ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆತ್ಮಹತ್ಯೆ: ಕಣ್ಣುತೆರೆಯದ ಅಧಿಕಾರಿ

Last Updated 18 ನವೆಂಬರ್ 2011, 8:45 IST
ಅಕ್ಷರ ಗಾತ್ರ

ದೇವದುರ್ಗ: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಸೇರಿದಂತೆ ಹಿಂಗಾರು ಸಹ ವಿಫಲಗೊಂಡ ಕಾರಣ ರೈತಾಪಿ ವರ್ಗಕ್ಕೆ ಇನ್ನಿಲ್ಲದ ತೊಂದರೆ ಎದುರಾಗಿದೆ.

ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಮಳೆ ಇಲ್ಲದೆ ಹಾನಿಯಾಗಿದ್ದು, ಸಂಕಷ್ಟವನ್ನು ತಾಳದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಇದನ್ನು ಗಂಭೀರವಾರ ಪರಿಗಣಿಸಿದೆ ಮೌನ ವಹಿಸಿರುವುದು ದುರದೃಷ್ಟಕವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ದಾನಪ್ಪ ಆಲ್ಕೋಡ್ ಆರೋಪಿಸಿದ್ದಾರೆ.

ಗುರುವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಮಳೆ ಇಲ್ಲದೆ ತೀವ್ರ ಸಂಕಷ್ಟಕ್ಕೆ ಕಾರಣವಾಗಿರುವ ಕೆಲವು ತಾಲ್ಲೂಕುಗಳನ್ನು ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿದರೂ ಕಾಟಾಚಾರಕ್ಕೆ ಎಂಬುವಂತೆ ಕಂಡು ಬಂದಿದೆ.

ಘೋಷಣೆಯಾಗಿ ತಿಂಗಳುಗಳು ಉರುಳಿದರೂ ಇಂದಿಗೂ ಬರಗಾಲಕ್ಕೆ ಸಂಬಂಧಿಸಿದ ಸಭೆ ಕರೆದು ಚರ್ಚಿಸುವಂತ ಕನಿಷ್ಠ ಸೌಜನ್ಯ ಅಧಿಕಾರಿಗಳಿಗೆ ಇಲ್ಲ.

ಬರಗಾಲ ಘೋಷಣೆಯಾದ ಕೂಡಲೇ ಜಿಲ್ಲಾಧಿಕಾರಿಗಳು ಸಂಬಂಧಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಭೆಯನ್ನು ಕರೆದು ಬರಗಾಲ ಕುರಿತು ಚರ್ಚಿಸುವ ಮೂಲಕ ಅವಶ್ಯಕವಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸುವಂತ ಕೆಲಸ ನಡೆಯಬೇಕಾದರೂ ಇಂದಿಗೂ ಗಮನ ಹರಿಸದೆ ಇರುವುದದು ಅಧಿಕಾರಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದೆ ಎಂದು ದೂರಿದರು.

ಒತ್ತಾಯ: ದೇವದುರ್ಗ ತಾಲ್ಲೂಕಿಗೆ ಬರಗಾಲದ ನೆಪದಲ್ಲಿ ಕೇವಲ 20 ಲಕ್ಷ ರೂಪಾಯಿ ಮಾತ್ರ ನೀಡಲಾಗಿದೆ. ಈ ಹಣ ಯಾವುಕ್ಕೂ ಸಾಲುವುದಿಲ್ಲ ಎಂದ ಅವರು, ಶೇ 80 ರಷ್ಟು ತಾಲ್ಲೂಕಿನ ಜನ ಕೃಷಿಕರಾಗಿದ್ದಾರೆ. ಕಳೆದ 8 ತಿಂಗಳಿಂದ ಮಳೆ ಇಲ್ಲದ ಕಾರಣ ದನಕರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ.

ಕೂಡಲೇ ಮೇವು ಖರೀದಿ ಸೇರಿದಂತೆ ಬೆಳೆ ಹಾನಿಯಿಂದ ತೊಂದರೆ ಒಳಗಾದ ರೈತರಿಗೆ ಪರಿಹಾರ ಘೋಷಣೆ ಮಾಡುಬೇಕು ಮತ್ತು ಬರಗಾಕ್ಕೆ ಸಂಬಂಧಿಸಿದ ಕಾಮಗಾರಿಗಳು ತುರ್ತಾಗಿ ನಡೆಯಬೇಕಾಗಿರುವುದರಿಂದ ತಾಲ್ಲೂಕಿಗೆ ಕನಿಷ್ಠ 10ಕೋಟಿ ರೂಪಾಯಿಯನ್ನು ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದ ಅವರು ಇದಕ್ಕೆ ನಿರ್ಲಕ್ಷ್ಯಿಸಿದರೆ ಇನ್ನಷ್ಟು ರೈತರು ಆತ್ಮಹತ್ಯೆಗೆ ಶರಣಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

ನಿರ್ಲಕ್ಷ್ಯ: ಎನ್‌ಆರ್‌ಬಿಸಿ 16ನೇ ಉಪಕಾಲುವೆಯ ಬಿಡಿ3 ಉಪಕಾಲುವೆಗೆ ನೀರು ಹರಿಯದ ಕಾರಣ ಈ ಭಾಗದ ಸಾವಿರಾರು ರೈತರ ಬೆಳೆಗಳು ಹಾನಿಗೊಂಡಿವೆ. ಕಾಲುವೆ ನೀರು ನಂಬಿ ಬೆಳೆಗಳಿಗೆ ಲಕ್ಷಗಟ್ಟಲೇ ಹಣ ಖರ್ಚು ಮಾಡಿದ ರೈತನಿಗೆ ಇಲಾಖೆಯ ಅಧಿಕಾರಿಗಳು ಮೋಸ ಮಾಡಿದ್ದು, ರೈತರ ಸಾವಿಗೆ ನೀರಾವರಿ ಇಲಾಖೆಯೇ ಕಾರಣ ಎಂದು ದೂರಿದರು.

ಲೂಟಿ: ತಾಲ್ಲೂಕಿನ ವಿವಿಧ ಇಲಾಖೆಗಳಿಗೆ ಬಿಡುಗಡೆಯಾಗುತ್ತಿರುವ ಹಣ ಸರಿಯಾಗಿ ಅನುಷ್ಠಾನ ಇಲ್ಲದೆ ಅಧಿಕಾರಿಗಳಿಂದ ಲೂಟಿ ನಡೆದಿದೆ ಎಂದು ಆರೋಪಿಸಿದ ಅವರು, ತಾಲ್ಲೂಕು ಕೇಂದ್ರದಲ್ಲಿ ಒಬ್ಬ ಅಧಿಕಾರಿಯೂ ಕಚೇರಿಯಲ್ಲಿ ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಂಡರೂ ಆತನ ಮನೆಗೆ ಹೋಗಿ ವಿಚಾರ ಮಾಡದಂತ ಸೌಜನ್ಯ ಇಲ್ಲ ಎಂದು ಆಪಾದಿಸಿದರು.

ಭೇಟಿ: ಬುಧವಾರ ತಾಲ್ಲೂಕಿನ ಕೊಪ್ಪರ ಗ್ರಾಮದ ರೈತ ಬಸ್ಸಪ್ಪ ಹಿರೇಕುರುಬರ್ ಅವರು ಬೆಳೆ ಹಾನಿಯಿಂದ ಆತ್ಮಹತ್ಯೆ ಮಾಡಿಕೊಂಡ ಕಾರಣ ಗುರುವಾರ ಆತನ ಮನೆಗೆ  ಭೇಟಿ ನೀಡಿದ ದಾನಪ್ಪ ಆಲ್ಕೋಡ್ ಅವರು ಮೃತನ ಕುಟುಂಬಕ್ಕೆ ಕೂಡಲೇ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಮ್ಮ ಸ್ವಂತದಿಂದ ಹಣ ನೀಡುವ ಜತೆಗೆ ಸಾಂತ್ವನ ಹೇಳಿದರು. ಗ್ರಾಪಂ ಅಧ್ಯಕ್ಷ ಸಿದ್ದಲಿಂಗಪ್ಪಗೌಡ ಗ್ರಾಮದ ಮುಖಂಡರಾದ ಶರಣಗೌಡ, ಗುರುನಾಥರಡ್ಡಿ ಹಾಗೂ ಕಟುಂಬದ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT