ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ದಾರಿಗೆ ರೈಲ್ವೆ ಇಲಾಖೆಯ ತಡೆಗೋಡೆ

Last Updated 14 ಫೆಬ್ರುವರಿ 2011, 8:50 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿಯ ರೈಲ್ವೆ ನಿಲ್ದಾಣ ಸಮೀಪದ ಗದ್ದೆಗಳಲ್ಲಿ ಈ ಬಾರಿ ಕಬ್ಬು ಹುಲುಸಾಗಿ ಬೆಳೆದಿದೆ. ಸಕ್ಕರೆ ಕಾರ್ಖಾನೆ ಈ ಬಾರಿ ಪ್ರತಿ ಟನ್ ಕಬ್ಬಿಗೆ  2 ಸಾವಿರ ರೂಪಾಯಿ ದರ ಪ್ರಕಟಿಸಿದ ಖುಷಿ ಸುದ್ದಿ ರೈತರಿಗೆ ತಲುಪವಷ್ಟರಲ್ಲೇ ರೈಲ್ವೆ ಇಲಾಖೆ ರೈತರು ಹೊಲಗಳಿಗೆ ಸಾಗುವ ಮಾರ್ಗದಲ್ಲಿ ತಡೆ ಗೋಡೆಗಳನ್ನು ನಿರ್ಮಿಸಿ ಕಬ್ಬು ಬೆಳೆಗಾರರ ಆಸೆಯ ಮೇಲೆ ತಣ್ಣೀರೆರೆಚಿದೆ.

ರೈಲ್ವೆ ಇಲಾಖೆಯ ದುಡುಕಿನ ನಿರ್ಧಾರದಿಂದಾಗಿ ರೈತರು  ಹೊಲಗಳಿಗೆ ಹೋಗಿ ಬರಲು ದಾರಿಯೇ ಇಲ್ಲವಾಗಿದೆ. ತೋಟದಲ್ಲಿ ಬೆಳೆದು ನಿಂತಿರುವ ಕಬ್ಬನ್ನು ಕಟಾವು ಮಾಡಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿ ಕೊಂಡಿದ್ದಾರೆ. ರೈಲ್ವೆ ನಿಲ್ದಾಣ ಬಳಿಯಲ್ಲಿರುವ 60 ಎಕರೆ ಕಬ್ಬಿನ ಗದ್ದೆಗೆ ತೆರಳಲು ಒಂದೇ ದಾರಿ ಇದೆ. ರೈಲು ಸಂಚಾರಕ್ಕೆ ತೊಂದರೆ ಆಗುತ್ತಿದೆ ಎನ್ನುವ ನೆಪ ಮಾಡಿ ರೈಲ್ವೆ ಇಲಾಖೆಯು ದಾರಿಯಲ್ಲಿ ತಡೆ ಗೋಡೆ ನಿರ್ಮಿಸಿದೆ. ಹೀಗಾಗಿ ಕೊಯ್ಲಿಗೆ ಬಂದಿರುವ ಬೆಳೆಯನ್ನು  ಕಟಾವು ಮಾಡಲಾಗದೆ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರು ತೊಂದರೆ ಅನುಭವಿಸಬೇಕಾಗಿದೆ.  

ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅತ್ತ ರೈತಪರ ಹೋರಾಟ ಮಾಡುತ್ತಿದ್ದರೆ, ಇತ್ತ ರೈಲ್ವೆ ಇಲಾಖೆ ಅಧಿಕಾರಿಗಳು ರೈತರ ಜಮೀನಿಗೆ ದಾರಿ ಇಲ್ಲದಂತೆ ಮಾಡಿದ್ದಾರೆ. ಪ್ರತಿ ಟನ್ ಕಬ್ಬಿಗೆ ರೂ. 2 ಸಾವಿರ ಬೆಲೆ ನಿಗದಿಯಾಗಿದೆ. ಕಬ್ಬು ಕೊಯ್ಲು ಮಾಡಿ ಸಾಗಿಸಲು ಸಾಧ್ಯವಾಗದೆ ರೈಲ್ವೆ ಇಲಾಖೆ ಅಧಿಕಾರಿಗಳು ರೈತರ ಗಮನಕ್ಕೆ ತಾರದೆ ಏಕಾಏಕಿ ತಡೆಗೋಡೆ ನಿರ್ಮಿಸಿದ್ದಾರೆ. ರೈಲ್ವೆ ನಿಲ್ದಾಣಕ್ಕೆ ಭೂಮಿ ನೀಡಿದ ರೈತರು ಈಗ ತಮ್ಮ ಜಮೀನಿಗೆ ಹೋಗಿ ಬರಲು ಇಲಾಖೆಯ ಅನುಮತಿಗೆ ಕಾಯುವಂತಾಗಿದೆ. ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗದೆ ಹತಾಶರಾಗಿದ್ದಾರೆ.

ರೈತರು ರೈಲ್ವೆ ಇಲಾಖೆಗೆ ಜಮೀನು ನೀಡಿದ್ದರಿಂದ 1995 ಆಗಸ್ಟ್ 25ರಂದು ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದ ಉನ್ನತ ಅಧಿಕಾರಿಗಳೇ  ಕೃಷಿ ಚಟುವಟಿಕೆ ನಿರ್ವಹಿಸಲು ರೈತರಿಗೆ 15 ಅಡಿ ದಾರಿಗೆ ಅನುಮತಿ ನೀಡಿದ್ದಾರೆ. ಅನುಮತಿ ನೀಡಿರುವ ಪತ್ರವನ್ನು   ತೋರಿಸಿದರೂ ಇಲ್ಲಿಗೆ ವರ್ಗವಾಗಿ ಬಂದಿರುವ ಅಧಿಕಾರಿಗಳು ಅನಗತ್ಯ ಸಬೂಬು ನೀಡಿ ಮನವಿ ನಿರಾಕರಿಸಿದ್ದಾರೆ. ತಹಸೀಲ್ದಾರರಿಗೆ, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಾಗೂ ಸಂಸದೆ ಜೆ. ಶಾಂತಾ ಅವರಿಗೂ ಮನವಿ ಮಾಡಿದ್ದಾರೆ. ತಹಸೀಲ್ದಾರ ಹಾಗೂ ಹೂಡಾ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ರೈಲ್ವೆ ಅಧಿಕಾರಿಗಳಿಗೆ ಪ್ರಸ್ತಾಪ ಸಲ್ಲಿದ್ದಾರೆ.

ರೈತರಿಗೆ ತೊಂದರೆ ನೀಡಬಾರದು ಎಂದು ಸಂಸದೆ ಜೆ. ಶಾಂತಾ 2010ರ ಡಿಸೆಂಬರ್ 30ರಂದು ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದಾರೆ. ಆದಾಗ್ಯೂ ಇಲಾಖೆ ಅಧಿಕಾರಿಗಳು  ಗೋಡೆ ನಿರ್ಮಾಣ ಮಾಡಿದ್ದಾರೆ. ಆ ಭಾಗದಲ್ಲಿ ಹಳಿಯೂ ಇಲ್ಲ. ರೈತರಿಗೆ 15 ಅಡಿ ದಾರಿ ನೀಡಿದರೂ ಇಲಾಖೆಗೆ ತೊಂದರೆಯಾಗುವುದಿಲ್ಲ. ಇದೆಲ್ಲ ಗೊತ್ತಿದ್ದರೂ ಇಲಾಖೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ. ಕಬ್ಬು ತಲೆ ಮೇಲೆ ಹೊತ್ತುಕೊಂಡು ಸಾಗಿಸಬೇಕಾಗಿದೆ. ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ರೈತ ಕಿಚಿಡಿ ಶ್ರೀನಿವಾಸ ತಿಳಿಸಿದ್ದಾರೆ.

ಶಾಸಕರ ಭೇಟಿ: ಶಾಸಕ ಆನಂದಸಿಂಗ್ ಭಾನುವಾರ  ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು. ಅಧಿಕಾರಿಗಳಿಂದಲೂ ಮಾಹಿತಿ ಪಡೆದರು.
 ಉನ್ನತ ಅಧಿಕಾರಿಗಳು  ಸ್ಥಳಕ್ಕೆ ಆಗಮಿಸಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಶಾಶ್ವತ ಪರಿಹಾರ ದೊರೆಯುವ ಸಾಧ್ಯತೆ ಎಂದು  ಶಾಸಕ ಆನಂದಸಿಂಗ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT