ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಮಿತ್ರ ಯೋಜನೆಯ ಹಗಲು ದರೋಡೆ

Last Updated 14 ಸೆಪ್ಟೆಂಬರ್ 2011, 6:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೇಂದ್ರ ಸರ್ಕಾರದ `ರೈತ ಮಿತ್ರ~ ಯೋಜನೆ ಹಾಗೂ ಉದ್ಯೋಗಖಾತ್ರಿ ಮತ್ತು ಡಿಪಿಎಪಿ ಯೋಜನೆ ಅಡಿಯಲ್ಲಿ ನಡೆದಿರುವ ಲೋಪದೋಷಗಳು ಮತ್ತು ಅನುದಾನ ದುರುಪಯೋಗದ ಬಗ್ಗೆ ತಪಾಸಣೆ ನಡೆಸುವ ಪ್ರಕ್ರಿಯೆಯನ್ನು ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ರಾಜ್ ಸಂಸ್ಥೆಗಳ ಸಮಿತಿ ಆರಂಭಿಸಿದೆ.

ಮಂಗಳವಾರ ನಗರಕ್ಕೆ ಭೇಟಿ ನೀಡಿದ ಸಮಿತಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಮಾಹಿತಿ ಪಡೆಯಿತು.ಹಿಂದಿನ ಜಿಲ್ಲಾಧಿಕಾರಿ ಅಮರನಾರಾಯಣ ಅವಧಿಯಲ್ಲಿ ಅನುಷ್ಠಾನಗೊಂಡಿದ್ದ ರೈತ ಮಿತ್ರ ಯೋಜನೆ ಬಗ್ಗೆ ಲೆಕ್ಕಪತ್ರ ಮಹಾಪರಿಶೋಧಕರ ವರದಿ ಸಲ್ಲಿಸಿದ ಆಕ್ಷೇಪಗಳು ಮತ್ತು ದೂರುಗಳ ಹಿನ್ನೆಲೆಯಲ್ಲಿ ಸಮಿತಿ ತಪಾಸಣೆ ಕೈಗೊಂಡಿದ್ದು, ಬುಧವಾರ ಸ್ಥಳ ಪರಿಶೀಲನೆ ನಡೆಸಲಿದೆ.

ಈ ಬಗ್ಗೆ ಪತ್ರಕರ್ತರಿಗೆ ವಿವರ ನೀಡಿದ ಸಮಿತಿ ಸದಸ್ಯ ಹಾಗೂ ಶಾಸಕ ಅಪ್ಪಾಜಿ ನಾಡಗೌಡ ಅವರು, 2006-07ರಲ್ಲಿ ರೈತ ಮಿತ್ರ ಯೋಜನೆ ಅಡಿಯಲ್ಲಿ ಸಸಿಗಳ ನಿರ್ವಹಣೆಗೆ ರೂ 49.5 ಲಕ್ಷ ಅಧಿಕ ವೆಚ್ಚವಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಲೆಕ್ಕಪತ್ರ ಮಹಾಪರಿಶೋಧಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಪ್ರತಿಯೊಂದು ಗ್ರಾಮ ಪಂಚಾಯ್ತಿಗೆ 20 ಸಾವಿರ ಜಟ್ರೋಪಾ ಮತ್ತು ಹೊಂಗೆ ಸಸಿಗಳ ಬೇಡಿಕೆ ಇದೆ ಎಂದು ಹೇಳಿ ಕ್ರಿಯಾ ಯೋಜನೆ ರೂಪಿಸಲಾಯಿತು. ಜಿಲ್ಲಾಧಿಕಾರಿ ಅವರೇ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದರು.

ಆದರೆ, ಆ ವರ್ಷ ಬರ ಬಂದಿತ್ತು. ಬರಗಾಲ ಇದ್ದರೂ ಮೊದಲ ವರ್ಷವೇ 20 ಸಾವಿರ ಪಡೆಯುವಂತೆ ನಿರ್ದೇಶನ ನೀಡಿರುವುದು ಕಂಡು ಬಂದಿದೆ. ನಂತರ 10 ಸಾವಿರ ಸಸಿಗಳನ್ನು ವಿತರಿಸಲಾಯಿತು. ಮುಂದಿನ ವರ್ಷಕ್ಕೆ 10 ಸಾವಿರ ಸಸಿಗಳನ್ನು ನೆಡಲು ನಿರ್ಧರಿಸಲಾಯಿತು.

ಮುಂದಿನ ವರ್ಷದವರೆಗೆ ಈ 10 ಸಾವಿರ ಸಸಿಗಳನ್ನು ಸಂರಕ್ಷಿಸಲು 50 ಲಕ್ಷ ಖರ್ಚು ಮಾಡಲಾಗಿದೆ. ಆದರೆ, ಈ ಎಲ್ಲ ಗಿಡಗಳನ್ನು ಎಲ್ಲಿ ನೆಡಲಾಗಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ಸಮಿತಿ ಪರಿಶೀಲನೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.

ಮುಖ್ಯವಾಗಿ ಸಸಿಗಳನ್ನು ನೆಡಲು ಒಂದು ಗುಂಡಿ ತೋಡಲು ರೂ 9.75 ಪ್ರೋತ್ಸಾಹ ಧನ ನೀಡಲಾಗಿದ್ದು, ಈ ಮೂಲಕ ಒಟ್ಟು ರೂ 4 ಕೋಟಿ ಖರ್ಚು ಮಾಡಲಾಗಿದೆ. ಆದ್ದರಿಂದ ಸಸಿಗಳು ಎಲ್ಲಿವೇ? ಎಷ್ಟು ನೆಡಲಾಗಿದೆ? ಎನ್ನುವ ಬಗ್ಗೆ ಪರಿಶೀಲಿಸಲಾಗುವುದು ಎಂದು ವಿವರಿಸಿದರು.

ಕೇವಲ ದಾಖಲೆಗಳಲ್ಲಿ ಸಸಿಗಳನ್ನು ಬೆಳೆಸಲಾಗಿದೆ ಮತ್ತು ಯೋಜನೆ ಉದ್ದೇಶ ಈಡೇರಿಲ್ಲ ಎನ್ನುವ ಶಂಕೆ ಸಮಿತಿಗಿದ್ದು, ರೂ 4 ಕೋಟಿ ದುರುಪಯೋಗವಾಗಿರುವ ಬಗ್ಗೆ ತಪಾಸಣೆ ಮಾಡಲಾಗುವುದು ಎಂದು ತಿಳಿಸಿದರು.

ಒಂದೇ ಆದೇಶ ಮಾಡಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಗೆ ಒಂದು ನೂರು ಸ್ವಯಂ ಸಂಸ್ಥೆಗಳನ್ನು ಬಳಸಿಕೊಳ್ಳಳಾಗಿದೆ. ಈ ಸ್ವಯಂ ಸಂಸ್ಥೆಗಳು ಎಲ್ಲಿವೆ? ಇವುಗಳ ಹಿನ್ನೆಲೆ ಏನು? ಎನ್ನುವುದು ಸಹ ಅರಿತುಕೊಳ್ಳುವುದು ಮುಖ್ಯವಾಗಿದೆ.

ಸಮಿತಿ ಸದಸ್ಯ ಬಿ.ಎಂ. ನರೇಂದ್ರಸ್ವಾಮಿ ಮಾತನಾಡಿ, ಇದು ನೀರಿಲ್ಲದೆ ಗಿಡ ಬೆಳೆಸುವ ಯೋಜನೆಯಾಗಿದೆ. ಇಲ್ಲಿ ಹಗಲು ದರೋಡೆಯಾಗಿದೆ. ಒಟ್ಟಿನಲ್ಲಿ  ಇದು ಸಸಿ ನೆಡುವ ವಿಚಾರ `ಅಮರ~ವಾಗಿದೆ ಎಂದು ವ್ಯಂಗ್ಯವಾಡಿದರು.

ಉದ್ಯೋಗ ಖಾತ್ರಿ ಯೋಜನೆ ಲೋಪದ ಕುರಿತು ವಿವರ ನೀಡಿದ ನಾಡಗೌಡರು, 2006-07ರಲ್ಲಿ 3ರಿಂದ 4 ಸಾವಿರ ಮಂದಿ ನೋಂದಾವಣೆಯಾಗಿದ್ದರೂ ಕೇವಲ ಶೇ. 3ರಷ್ಟು ಜನರಿಗೆ ಉದ್ಯೋಗ ನೀಡಲಾಗಿದೆ. ಅಂಕಿ ಸಂಖ್ಯೆಗಳಲ್ಲಿ ತಪ್ಪಾಗಿವೆ ಎಂದು ಅಧಿಕಾರಿಗಳು ನೀಡಿದ್ದಾರೆ.

ಜತೆಗೆ ಯೋಜನೆ ಆರಂಭದ ಹಂತದಲ್ಲಿದ್ದರಿಂದ ಸಮರ್ಪಕ ಮಾಹಿತಿ ಇರಲಿಲ್ಲ ಮತ್ತು ಕೂಲಿಯೂ ಕಡಿಮೆ ಇತ್ತು. ಈ ಬಗ್ಗೆ ಅಧಿಕಾರಿಗಳ ನೀಡಿರುವ ವಿವರದಿಂದ ಸಮಿತಿಗೆ ಮನವರಿಕೆಯಾಗಿರುವುದರಿಂದ ಈ ವಿಷಯವನ್ನು ಕೈಬಿಡುತ್ತೇವೆ ಎಂದು ತಿಳಿಸಿದರು.

ಬರಪ್ರದೇಶ ಅಭಿವೃದ್ಧಿ ಯೋಜನೆ (ಡಿಪಿಎಪಿ) ಅಡಿಯಲ್ಲಿ ಜಲಾನಯನ ಪ್ರದೇಶ ಅಭಿವೃದ್ಧಿಪಡಿಸಲು ವಿಫಲವಾಗಿರುವುದು ಕಂಡು ಬಂದಿದೆ. ಗ್ರಾಮ ಪಂಚಾಯ್ತಿಗಳು ಕ್ರಿಯಾ ಯೋಜನೆ ನೀಡಲು ವಿಳಂಬವಾಗಿವೆ ಎಂದು ಹೇಳಿದ್ದಾರೆ.
 
ರಾಜ್ಯಕ್ಕೆ ಈ ಯೋಜನೆ ಅಡಿ ರೂ 78.73 ಕೋಟಿ ಅನುದಾನ ದೊರೆತಿತ್ತು. ಈ ಅನುದಾನವನ್ನು ಚಿತ್ರದುರ್ಗ ಸೇರಿದಂತೆ 15 ಜಿಲ್ಲೆಗಳಲ್ಲಿ ಸಮರ್ಪಕವಾಗಿ ಬಳಸಿಕೊಂಡಿಲ್ಲ ಎನ್ನುವುದು ವರದಿಯಾಗಿದೆ ಎಂದು ತಿಳಿಸಿದರು.

ಸಮಿತಿ ಸದಸ್ಯರಾದ ಮಹಾಂತೇಶ್ ಕೌಜಲಗಿ, ಶಿವರಾಜ ತಂಗಡಗಿ, ಪಟೇಲ್ ಶಿವರಾಮ, ವಿಠ್ಠಲ ದೊಡ್ಡಿಬಾಕಡ ತೊಂಡ, ಸಿದ್ಧರಾಮಣ್ಣ ಉಪಸ್ಥಿತರಿದ್ದರು.ನಂತರ ಸಮಿತಿ ಸದಸ್ಯರು ಕಣಿವೆ ಮಾರಮ್ಮ ಬಳಿಯ ಚೆಕ್‌ಡ್ಯಾಂ ಪರಿಶೀಲಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT