದುಕಿದ್ದಾಗ ಅವುಗಳನ್ನು ಎಂದೂ ತಮ್ಮ ಬಳಿ ಬಿಟ್ಟುಕೊಳ್ಳಲಿಲ್ಲ.

ಯಾರಾದರೂ ಅವರನ್ನು `ಹೇಗಿದ್ದೀರಿ ಸಾರ್? ನಿಮ್ಮ ಆರೋಗ್ಯ ಹೇಗಿದೆ?~ ಎಂದು ಪ್ರಶ್ನಿಸಿದರೆ, `ನನ್ನದೇನೋ ಚೆನ್ನಾಗಿದೆ, ಆದರೆ ಕರ್ನಾಟಕದ್ದೇ ಚೆನ್ನಾಗಿಲ್ಲ~ ಎನ್ನುತ್ತಿದ್ದರು. ಇದು ನಂಜುಂಡಸ್ವಾಮಿಯವರ ರೈತಪರ ಕಾಳಜಿ.

`ಬಸವಶ್ರೀ~ ಪ್ರಶಸ್ತಿ ನಾಡಿನ ಬಹುದೊಡ್ಡ ಸಮಾಜ ಸುಧಾರಕ ಬಸವಣ್ಣನ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿ. ಈ ಪ್ರಶಸ್ತಿಗೆ ಈ ಹಿಂದೆ ಭಾಜನರಾದವರೆಲ್ಲಾ ಇದರ ಗೌರವವನ್ನು ಹೆಚ್ಚಿಸಿದ್ದಾರೆ. ಮರಣೋತ್ತರವಾಗಿ ಇಂದು ನಂಜುಂಡಸ್ವಾಮಿಯವರಿಗೆ ಚಿತ್ರದುರ್ಗದ ಮುರುಘಾ ಮಠದಲ್ಲಿ ನೀಡಲಾಗುತ್ತಿರುವ ಈ ಪ್ರಶಸ್ತಿ ರಾಜ್ಯದ ರೈತರ ಹೋರಾಟ ಚಿಗುರುವುದಕ್ಕೆ ಪ್ರೇರಣೆಯಾಗಲಿ. ಬಸವಶ್ರೀ ಪ್ರಶಸ್ತಿ ಇನ್ನಷ್ಟು ಅರ್ಥಪೂರ್ಣವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT