ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಧರ್ಮದ ಜಾತ್ರೆ; ಅನ್ನದಾತರಿಗೆ ಸನ್ಮಾನ

Last Updated 12 ಸೆಪ್ಟೆಂಬರ್ 2011, 8:00 IST
ಅಕ್ಷರ ಗಾತ್ರ

ಧಾರವಾಡ: ಕೃಷಿಯಲ್ಲಿ ಸಾಧನೆ ಮಾಡಿದ ಅನ್ನದಾತರಿಗೆ ಭಾನುವಾರ ಇಲ್ಲಿ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ ಹಾಗೂ ದಕ್ಷಿಣ ಪ್ರಾಂತೀಯ ಕೃಷಿ ಉತ್ಸವದಲ್ಲಿ ನಡೆದ ಈ ಅದ್ದೂರಿ ಸಮಾರಂಭಕ್ಕೆ ವರುಣ ಸಹ ಸಾಕ್ಷಿಯಾದನು.

ಕೃಷಿ ಮೇಳದ ಮೂರನೇ ದಿನವಾದ ಇಂದು ಪ್ರಶಸ್ತಿ ಪ್ರದಾನ ಸಮಾರಂಭ ಆರಂಭವಾಗುತ್ತಿದ್ದಂತೆಯೇ ಮಳೆ ಆಗಮಿಸುವ ಲಕ್ಷಣ ಕಂಡುಬಂತು. ಪ್ರಶಸ್ತಿ ಪ್ರದಾನ ಮಾಡುತ್ತಿದ್ದಂತೆಯೇ ವರುಣ ನಾಲ್ಕು ಹನಿ ಉದುರಿಸಿ ಮಣ್ಣಿನ ಮಕ್ಕಳ ಸಂತಸದಲ್ಲಿ ತನ್ನದೂ ಪಾಲಿದೆ ಎಂದು ತೋರಿಸಿದ.

ಕೃಷಿ ವಿವಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಜಿಲ್ಲೆಗಳ ಏಳು ಮಂದಿ ರೈತರಿಗೆ ಹಾಗೂ ಆರು ಮಂದಿ ರೈತ ಮಹಿಳೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ಕಾಕೋಳ ಗ್ರಾಮ ಚನ್ನಬಸಪ್ಪ ಶಿವಪ್ಪ ಕೊಂಬಳಿ ಅವರು ಹೆಚ್ಚಿನ ಅಂಕ ಪಡೆದ ಹಿನ್ನೆಲೆಯಲ್ಲಿ ಶಂಕರಗೌಡ ಪೊಲೀಸ್ ಪಾಟೀಲ ಹೆಸರಿನಲ್ಲಿರುವ ನಗದು ಬಹುಮಾನ ಪಡೆದರು.

ಪೊಲೀಸ್ ಆಯುಕ್ತ ಡಾ. ಕೆ.ರಾಮಚಂದ್ರರಾವ್ ಪ್ರಶಸ್ತಿ ವಿತರಿಸಿ, `ನಾನು ಕೃಷಿ ಪದವೀಧರನಾಗಿದ್ದು, ಇಂಥ ರೈತರ ಹಬ್ಬದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಇಲ್ಲಿ ಯಾವುದೇ ಜಾತಿ ಇಲ್ಲ, ಕೇವಲ ರೈತ ಧರ್ಮದ ಜಾತ್ರೆ ಇದಾಗಿದೆ. ಇಂಥ ಜಾತ್ರೆಯಲ್ಲಿ ಸಮಗ್ರ ಮಾಹಿತಿ ಪಡೆದು, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ವ್ಯವಸಾಯ ಮಾಡಬೇಕು. ಇದರಿಂದ ಹೆಚ್ಚಿನ ಇಳುವರಿ ಪಡೆಯಬಹುದು~ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ಸೀಮಾ ಮಸೂತಿ, `ಶ್ರೇಷ್ಠ ಕೃಷಿಕರೊಂದಿಗೆ ರೈತ ಮಹಿಳೆಯರೂ ಪುರಸ್ಕಾರ ಪಡೆದುಕೊಂಡಿದ್ದು ಸಂತಸದ ವಿಷಯ. ಇದರಿಂದ ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದ ಅವರು, ಸರ್ಕಾರ ಕೃಷಿ ಹಾಗೂ ರೈತರ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡೆಯಬೇಕು~ ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಡಾ. ವಿ.ಜಿ.ತಳವಾರ, ವಿಶ್ರಾಂತ ಕುಲಪತಿಗಳಾದ ಡಾ. ಎಂ.ಐ.ಸವದತ್ತಿ, ಡಾ. ಎಂ.ಮಹದೇವಪ್ಪ, ಡಾ. ಜೆ.ಎಚ್.ಕುಲಕರ್ಣಿ, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್.ಬಿ.ವಾಲೀಕಾರ, ಕೆನಡಾ ಮೆನಟೋಬಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಾ ಹಳ್ಳಿ, ಡಾ. ನರೋಲ್ಲಾ, ಡಾ. ಎಂ.ಬಿ.ಚೆಟ್ಟಿ, ಡಾ. ಟಿ.ಮುನಿಯಪ್ಪ ವೇದಿಕೆಯಲ್ಲಿದ್ದರು. ಕುಲಪತಿ ಡಾ. ಆರ್.ಆರ್. ಹಂಚಿನಾಳ ಸ್ವಾಗತಿಸಿದರು. ಡಾ. ಎಲ್.ಕೃಷ್ಣ ನಾಯಕ್ ವಂದಿಸಿದರು. ಡಾ. ಸುರೇಖಾ ಸಂಕನಗೌಡರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT