ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಪರ ಕೃಷಿ ಬಜೆಟ್: ಯಡಿಯೂರಪ್ಪ

Last Updated 21 ಫೆಬ್ರುವರಿ 2011, 6:50 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ದೇಶದಲ್ಲೇ ಮೊದಲ ಬಾರಿಗೆ ಫೆ.24ರಂದು ಕೃಷಿ ಬಜೆಟ್ ಮಂಡಿಸಲಿದ್ದೇನೆ. ಕೃಷಿ ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಬದಲಾವಣೆಗಳನ್ನು ತರುವ ಈ ಬಜೆಟ್‌ನಿಂದ ರೈತರಿಗೆ ತುಂಬ ಅನುಕೂಲವಾಗಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ನಗರದ ಹೊರವಲಯದಲ್ಲಿ ಭಾನುವಾರ ನಡೆದ ಆದಿಚುಂಚನಗಿರಿ ಮಠದ ವೀರಾಂಜನೇಯಸ್ವಾಮಿ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಾಡಿನ ರೈತರ ಪರ ಬಜೆಟ್ ಮಂಡನೆಯಾಗಲಿದ್ದು, ಕೃಷಿ ಕ್ಷೇತ್ರವು ಭಾರಿ ಪರಿವರ್ತನೆ ಕಾಣಲಿದೆ’ ಎಂದರು.

ರೈತರಿಗೆ ಸಾಲ ಸೌಲಭ್ಯ ಕಲ್ಪಿಸುವ, ಕೃಷಿ ಕ್ಷೇತ್ರಕ್ಕೆ ಅಗತ್ಯ  ಯೋಜನೆಗಳನ್ನು ಅನುಷ್ಠಾನಗೊಳಿಸುವ ಮತ್ತು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಜೆಟ್ ಮಂಡಿಸಲಾಗುವುದು. ರೈತರಿಗಾಗಿ ಉಪಯುಕ್ತ ಕಾರ್ಯಗಳನ್ನು ಕೈಗೊಳ್ಳುವುದು ಬಜೆಟ್‌ನ ಉದ್ದೇಶ ಎಂದು ಅವರು ತಿಳಿಸಿದರು.

‘ಶಿಕ್ಷಣ ಕ್ಷೇತ್ರಕ್ಕೆ ಭಾರಿ ಕೊಡುಗೆಯನ್ನು ನೀಡಿರುವ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿಯವರು ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪ್ರಗತಿ ಸಾಧಿಸಲು ಹಲವರಿಗೆ ಮಾರ್ಗದರ್ಶನ ನೀಡಿದ್ದಾರೆ. ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡಿರುವ ಸ್ವಾಮೀಜಿಯವರು ಉತ್ತಮ ಮಾರ್ಗದಲ್ಲಿ ನಡೆಯುವಂತೆ ನಮಗೆ ದಾರಿ  ತೋರಬೇಕು’ ಎಂದು ಅವರು ತಿಳಿಸಿದರು.

ಸಭಾ ಕಾರ್ಯಕ್ರಮದಲ್ಲಿ ಕೆಲ ನಿಮಿಷಗಳ ಕಾಲ ಮಾತ್ರವಿದ್ದ ಮುಖ್ಯಮಂತ್ರಿಯವರು, ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ಸಾವಿರ ದಿನಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಾರ್ಯಕರ್ತರ ಭಾರಿ ಸಮಾವೇಶ ಹಮ್ಮಿಕೊಂಡಿದ್ದೇವೆ. ಆ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳಬೇಕಿರುವ ಕಾರಣ ನಾನು ಮತ್ತು ಸಂಪುಟದ ಸಚಿವರು ಬೇಗನೇ ತೆರಳಬೇಕಿದೆ’ ಎಂದು ಹೇಳಿ ನಿರ್ಗಮಿಸಿದರು. ಅವರೊಂದಿಗೆ ಸಚಿವರೂ ಸಹ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಶಾಸಕ ವಿ.ಆರ್.ಸುದರ್ಶನ ಮಾತನಾಡಿ, ‘ನೀರಾವರಿ ಯೋಜನೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ನಿಜವಾದ ಕಳಕಳಿ ಇದ್ದಲ್ಲಿ, ಯೋಜನೆ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಬೇಕೆ ಹೊರತು ಈ ಹಿಂದಿನ ಸರ್ಕಾರಗಳ ಬಗ್ಗೆ ಆರೋಪ ಮಾಡಬಾರದು. ಹಿಂದಿನ ಸರ್ಕಾರಗಳು ಯೋಜನೆಗಳನ್ನು ಜಾರಿಗೆ ತರಲಿಲ್ಲ, ಉತ್ತಮ ಆಡಳಿತ ನಡೆಸಲಿಲ್ಲ ಎಂದೆಲ್ಲ ಆರೋಪಗಳು ಮಾಡುವುದನ್ನು ಕೈಬಿಡಬೇಕು. ಜನರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸಲು ಮತ್ತು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಹುತೇಕ ಅತಿಥಿಗಳು, ಶಾಸಕರು ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ನೀರಾವರಿ ಯೋಜನೆ ಅನುಷ್ಠಾನಕ್ಕೆ ಶೀಘ್ರವೇ ಕ್ರಮ ಕೈಗೊಳ್ಳದಿದ್ದಲ್ಲಿ, ಮುಂದಿನ ದಿನಗಳಲ್ಲಿ ಭಾರಿ ಜನಾಂದೋಲನ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.ಬಾಲಗಂಗಾಧರನಾಥ ಸ್ವಾಮೀಜಿಯವರು ಅತಿಥಿಗಳನ್ನು ಸನ್ಮಾನಿಸಿದರು.

ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಅರ್.ಅಶೋಕ್, ವಿ.ಸೋಮಣ್ಣ, ಶಾಸಕರಾದ ಕೆ.ಪಿ.ಬಚ್ಚೇಗೌಡ, ವಿ.ಮುನಿಯಪ್ಪ, ಶಿವಶಂಕರ ರೆಡ್ಡಿ, ಎನ್.ಸಂಪಂಗಿ, ವೈ.ಎ.ನಾರಾಯಣಸ್ವಾಮಿ, ವರ್ತೂರು ಪ್ರಕಾಶ್, ವೆಂಕಟಸ್ವಾಮಿ, ಎಸ್.ಆರ್.ವಿಶ್ವನಾಥ, ಎನ್.ಎಸ್.ಕೃಷ್ಣಯ್ಯಶೆಟ್ಟಿ, ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿನ್ನಪ್ಪಯ್ಯ, ಆದಿಚುಂಚನಗಿರಿ ಶಾಖಾಮಠದ ನಿರ್ಮಲಾನಂದನಾಥ ಸ್ವಾಮೀಜಿ, ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT