ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ವಲಸೆ: ಕೃಷಿ ಬೆಳವಣಿಗೆಗೆ ಮಾರಕ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಳೆಯುತ್ತಿರುವ ನಗರ, ಪಟ್ಟಣಗಳ ಸುತ್ತಲಿನ ಕೃಷಿ ಭೂಮಿಗಳು ಕಣ್ಮರೆಯಾಗುತ್ತಿವೆ. ಅವು ರಸ್ತೆ, ಲೇ ಔಟ್, ಅಪಾರ್ಟ್‌ಮೆಂಟ್ ಕೈಗಾರಿಕಾ ಕಾಲನಿಗಳಾಗಿ ಮಾರ್ಪಾಡಾಗುತ್ತಿವೆ.

ನಗರಗಳ ಬಡವರು ಮತ್ತು ಗ್ರಾಮೀಣ ಯುವಕರು ಕೂಲಿಗಾಗಿ ನಗರಗಳನ್ನು ಅವಲಂಬಿಸುತ್ತಿದ್ದಾರೆ. ಗ್ರಾಮೀಣ ಯುವ ಜನರಂತೂ ಸದಾ ನಗರಗಳ ಕಡೆಗೇ ನೋಡುತ್ತಿದ್ದಾರೆ. ಇದು ಈ ಹೊತ್ತಿನ ವಾಸ್ತವ.

ಕೆಲಸ ಹುಡುಕಿಕೊಂಡು ದೇಶದ ಉದ್ದಗಲದಲ್ಲಿ ಲಕ್ಷಾಂತರ ಮಂದಿ ರೈತರು,ರೈತ ಕಾರ್ಮಿಕರು ಪಟ್ಟಣಗಳತ್ತ ವಲಸೆ ಹೋಗಿದ್ದಾರೆ. ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ 2015ರ ವೇಳೆಗೆ ಭಾರತದಲ್ಲಿ ಸುಮಾರು 40 ಕೋಟಿ ಜನರು ಬೇಸಾಯದಿಂದ  ವಿಮುಖರಾಗುತ್ತಾರೆ.
 
ಅವರೆಲ್ಲ ನಗರಗಳಲ್ಲಿ ಯಾವುದಾದರೂ ಕೆಲಸ ಹುಡುಕಿಕೊಂಡು ಅಲ್ಲೇ ಉಳಿಯುತ್ತಾರೆ ಎಂದು ವರದಿ ಹೇಳಿದೆ. ಇದಕ್ಕೆ ಪೂರಕವಾಗಿ ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ದೇಶದಲ್ಲಿ ಶೇ 40ರಷ್ಟು ರೈತರು ಈಗಾಗಲೇ ಬೇಸಾಯದಿಂದ ರೋಸಿ ಹೋಗಿದ್ದಾರೆ.
 
ಬೇಸಾಯ ಬಿಟ್ಟು ಬೇರೇನಾದರೂ ಕೆಲಸ ಹುಡುಕುವ ಇಂಗಿತ ಅವರದು. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಬೇಸಾಯದಿಂದ ವಿಮುಖರಾದರೆ ಆಹಾರ ಭದ್ರತೆಯ ಗತಿ ಏನು?
ಇನ್ನು ಕೆಲ ಅಧ್ಯಯನಗಳ ಪ್ರಕಾರ ತಮಿಳುನಾಡಿನ ಶೇ 70ರಷ್ಟು, ಪಂಜಾಬಿನ 65ರಷ್ಟು, ಉತ್ತರ ಪ್ರದೇಶದ 55ರಷ್ಟು ರೈತರು ಬೇಸಾಯದ ಬವಣೆಗಳಿಗೆ ಪರಿಹಾರ ಕಾಣದೆ ಪಟ್ಟಣಗಳತ್ತ ಗುಳೇ ಹೋಗುವ ಸನ್ನಾಹದಲ್ಲಿದ್ದಾರೆ.
 
ಹೀಗಾದರೆ  `ಕೃಷಿ ನಿರಾಶ್ರಿತ~ರು ಎಂಬ ಹೊಸದೊಂದು ವರ್ಗವೇ ದೇಶದಲ್ಲಿ ಸೃಷ್ಟಿಯಾಗಲಿದೆ. 

 ಆಹಾರ ಭದ್ರತೆ, ಪೌಷ್ಟಿಕಾಂಶಗಳ ಕೊರತೆ, ಹೆಚ್ಚುತ್ತಿರುವ ಶಿಶು ಮರಣ, ಪರಿಸರ ಮಾಲಿನ್ಯ, ಕೋಮು ಗಲಭೆ ಇತ್ಯಾದಿ ಸಮಸ್ಯೆಗಳು ದೇಶದಲ್ಲಿ ಉಲ್ಬಣಗೊಂಡಿವೆ. ಇವಕ್ಕೆಲ್ಲ ಮೂಲ ಕಾರಣ ಬೇಸಾಯ ಕ್ಷೇತ್ರದ ಬಗ್ಗೆ ಸರ್ಕಾರ ತೋರಿಸುತ್ತಿರುವ ನಿರಾಸಕ್ತಿ.
 
ಬೇಸಾಯ ಈಗ ಲಾಭದಾಯಕ ಅಲ್ಲ. ದೇಶದಲ್ಲಿ ಶೇ. 65ರಷ್ಟು ಕುಟುಂಬಗಳು ಬೇಸಾಯವನ್ನು ಅವಲಂಬಿಸಿ ಜೀವನ ನಡೆಸುತ್ತಿವೆ. ಆದರೆ ಅಂಥವರ ಜೀವನ ಮಟ್ಟ ಕುಸಿಯುತ್ತಿದೆ.
 

ಬೇಸಾಯ ತ್ಯಜಿಸಿ ಬೇರೆ ವೃತ್ತಿ ಅವಲಂಬಿಸಿರುವವರು ಮತ್ತೆ ಬೇಸಾಯದತ್ತ ಬರುವ ಸಾಧ್ಯತೆ ಕಡಿಮೆ. ಅಳಿದುಳಿದ ರೈತರು ತಮ್ಮ  ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾರೆ.

ಬೇಸಾಯ ಇಂದು ಯಾರಿಗೂ ಬೇಡದ ವೃತ್ತಿ. ಹೀಗಾಗಿ ಸಮೃದ್ಧವಾಗಿರಬೇಕಿದ್ದ ಹಳ್ಳಿಗಳು ಬೆಂಗಾಡಾಗಿವೆ. ಮಾರ್ಗದರ್ಶನದ ಕೊರತೆಯಿಂದಾಗಿ ಬೇಸತ್ತ ರೈತರ ಮನವೊಲಿಸಿ ಮತ್ತೆ ಹಳ್ಳಿಗಳನ್ನು ಸಮೃದ್ಧವಾಗಿ ನಿರ್ಮಿಸಬೇಕಿದೆ.
 

ಸ್ವಾವಲಂಬಿ ಜೀವನದ ಕೇಂದ್ರಗಳಾಗಿದ್ದ ಹಳ್ಳಿಗಳು ರಾಜಕೀಯ ಪಕ್ಷಗಳು ಕೊಡುವ ಸಣ್ಣಪುಟ್ಟ ಆಮಿಷಗಳಿಗೆ ಕಾದು ಕುಳಿತಿವೆ. ದುಡಿಯುವ ಶಕ್ತಿ ಇರುವ ಯುವಕರು ಪಟ್ಟಣಗಳ ಕಡೆಗೆ ಗುಳೆ ಹೋಗುತ್ತಿರುವುದರಿಂದ ಬೇಸಾಯದ ಪ್ರಗತಿಗೆ ಮಾರಕವಾಗಿದೆ. ಉತ್ಪಾದನೆಯೂ ಕಡಿಮೆಯಾಗಿದೆ.

ಏನು ಮಾಡಬೇಕು?: ಕೃಷಿ ವಿಶ್ವವಿದ್ಯಾಲಯಗಳು ಯುವಜನರಿಗಾಗಿ ಪ್ರತ್ಯೇಕ ತರಬೇತಿ ಹಾಗೂ ತಾಂತ್ರಿಕ ನೆರವು ಒದಗಿಸಬೇಕು.  ಕೃಷಿ ವಿಶ್ವವಿದ್ಯಾಲಯಗಳು ಯುವ ರೈತರ ಅಗತ್ಯಗಳನ್ನು ಮರೆತಿವೆ. ಕೃಷಿಯಲ್ಲಿ ತೊಡಗಿರುವ ಯುವಕರಿಗೆ  ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಮಾಡಬೇಕಿದೆ.
 
ಕೃಷಿ ವಿಜ್ಞಾನಿಗಳು ರೈತರ ಕ್ರಿಯಾಶೀಲತೆ ಹಾಗೂ ಅನುಭವಗಳನ್ನು ಗುರುತಿಸಿ ಮಾರ್ಗದರ್ಶನ ಮಾಡಬೇಕು. ಕೃಷಿ ವಿಜ್ಞಾನಿಗಳು ರೈತರ ಜಮೀನಿನಲ್ಲಿ ತಮ್ಮ ಬಹು ಸಮಯವನ್ನು ಕಳೆಯಬೇಕು ಹಾಗೂ ಹಳ್ಳಿಗಳಲ್ಲಿ ವಾಸ ಮಾಡಬೇಕು
 ರೈತರಿಗೆ ಸಮಾಜದಲ್ಲಿ ಸರಿಯಾದ ಸ್ಥಾನಮಾನವಿಲ್ಲ.
 

ಸಮಾಜವೂ ರೈತರನ್ನು ಅಸಡ್ಡೆಯಿಂದ ಕಾಣುವುದನ್ನು ನಿಲ್ಲಿಸಬೇಕು. ಬೇಸಾಯಗಾರರ ಕುಟುಂಬಗಳಿಗೆ  ಹೆಣ್ಣು ಕೊಡಲು ಹಿಂದೇಟು ಹಾಕುವ ಪರಿಸ್ಥಿತಿ ಬದಲಾಗಬೇಕು. ಯುವ ರೈತರು ನಗರಗಳಿಗೆ ಹೋಗದಂತೆ ತಡೆಯಬೇಕು. ಹೊಸದಾಗಿ ಬೇಸಾಯ ಮಾಡುವವರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ.

ಸಾವಯವ ಕೃಷಿಗೆ ಒತ್ತುಕೊಟ್ಟು ಮುಖ್ಯ ಆಹಾರ ಧಾನ್ಯಗಳ ಬೆಳೆಗಳನ್ನು ಬೆಳೆಯಬೇಕಿದೆ. ರಾಸಾಯನಿಕ ಕೃಷಿಗೆ ತಿಲಾಂಜಲಿ ಹೇಳಬೇಕು. ಸ್ವಾವಲಂಬಿ ಬೇಸಾಯದತ್ತ ಹೆಜ್ಜೆ ಹಾಕಬೇಕು.
 
ರೈತರು ಸಹಕಾರ ಸಂಘಗಳನ್ನು ಆರಂಭಿಸಿ ಕೃಷಿ ಉತ್ಪನ್ನಗಳನ್ನು ಖರೀದಿ ಹಾಗೂ ಮಾರಾಟ ಮಾಡುವಂತಾಗಬೇಕು. ಈ ಕುರಿತು ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾಲಯಗಳು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು. ಕೃಷಿಯಲ್ಲಿ ಹೊಸ ಅವಿಷ್ಕಾರಗಳನ್ನು ನಡೆಸಲು ಬೆಂಬಲ ನೀಡಬೇಕು.

ಶಿಕ್ಷಣ ಪದ್ಧತಿಯಲ್ಲಿ ಕೃಷಿ ಆಧಾರಿತ ಕೋರ್ಸುಗಳನ್ನು ರೂಪಿಸಬೇಕು, ಕೃಷಿ ಬದುಕು ಕಟ್ಟಿಕೊಳ್ಳುವುದಕ್ಕೆ ಅನುಕೂಲವಾಗುವಂತೆ ಶಿಕ್ಷಣ ನೀತಿಗಳನ್ನು ಸರ್ಕಾರ ಕಾರ್ಯಗೊಳಿಸಬೇಕು.
 
ಕೈಗಾರಿಕೆ ಅಥವಾ ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಭೂಮಿ ಸ್ವಾಧೀನ ಮಾಡಿಕೊಳ್ಳಬಾರದು. ಕೃಷಿ ಭೂಮಿಯನ್ನು ಕೃಷಿಯೇತರ ಕೆಲಸಕ್ಕಾಗಿ ಪರಿವರ್ತನೆ ಮಾಡಕೂಡದು. ಕೃಷಿ ಆಧಾರಿತ ಆರ್ಥಿಕ ಅಭಿವೃದ್ಧಿಗೆ ಆದ್ಯತೆ ಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT