ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮೇಲೆ ಲಾಠಿಪ್ರಹಾರ ಘಟನೆಕಾರ್ಯಕರ್ತರ ಪ್ರತಿಭಟನೆ ಎಚ್ಚರಿಕೆ.

Last Updated 29 ಮಾರ್ಚ್ 2011, 8:45 IST
ಅಕ್ಷರ ಗಾತ್ರ

ಕೊಪ್ಪಳ: ಉದ್ಯೋಗ ಖಾತರಿ ಯೋಜನೆಯ ಕೂಲಿ ಹಣ ಪಾವತಿಸುವಂತೆ ಹೋರಾಟ ನಡೆಸಿದ್ದ ರೈತರ ಮೇಲೆ ಲಾಠಿ ಪ್ರಹಾರ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕ್ರಮ ಜರುಗಿಸುವಂತೆ ಕರ್ನಾಟಕ ರಾಜ್ಯ ರೈತ ಮತ್ತು ಸ್ವಸಹಾಯ ಸ್ತ್ರೀಶಕ್ತಿ ಸೇನೆಯ ರಾಜ್ಯ ಘಟಕ ಒತ್ತಾಯಿಸಿದೆ.ಈ ಘಟನೆಗೆ ಸಂಬಂಧಿಸಿದಂತೆ ಶೀಘ್ರವೇ ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ವಿವಿಧ ಭಾಗಗಳಿಂದ ಸಂಘಟನೆಯ 50 ಸಾವಿರ ಜನ ಕಾರ್ಯಕರ್ತರು ನಗರಕ್ಕೆ ಆಗಮಿಸಿ ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸುವರು ಎಂದು ಸಂಘಟನೆಯ ರಾಜ್ಯ ಅಧ್ಯಕ್ಷ ಎಚ್.ಎಂ. ಮಹೇಶ್ವರ ಸ್ವಾಮಿ ಎಚ್ಚರಿಸಿದ್ದಾರೆ.
 

ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆಯನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.ಲಾಠಿ ಪ್ರಹಾರ ನಡೆದ ದಿನದಂದು ಅನೇಕ ರೈತರು, ಅದರಲ್ಲೂ ರೈತ ಮಹಿಳೆಯರು ಚಿನ್ನಾಭರಣ ಕಳೆದುಕೊಂಡಿದ್ದಾರೆ. ಸದರಿ ಚಿನ್ನಾಭರಣಗಳನ್ನು ಮರಳಿ ನೀಡಲು ಕ್ರಮ ಕೈಗೊಳ್ಳಬೇಕು. ಲಾಠಿ ಏಟಿಗೆ ಅನೇಕ ರೈತರು ಸಂಕಷ್ಟದಲ್ಲಿದ್ದು ದುಡಿಯಲು ಅಸಮರ್ಥರಾಗಿದ್ದಾರೆ. ಆದರೆ, ಈ ರೈತರೇ ಮನೆಗೆ ಆಧಾರವಾಗಿರುವ ಹಿನ್ನೆಲೆಯಲ್ಲಿ ದುಡಿಯುವ ಕೈಗಳಿಲ್ಲದೇ ಅವರ ಕುಟುಂಬಗಳು ತೊಂದರೆಯಲ್ಲಿವೆ. ಹೀಗಾಗಿ ಇಂತಹ ರೈತರ ಕುಟುಂಬಗಳಿಗೆ ಕೆಲ ಅವಧಿವರೆಗೆ ಪ್ರತಿ ತಿಂಗಳು ಧನ ಸಹಾಯ ಮಾಡಬೇಕು ಎಂದೂ ಅವರು ಸರ್ಕಾರವನ್ನು ಆಗ್ರಹಿಸಿದರು.
 

ಈ ಎಲ್ಲ ಬೇಡಿಕೆಗಳನ್ನು ಶೀಘ್ರದಲ್ಲಿಯೇ ಈಡೇರಿಸುವಂತೆ ಒತ್ತಾಯಿಸಲಾಗುವುದು. ಅಲ್ಲದೇ, ಸಂಘಟನೆಯ ಕಾರ್ಯಕಾರಿಣಿಯಲ್ಲಿ ದಿನಾಂಕ ನಿಗದಿಪಡಿಸಿ ಆ ದಿನದಂದು ನಗರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 50 ಸಾವಿರ ಜನ ಕಾರ್ಯಕರ್ತರು ಆಗಮಿಸಿ, ಪ್ರತಿಭಟನೆ ನಡೆಸಲಾಗುವುದು ಎಂದೂ ಅವರು ಹೇಳಿದರು.ಲಾಠಿ ಪ್ರಹಾರ ನಡೆದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತುಗೊಳಿಸಬೇಕು. ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ಸಮಗ್ರ ತನಿಖೆ ನಡೆಸಬೇಕು.

ರೈತರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು. ದೌರ್ಜನ್ಯ ಕುರಿತಂತೆ ಲೋಕಾಯುಕ್ತರಿಂದ ತನಿಖೆ ನಡೆಸಬೇಕು ಎಂದೂ ಅವರು ಒತ್ತಾಯಿಸಿದರು.ಇದಕ್ಕೂ ಮುನ್ನ ಬನ್ನಿಕಟ್ಟಿಯಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು, ಅಶೋಕ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಘೋಷಣೆ ಕೂಗಿದರು. ಬೆಳಗಾವಿ ಹಾಗೂ ದಾವಣಗೆರೆ ಜಿಲ್ಲೆಯಿಂದ ಆಗಮಿಸಿದ್ದ ಸಂಘಟನೆಯ ಕಾರ್ಯಕರ್ತರಿದ್ದ ಪ್ರತಿಭಟನೆ ನೇತೃತ್ವವನ್ನು ಬಸವರಾಜ ಶೀಲವಂತರ, ಟಿ.ಯು.ಸಿ.ಐ. ರಾಜ್ಯ ಅಧ್ಯಕ್ಷ ಡಿ.ಎಚ್. ಪೂಜಾರ ಮತ್ತಿತರರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT