ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ನೆರವಿಗೆ ಹೀಗೊಂದು ‘ಸ್ನೇಹತಂಡ’

Last Updated 10 ಡಿಸೆಂಬರ್ 2013, 4:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿದ್ಯಾರ್ಥಿಗಳಿಗೆ ಕಲಿಕೆಯೊಂದಿಗೆ ಒಂದಷ್ಟು ಆಸಕ್ತಿ, ಸಾಮಾಜಿಕ ಕಳಕಳಿ, ಬದ್ಧತೆ ಹಾಗೂ ಪ್ರಾಯೋಗಿಕತೆ ಜೊತೆಗೂಡಿದರೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿರುವ ‘ಸ್ನೇಹತಂಡ’ದಂತಹ ಕ್ರಿಯಾಶೀಲ ಬಳಗ ಜನ್ಮತಾಳುತ್ತದೆ.

ಏನಿದು ಸ್ನೇಹ ತಂಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಕೂಟವೇ ಈ ಸ್ನೇಹ ತಂಡ. ಪ್ರತಿ ವರ್ಷ ವಿಶ್ವವಿದ್ಯಾಲಯಕ್ಕೆ ಹೊಸ ವಿದ್ಯಾರ್ಥಿಗಳು ಬಂದು ಹಳೆಯ ವಿದ್ಯಾರ್ಥಿಗಳ ಒಂದು ತಂಡ ಹೊರಗೆ ಹೋಗುವುದರಿಂದ ವರ್ಷಕ್ಕೊಮ್ಮೆ ಈ ತಂಡ ಪುನರ್ ರೂಪುಗೊಳ್ಳುತ್ತದೆ. 80ರಿಂದ 100 ವಿದ್ಯಾರ್ಥಿಗಳು ಈ ತಂಡದ ಸದಸ್ಯರಾಗಿದ್ದು, ಮೇಲು–ಕೀಳು ಭಾವನೆ ಇಲ್ಲದೆ ಎಲ್ಲರೂ ಸ್ವಯಂ ಸೇವಕರಾಗಿ ದುಡಿಯುವುದು ಈ ತಂಡದ ವಿಶೇಷವಾಗಿದೆ.

ವರ್ಷವಿಡೀ ರೈತಾಪಿ ವರ್ಗಕ್ಕೆ ಅಗತ್ಯವಿರುವ ಸಣ್ಣ ಸಣ್ಣ ಕೃಷಿ ತಂತ್ರಜ್ಞಾನಗಳ ಬಗ್ಗೆ ಅಧ್ಯಯನ ನಡೆಸುವ ತಂಡ, ಅದನ್ನು ಪ್ರಯೋಗ ರೂಪಕ್ಕೆ ಇಳಿಸಿ ಅದರಲ್ಲಿ ಯಶಸ್ಸು ಕಾಣುತ್ತಲೇ ಅದರ ಉಪಯೋಗವನ್ನು ರೈತ ಸಮೂಹಕ್ಕೆ ವರ್ಗಾಯಿಸುವ ಕೆಲಸ ಮಾಡುತ್ತದೆ. ವಿವಿಯ ಆವರಣದಲ್ಲಿ ಪ್ರತಿ ವರ್ಷ ಸೆಪ್ಟಂಬರ್‌ನಲ್ಲಿ ನಡೆಯುವ ವಾರ್ಷಿಕ ಹಬ್ಬ ಕೃಷಿ ಮೇಳವನ್ನು ವೇದಿಕೆಯನ್ನಾಗಿಸಿಕೊಂಡು ಅಲ್ಲಿಗೆ ಬರುವ ರೈತರಿಗೆ ತಮ್ಮಲ್ಲಿನ ಜ್ಞಾನವನ್ನು ಸ್ನೇಹ ತಂಡದ ಗೆಳೆಯರು ಹಂಚಿಕೊಳ್ಳುತ್ತಾರೆ.

ಇದೀಗ ಸ್ನೇಹ ತಂಡಕ್ಕೆ 10ರ ಹರೆಯ. ಈ ತಂಡದ ರೂವಾರಿಗಳು 2004ರಲ್ಲಿ ವಿವಿಯ ವಿದ್ಯಾರ್ಥಿಗಳಾಗಿದ್ದ ಉಲ್ಲಾಸ ಕುಮಾರ್ ಹಾಗೂ ದಿವಂಗತ ರಮೇಶ್ ಪವಾರ. ಅವರ ಯೋಚನೆಗೆ ಸ್ಪಷ್ಟ ರೂಪು ನೀಡಿ ಹೀಗೊಂದು ತಂಡ ರೂಪುಗೊಳ್ಳಲು ಬೆನ್ನೆಲುಬಾಗಿ ನಿಂತವರು ವಿವಿಯ ಅಂದಿನ ಕೃಷಿ ವಿಭಾಗದ ಡೀನ್ ಡಾ.ಮಹದೇವ ಚಟ್ಟಿ. ಸ್ನೇಹ ತಂಡ ಈಗ ತನ್ನ ನಿರಂತರ ಕಾರ್ಯಚಟುವಟಿಕೆಗಳಿಂದ ಅಗಾಧತೆ ಪಡೆದಿದ್ದು, ವಿಶ್ವವಿದ್ಯಾಲಯ ವ್ಯಾಪ್ತಿಯ ರೈತಾಪಿ ಸಮುದಾಯದಲ್ಲಿಯೂ ಪರಿಚಿತವಾಗಿದೆ.

‘ನಾವೂ ಬೆಳೆಯೋಣ, ರೈತರನ್ನೂ ಬೆಳೆಸೋಣ’ ಎಂಬುದು ಸ್ನೇಹ ತಂಡದ ಧ್ಯೇಯ. ಕೃಷಿ ಮೇಳವಲ್ಲದೆ ವಿವಿಯ ಬಾನುಲಿ ಕೇಂದ್ರದ ಮೂಲಕ ರೈತರಿಗೆ ಮಾಹಿತಿ ಹಂಚುವುದು, ರೈತರ ಜಮೀನುಗಳಿಗೆ ತೆರಳಿ ಅವರೊಂದಿಗೆ ಚರ್ಚಿಸುವುದು. ರೈತರ ಸಮಸ್ಯೆ ಹಾಗೂ ಅವುಗಳ ಪರಿಹಾರದ ಬಗ್ಗೆ ಅರಿವು ಮೂಡಿಸಲು ನಾಟಕಗಳನ್ನು ಏರ್ಪಡಿಸುವುದು, ವನಮಹೋತ್ಸವ ಆಚರಣೆ, ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ, ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಪುಸ್ತಕ ಪ್ರಕಟಣೆ, ಪ್ರತಿ ತಿಂಗಳು ಸದಸ್ಯರ ಹುಟ್ಟುಹಬ್ಬ ಆಚರಿಸುವುದು ತಂಡದ ವಾರ್ಷಿಕ ವೇಳಾಪಟ್ಟಿಯಲ್ಲಿರುವ ಕಾರ್ಯಕ್ರಮಗಳಾಗಿವೆ.

ಸ್ನೇಹತಂಡದ ಯಶಸ್ಸು: ಅಜೋಲ್ಲಾ ಬಳಕೆಯ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಉತ್ಪಾದನೆ ಪಡೆಯುವ ತಾಂತ್ರಿಕತೆ, ಕೃಷಿಯಲ್ಲಿನ ಮಿತ್ರ ಕೀಟಗಳನ್ನು ರಕ್ಷಿಸಿ ಹಾನಿಕಾರಕ ಕೀಟಗಳ ಬಾಲಕತ್ತರಿಸುವ ಪ್ರಕ್ರಿಯೆ, ಮಣ್ಣು ಇಲ್ಲದೆ ಸಸ್ಯಗಳಿಗೆ ಪೋಷಕಾಂಶ ಒದಗಿಸಿ ಬೆಳೆ ಬೆಳೆಯುವ ಪದ್ಧತಿ (ಹೈಡ್ರೋಫೋನಿಕ್ಸ್) ಕುರಿತ ಮಾಹಿತಿ. ಮಡಕೆಯಲ್ಲಿ ಜೇನು ಸಾಕಣೆ, ಒಣ ಭೂಮಿಯಲ್ಲಿ ಸುಧಾರಿತ ಕಳೆ ನಿಯಂತ್ರಕ, ಬೀಜ ಮತ್ತು ಗೊಬ್ಬರ ಹರಡುವ ಸಾಧನ  ಅಭಿವೃದ್ಧಿ, ಇಲಿ ಮತ್ತು ಅಳಿಲು ನಿಯಂತ್ರಣ ಸಾಧನಗಳು, ಬಡವರ ಬಳಕೆಗೆ ಬಿದಿರಿನ ಫ್ರಿಡ್ಜ್, ರೇಷ್ಮೆ ಗೂಡಿನ ಗುಂಜು ತೆಗೆಯುವ ಸರಳ ತಾಂತ್ರಿಕತೆ, ತೆಂಗಿನಲ್ಲಿ ಕಪ್ಪುತಲೆ ಕಂಬಳಿ ಹುಳದ ನಿಯಂತ್ರಣ, ಬಸವನ ಹುಳುವಿನ ಸಮಗ್ರ ನಿರ್ವಹಣೆ, ತೆಂಗಿನ ನುಸಿ ಬಾಧೆ ಹಾಗೂ ನಿರ್ವಹಣೆ, ಶ್ರೀ ಪದ್ಧತಿ, ಲಘು ಪೋಷಕಾಂಶಗಳ ಬಳಕೆ, ಶೇಂಗಾದಲ್ಲಿ ಎಲೆಚುಕ್ಕಿ ರೋಗ ನಿರ್ವಹಣೆ, ಪಾರ್ಥೇನಿಯಂನಿಂದ ರಸಗೊಬ್ಬರ ತಯಾರಿಕೆ, ರಾಸುಗಳಲ್ಲಿ ಕೆಚ್ಚಲು ಬಾವು ನಿಯಂತ್ರಣದ ಸರಳ ವಿಧಾನ ಸೇರಿದಂತೆ ಇಲ್ಲಿಯವರೆಗೆ ನೂರಾರು ತಾಂತ್ರಿಕತೆಗಳನ್ನು ರೈತರಿಗೆ ವರ್ಗಾಯಿಸುವಲ್ಲಿ ಸ್ನೇಹ ತಂಡ ಯಶಸ್ಸು ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT