ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನನ್ನು ತಯಾರಿಸಲು ವಿವಿಗಳಿಗೆ ಸಾಧ್ಯವಿಲ್ಲ

Last Updated 16 ಸೆಪ್ಟೆಂಬರ್ 2011, 8:50 IST
ಅಕ್ಷರ ಗಾತ್ರ

ನಾಗಮಂಗಲ: ಯಾವುದೇ ವಿಶ್ವ ವಿದ್ಯಾನಿಲಯವು ವೈದ್ಯರು, ಎಂಜಿನಿಯರುಗಳು ಹಾಗೂ ವಿಜ್ಞಾನಿ ಮುಂತಾದವರನ್ನು ತಯಾರು ಮಾಡಬಹುದು. ಆದರೆ ಒಬ್ಬ ವ್ಯಕ್ತಿಯನ್ನು ಕೃಷಿಕನನ್ನಾಗಿ ತಯಾರು ಮಾಡಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟರು.

ಗುರುವಾರ ತಾಲ್ಲೂಕಿನ ಬಿ.ಶೆಟ್ಟಿಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಕೃಷಿಕ ಸಮಾಜ ಹಾಗು ಕೃಷಿ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ತೆಂಗಿನಮರ ಹತ್ತುವ ಉಪಕರಣಕ್ಕೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಕೃಷಿಕರ ಸಮಸ್ಯೆಗಳನ್ನು ಅರಿತು ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಅವುಗಳನ್ನು ಉತ್ತಮ ರೀತಿಯಲ್ಲಿ ಜನರ ಬಳಿಗೆ ತಲುಪಿಸುವಲ್ಲಿ ಅಧಿಕಾರಿ ವರ್ಗ ಸೇತುವೆಯಾಗಬೇಕು. ಅದೇ ರೀತಿ ಗ್ರಾಮಗಳಲ್ಲಿ ಯುವಕರು ಮತ್ತು ರೈತರು ಒಂದೆಡೆ ಕಲೆತು ಸಮಸ್ಯೆಗಳನ್ನು ಚರ್ಚಿಸಿ ಆ ಸಮಸ್ಯೆಗೆ ಸರ್ಕಾರದ ಪರವಾಗಿ ಯಾವ ಪರಿಹಾರ ಇದೆ ಎಂಬುದನ್ನು ಸಂಬಂಧಿಸಿದ ಇಲಾಖೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಬೇಕು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗೆ ಸಂಬಂಧ ಪಟ್ಟ ಇಲಾಖೆಗಳಿಗೆ ರೈತರು ಭೇಟಿ ನೀಡುವುದೇ ಇಲ್ಲ ಎಂದರು.

ಗ್ರಾಮಗಳಲ್ಲಿ ಕುಡಿಯುವ ನೀರು, ಚರಂಡಿ, ಶೌಚಾಲಯ ಮುಂತಾದ ಮೂಲ ಸೌಲಭ್ಯಗಳ ಕೊರತೆ ನೀಗಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಚರ್ಚಿಸಿ ನಿಮ್ಮ ಗ್ರಾಮಗಳಿಗೆ ಬೇಕಾದ ಸೌಲಭ್ಯವನ್ನು ಪೂರೈಸಿಕೊಳ್ಳಲು ಶ್ರಮಿಸಿ. ಸರ್ಕಾರ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಆರ್ಥಿಕವಾಗಿ ಅವರು ಸ್ವಾವಲಂಬಿಗಳನ್ನಾಗಿ ಮಾಡಲು ಹತ್ತು ಹಲವು ಯೋಜನೆಗಳು ಜಾರಿಯಲ್ಲಿದೆ.

ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮನ್ನು ಹಾಗು ದೇಶವನ್ನು ಸುಸ್ಥಿತಿಯಲ್ಲಿಡಲು ಶ್ರಮಿಸಬೇಕು. ಗ್ರಾಮಾಂತರ ಪ್ರದೇಶಗಳಿಂದ ರೈತಾಪಿ ವರ್ಗದವರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಕೆಲವೇ ವರ್ಷಗಳಲ್ಲಿ ರೈತರು ದೇಶದಿಂದ ಮಾಯವಾಗಿ ಆಹಾರದ ಕೊರತೆ ಸಂಭವಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದವರು ಅಭಿಪ್ರಾಯ ವ್ಯಕ್ತ ಪಡಿಸಿದರು.

ಎಪಿಎಂಸಿ ನಿರ್ದೇಶಕ ರಾಜೇಶ್, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಟಿ.ಕೆ.ರಾಮೇಗೌಡ ಮಾತನಾಡಿದರು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶಿವಲಿಂಗು (ಲಾರಿ ಚನ್ನಪ್ಪ), ಮುಖಂಡರಾದ ಡಾ.ಪಾರ್ಥಸಾರಥಿ, ಕೆಂಪೇಗೌಡ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT