ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಜೀವನಾಡಿ `ಭದ್ರೆ'ಗೆ ಸುವರ್ಣ ಸಂಭ್ರಮ

ಮೂರು ಜಿಲ್ಲೆಯ 1,05,570 ಹೆಕ್ಟೇರ್ ಪ್ರದೇಶಕ್ಕೆ ನೀರು
Last Updated 2 ಸೆಪ್ಟೆಂಬರ್ 2013, 5:11 IST
ಅಕ್ಷರ ಗಾತ್ರ

ದಾವಣಗೆರೆ: ಭದ್ರಾವತಿ, ಶಿವಮೊಗ್ಗ, ತರೀಕೆರೆ, ದಾವಣಗೆರೆ ರೈತರ ಜೀವನಾಡಿಯಾಗಿರುವ ಭದ್ರಾ ನದಿ ಈಗ ಸದ್ದಿಲ್ಲದೇ ಸುವರ್ಣ ಮಹೋತ್ಸವ ಆಚರಿಸಿಕೊಂಡಿದೆ. ಈ ಬಾರಿ ನಿರೀಕ್ಷೆಗೂ ಮುನ್ನ ಅಣೆಕಟ್ಟು ಭರ್ತಿಯಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

ಅಣೆಕಟ್ಟು ನಿರ್ಮಾಣಕ್ಕೆ 1946ರಲ್ಲಿ ಆರಂಭಗೊಂಡ ಕಾಮಗಾರಿ ಪೂರ್ಣಗೊಂಡಿದ್ದು 1962ರಲ್ಲಿ. 1965ರಿಂದ ಎಡ ಮತ್ತು ಬಲದಂಡೆ ನಾಲೆಗಳಿಗೆ ನೀರು ಬಿಡಲಾಗುತ್ತಿದೆ. ರೂ. 33.65 ಕೋಟಿ ಅಂದಾಜು ವೆಚ್ಚದಿಂದ ಆರಂಭಗೊಂಡ ಕಾಮಗಾರಿ ಪೂರ್ಣಗೊಂಡಾಗ ಇದರ ವೆಚ್ಚ ರೂ. 149 ಕೋಟಿ. 186 ಅಡಿ ಎತ್ತರದ ಈ ಅಣೆಕಟ್ಟೆಯಲ್ಲಿ ನೀರು ಸಂಗ್ರಹಣ ಸಾಮರ್ಥ್ಯ 71.53 ಟಿಎಂಸಿ.

ಉಗಮ ಸ್ಥಾನ: ಚಿಕ್ಕಮಗಳೂರಿನ ಕುದುರೆಮುಖ ಸಮೀಪದ ಗಂಗಡಿಕ್ಲ್ಲಲು ಮತ್ತು ನೆಲ್ಲಿಬೀಡು ಪ್ರದೇಶವೇ ಇದರ ಉಗಮ ಸ್ಥಾನವಾದರೂ, ಕಚ್ಚಿಗೆ ಹೊಳೆ, ಲಕ್ಯಾ ಹೊಳೆ, ಕುದುರೆಮುಖ ಹೊಳೆ, ಸಿಂಗಾರ್ಸ್‌ ಮತ್ತು ಕುಣಿಯಾ ಹೊಳೆ ಭದ್ರೆಗೆ ಜೀವ ತುಂಬುತ್ತಿವೆ.

1,05,570 ಹೆಕ್ಟೇರ್ ಪ್ರದೇಶಕ್ಕೆ ನೀರು: ಜಲಾಶಯದ ಬಲದಂಡೆ ನಾಲೆ ಶಿವಮೊಗ್ಗ ಮತ್ತು ಭದ್ರಾವತಿ ತಾಲ್ಲೂಕಿನಲ್ಲಿ 77.24 ಕಿ.ಮೀ ಹರಿದು 8,300 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿದೆ. 103 ಕಿ.ಮೀ ಉದ್ದದ ಬಲದಂಡೆ ನಾಲೆ ಭದ್ರಾವತಿ, ತರೀಕೆರೆ, ದಾವಣಗೆರೆ ತಾಲ್ಲೂಕಿನಲ್ಲಿ 17,274 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಇದರ ಮಧ್ಯೆ ಬಲದಂಡೆಯಿಂದ ವಿಭಾಗವಾದ ಆನವೇರಿ ಶಾಖಾ ಕಾಲುವೆ 66.78 ಕಿ.ಮೀ ಹರಿದು 6,319 ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

ಬಲದಂಡೆ ಮುಖ್ಯ ನಾಲೆ 103 ಕಿ.ಮೀ ಹರಿದ ನಂತರ ದಾವಣಗೆರೆ ಸಮೀಪ ಕವಲೊಡೆಯುತ್ತದೆ. ಇದರಲ್ಲಿ ದಾವಣಗೆರೆ ಕಾಲುವೆ 90.12 ಕಿ.ಮೀ ಹರಿದು 45,623 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಿದರೆ, 48 ಕಿ.ಮೀ ಹರಿಯುವ ಮಲೇಬೆನ್ನೂರು ಶಾಖಾ ಕಾಲುವೆ ಅಚ್ಚುಕಟ್ಟು ಪದೇಶ 23,774 ಹೆಕ್ಟೇರ್ ಪ್ರದೇಶವನ್ನು ಹಸಿರಾಗಿಸಿದೆ.

ದಾವಣಗೆರೆ ಮತ್ತು ಮಲೇಬೆನ್ನೂರು ಶಾಖಾ ಕಾಲುವೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬಳಸಿ ಬಿಟ್ಟಂತಹ ನೀರು ಸದುಪಯೋಗ ಮಾಡಿಕೊಳ್ಳುವ ಉದ್ದೇಶದಿಂದ ದೇವರಬೆಳೆಕೆರೆ ಬಳಿ ಪಿಕಪ್ ಡ್ಯಾಂ ನಿರ್ಮಾಣ ಮಾಡಲಾಗಿದೆ. ಇದರ 33 ಕಿ.ಮೀ ಉದ್ದದ ಬಲದಂಡೆ ನಾಲೆ ಮತ್ತು 26.20 ಕಿ.ಮೀ ಉದ್ದದ ಬಲದಂಡೆ ನಾಲೆ 4,310 ಕಿ.ಮೀ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಒಟ್ಟಾರೆ ಭದ್ರಾದಿಂದ ಹೊರ ಬೀಳುವ ನೀರು 366 ಕಿ.ಮೀ ಹರಿದು 1,05,570 ಹೆಕ್ಟೇರ್ ಪ್ರದೇಶವನ್ನು ಹಸಿರಾಗಿಸಿದೆ.

`ಈ ಹಿಂದೆ ಭದ್ರಾ ಅಣೆಕಟ್ಟೆಯಿಂದ ನೀರು ಸೋರಿಕೆಯಾಗುತ್ತಿತ್ತು. ಆದ್ದರಿಂದ ಅಣೆಕಟ್ಟೆ ನೀರನ್ನು ಖಾಲಿ ಮಾಡಿ, ದುರಸ್ತಿ ಮಾಡಲು ರೂ. 40 ಕೋಟಿ ಯೋಜನೆ ರೂಪಿಸಲಾಗಿತ್ತು. ಇದರಿಂದ ರೈತರಿಗೆ ಉಂಟಾಗುವ ಕಷ್ಟ ತಪ್ಪಿಸಲು ದೆಹಲಿಯಿಂದ ತಜ್ಞರನ್ನು ಕರೆಸಿ ಕೇವಲ ರೂ. 30-35 ಲಕ್ಷ ವೆಚ್ಚದಲ್ಲಿ ದುರಸ್ತಿ ಮಾಡಿಸಲಾಗಿತ್ತು. ಅಣೆಕಟ್ಟೆಯಲ್ಲಿ ಕಡಿಮೆ ನೀರು ಸಂಗ್ರಹವಾದಾಗಲೆಲ್ಲಾ ಹೋರಾಟ ನಡೆಸಿ ನಮ್ಮ ಹಕ್ಕನ್ನು ಪ್ರತಿಷ್ಠಾಪಿಸಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನಮಗೆ ಬೇಕಿರುವ 72 ಟಿಎಂಸಿ ನೀರನ್ನು ಬಿಟ್ಟು, ಹೆಚ್ಚುವರಿ ನೀರನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಬಳಸಿಕೊಳ್ಳಲಿ.
 

ಈ ಬಗ್ಗೆ ನಮ್ಮ ತಕರಾರಿಲ್ಲ. ಸುಮಾರು 40 ವರ್ಷಗಳಿಂದ ಭದ್ರಾ ಅಚ್ಚುಕಟ್ಟು ರೈತರ ಪರವಾಗಿ ಹೋರಾಟ ನಡೆಸುತ್ತಾ ಬಂದಿದ್ದೇನೆ. ನಮ್ಮ ಜತೆ ಹೋರಾಟ ನಡೆಸಿದ್ದ ಹಲವರು ಈಗ ನಮ್ಮ ಜತೆಗಿಲ್ಲ. ಸುವರ್ಣ ಮಹೋತ್ಸವ ಸಂಭ್ರಮದ ಬಗ್ಗೆ ನಾನೇನೂ ಹೇಳುವುದಿಲ್ಲ. ನಾನು ಸಾಮಾನ್ಯ ರೈತ. ಈ ಬಗ್ಗೆ ಅಧಿಕಾರಿಗಳು, ಶಾಸಕರು, ಸಚಿವರು ಗಮನಹರಿಸಬೇಕು' ಎನ್ನುತ್ತಾರೆ ನೀರಾವರಿ ತಜ್ಞ ನರಸಿಂಹಪ್ಪ.

ಭದ್ರಾ ವನ ನಿರ್ಮಾಣಕ್ಕೆ ಯೋಜನೆ
ಲಾಶಯದಲ್ಲಿ ಅಳವಡಿಸ ಲಾಗಿರುವ ಟರ್ಬೈನ್‌ಗಳನ್ನು ಬದಲಿಸಿ ಹೊಸ ಟರ್ಬೈನ್‌ಗಳನ್ನು ಅಳವಡಿಸುವ ಕಾಮಗಾರಿ ಕರ್ನಾಟಕ ವಿದ್ಯುತ್ ನಿಗಮ ವತಿಯಿಂದ ನಡೆಯುತ್ತಿದೆ. ಜುಲೈ ತಿಂಗಳಲ್ಲೇ ಭದ್ರಾ ಅಣೆಕಟ್ಟು ತುಂಬಿರುವುದು ಇದೇ ಮೊದಲು. ಇದು ರೈತರಲ್ಲಿ ಸಂತಸ ಮೂಡಿಸಿದೆ. 50 ವರ್ಷ ಪೂರೈಸಿರುವ ಜಲಾಶಯದಲ್ಲಿ ಯಾವುದೇ ಸಮಸ್ಯೆಯಿಲ್ಲ. ವಾರ್ಷಿಕ ನಿರ್ವಹಣೆ ಸರಿಯಾಗಿ ನಡೆಯುತ್ತಿದೆ. ಅಣೆಕಟ್ಟೆಗೆ ಬಣ್ಣದ ದೀಪಗಳನ್ನು ಅಳವಡಿಸಿರುವುದರಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಭದ್ರಾ ವನ ನಿರ್ಮಿಸಬೇಕೆಂಬ ಆಲೋಚನೆ ಇತ್ತು. ಅದು ಸಾಕಾರಗೊಳ್ಳಲಿಲ್ಲ. ಈಗ ನೀರಾವರಿ ಇಲಾಖೆಯಿಂದ ಯೋಜನೆ ಸಿದ್ಧಪಡಿಸಲಾಗುತ್ತಿದೆ.
- ಪ್ರಶಾಂತ್, ಸಹಾಯಕ ಕಾರ್ಯನಿರ್ವಹಣಾ ಎಂಜಿನಿಯರ್, ಭದ್ರಾ ಜಲಾಶಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT