ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ರೈತರ ಆತ್ಮಹತ್ಯೆಗೆ ಅವ್ಯೆಜ್ಞಾನಿಕ ಕೃಷಿ ನೀತಿ ಕಾರಣ'

Last Updated 5 ಜುಲೈ 2013, 4:59 IST
ಅಕ್ಷರ ಗಾತ್ರ

ಚಿತ್ರದುರ್ಗ: ದಶಕದಿಂದ ದೇಶದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಏರುತ್ತಿದ್ದು, ಸರ್ಕಾರದ ಅವೈಜ್ಞಾನಿಕ ಕೃಷಿ ನೀತಿ ಇದಕ್ಕೆ ಕಾರಣ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ್ ಆರೋಪಿಸಿದರು.

ನಗರದಲ್ಲಿ ಗುರುವಾರ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

2001ರ ಜನಗಣತಿಯ ಅಂಕಿ ಸಂಖ್ಯೆ ಹಾಗೂ 2011ರ ಜನಗಣತಿಯ ಅಂಕಿ ಸಂಖ್ಯೆ ಗಮನಿಸಿದರೆ ರಾಜ್ಯದಲ್ಲಿ 30 ಲಕ್ಷ ರೈತರು ಕೃಷಿ ಬಿಟ್ಟು ನಗರದತ್ತ ವಲಸೆ ಹೋಗಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ವಲಸೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ಕೇವಲವಾಗಿ ಮಾತನಾಡಿದ್ದಾರೆ. ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಇಂಥ ಹೇಳಿಕೆ ನೀಡುತ್ತಿರಲಿಲ್ಲ ಎಂದರು.

ಬಹುರಾಷ್ಟ್ರೀಯ ಕಂಪೆನಿಗಳ 30 ಲಕ್ಷ ಕೋಟಿ ಸಾಲಕ್ಕೆ ಬಡ್ಡಿ ಮನ್ನಾ ಮಾಡುವ ಸರ್ಕಾರ ರೈತರ ಸಾಲ ಮನ್ನಾ ಮಾಡುವಲ್ಲಿ ವಿಳಂಬ ಮಾಡುತ್ತದೆ. ಈಚೆಗೆ ಕಂಪನಿಗಳಿಗೆ ಕೃಷಿ ಗುತ್ತಿಗೆ ನೀಡುವ ಪ್ರಸ್ತಾಪಗಳು ಕೇಳಿ ಬರುತ್ತಿವೆ. ಇದನ್ನು ರೈತ ಸಮುದಾಯ ವಿರೋಧಿಸಬೇಕು ಎಂದು ಬಸವರಾಜ್ ತಿಳಿಸಿದರು.

ಸಂಚಾಲಕ ಸಿ.ಕೆ. ಗೌಸ್‌ಪೀರ್ ಮಾತನಾಡಿ, ರೈತರು ಸಾಗುವಳಿ ಮಾಡಿಕೊಂಡು ಬಂದಿರುವ ಬಗರ್‌ಹುಕುಂ ಜಮೀನುಗಳನ್ನು ಸರ್ಕಾರ ವಶಪಡಿಸಿಕೊಳ್ಳಲು ನೋಡುತ್ತಿದೆ. ಈ ಬಗ್ಗೆ ರೈತರು ಜಾಗೃತರಾಗಿ ಹೋರಾಟಕ್ಕೆ ಮುಂದಾಗಬೇಕು ಎಂದರು.

ಕಳೆದ 3 ವರ್ಷದಲ್ಲಿ ರಾಜ್ಯದ 175 ತಾಲ್ಲೂಕುಗಳು ಬರ ಎದುರಿಸಿವೆ. 2010ರಲ್ಲಿ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದರು. 2011ರಲ್ಲಿ ನೀರಾವರಿ ಪ್ರದೇಶಗಳಲ್ಲಿ ವ್ಯವಸಾಯ ಮಾಡಲಾಯಿತಾದರೂ ಸಮರ್ಪಕ ಆಹಾರ ಧಾನ್ಯ ಬೆಳೆಯಲು ಸಾಧ್ಯವಾಗದೆ ಸಾಲದ ಸುಳಿಯಲ್ಲಿ ಸಿಲುಕಿದ್ದರು. 2012ರಲ್ಲಿ ನೀರಾವರಿ ಪ್ರದೇಶದಲ್ಲೂ ವ್ಯವಸಾಯ ಮಾಡಲು ಹೆದರಿ ಹೊರ ರಾಜ್ಯಗಳಿಂದ ಆಹಾರ ದಾಸ್ತಾನು ಆಮದು ಮಾಡಿಕೊಂಡು ಪರಾವಲಂಬಿಗಳಾಗಿ ಜೀವನ ನಡೆಸುವಂತಾಯಿತು ಎಂದು ನೆನಪಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಲೂಟಿ ಮಾಡಿದರೆ, ಕೇಂದ್ರದಲ್ಲಿ ಯುಪಿಎ ಸರ್ಕಾರ ಲೂಟಿ ಮಾಡಿದೆ. ಈ ಸರ್ಕಾರಗಳು ಎಂದೂ  ಬಡವರ ಪರ ಕಾಳಜಿ ತೋರಿಸಲಿಲ್ಲ ಎಂದು ಅವರು ಈಗಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಒಂದು ರೂ.ಗೆ ಕೆಜಿ ಅಕ್ಕಿ ನೀಡುವ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ, ಇದೇ ಮಾದರಿಯಲ್ಲಿ ರೈತರು ಬೆಳೆಯುವ ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಆರ್ಥಿಕವಾಗಿ ಸದೃಢರಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಸಮ್ಮೇಳನದಲ್ಲಿ ಸಂಚಾಲಕ ಡಿ.ಎನ್. ಮಲಿಯಪ್ಪ, ಮುಖಂಡ ಓಬಳೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT