ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಶೋಷಣೆ: ಆಕ್ರೋಶ

ಏಪ್ರಿಲ್ 15ರವರೆಗೆ ಕಾಲುವೆಗೆ ನೀರು ಬಿಡಿ
Last Updated 13 ಡಿಸೆಂಬರ್ 2012, 9:04 IST
ಅಕ್ಷರ ಗಾತ್ರ

ಸುರಪುರ: ನಾರಾಯಣಪುರ ಆಣೆಕಟ್ಟೆಯಿಂದ ಕಾಲುವೆಗೆ ಫೆ. 20ರಂದು ನೀರು ಹರಿಸುವುದನ್ನು ಸ್ಥಗಿತಗೊಳಿಸುವ ನಿರ್ಧಾರದ ಬಗ್ಗೆ ಪುನರ್ ಪರಿಶೀಲಿಸಲು  ಪ್ರಾಮಾಣಿಕ ಪ್ರಯತ್ನ ಆಗಿಲ್ಲ. ಇದರಿಂದ ರೈತ ಆತಂಕಗೊಂಡಿದ್ದಾನೆ. ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಅಧಿಕಾರಿಗಳು ರೈತರ ಶೋಷಣೆ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ್ ಆರೋಪಿಸಿದರು.

ಇಲ್ಲಿನ ತಮ್ಮ ನಿವಾಸದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಏಪ್ರಿಲ್ 15ರ ವರೆಗೆ ಕಾಲುವೆಗೆ ನಿರು ಹರಿಸುವಂತೆ ಐದು ದಿನಗಳವರೆಗೆ ಸುರಪುರದಿಂದ ನಾರಾಯಣಪುರದವರೆಗೆ ತಮ್ಮ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಪಾದಯಾತ್ರೆ ಹಮ್ಮಿಕೊಂಡಿತ್ತು. ಭಾರಿ ಯಶಸ್ಸು ಕಂಡ ಈ ಪಾದಯಾತ್ರೆ ರೈತರಲ್ಲಿ ಜಾಗ್ರತೆ ಮೂಡಿಸಿತು. ಅಂತೆಯೇ ಸಾವಿರಾರು ರೈತರು ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದರು ಎಂದು ವಿವರಿಸಿದರು.

ಈ ಪಾದಯಾತ್ರೆಯ ಬಗ್ಗೆ ಪಕ್ಷದ ಹಿರಿಯ ಮುಖಂಡರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರೈತರು ನಮ್ಮ ಬೆನ್ನು ಹಿಂದೆ ನಿಂತಿದ್ದಾರೆ. ರೈತರ ಕಷ್ಟಗಳಿಗೆ ಸದಾ ಸ್ಪಂದಿಸುತ್ತೇನೆ. ರೈರಿಗಾಗಿ ಯಾವುದೇ ಹೋರಾಟಕ್ಕೂ ಸಿದ್ದ. ನಮ್ಮ ಪಕ್ಷದ ಕಾರ್ಯಕರ್ತರೂ, ಸಾರ್ವಜನಿಕರು, ರೈತರು ಪಾದಯಾತ್ರೆಯ ಯಶಸ್ಸಿನಲ್ಲಿ ಶ್ರಮಿಸಿದ್ದಾರೆ. ಅವರಿಗೆಲ್ಲ ನನ್ನ ಕೃತಜ್ಞತೆಗಳು ಎಂದರು.

ಪಾದಯಾತ್ರೆಯಿಂದ ದಿಗಿಲುಗೊಂಡ  ಸಚಿವರು ಧಿಡೀರ್ ಅಧಿಕಾರಿಗಳ ಸಭೆ ನಡೆಸಿದರು. ನಂತರ ರೈತರನ್ನು ಉದ್ದೇಶಿಸಿ ಮಾತನಾಡಿ, ಮಾರ್ಚ್ 10ರ ವರೆಗೆ ನೀರು ಹರಿಸುವುದಾಗಿ ಭರವಸೆ ನೀಡಿದ್ದರು. ಕೊರತೆಯ ನೀರನ್ನು ಕೋಯ್ನಾ ಆಣೆಕಟ್ಟೆಯಿಂದ ತರಿಸುವ ಮಾತುಗಳನ್ನಾಡಿದ್ದರು. ಈ ಬಗ್ಗೆ ಸಚಿವರು ಬೆಳಗಾವಿ ಅಧಿವೇಶನದಲ್ಲಿ ಚಕಾರವೆತ್ತದಿರುವುದು ರೈತ ವಿರೋಧಿ ಧೋರಣೆ ಎಂದು ಟೀಕಿಸಿದರು.

ನೀರು ಹರಿಸುವ ಬಗ್ಗೆ ನೀರಾವರಿ ಅಧಿಕಾರಿಗಳನ್ನು ವಿಚಾರಿಸಿದರೆ, ಅದು ಸಚಿವರ ಹೇಳಿಕೆಯಾಗಿದೆ. ಈ ಬಗ್ಗೆ ನಮಗೆ ಯಾವುದೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ರೈತರನ್ನು ಗೊಂದಲಕ್ಕೆ ಸಿಲುಕಿಸಿದೆ. ಈಗಾಗಲೇ ಸಚಿವರ ಭರವಸೆಯನ್ನು ನಂಬಿ ಬಿತ್ತನೆ ಮಾಡಿರುವ ರೈತ ನಷ್ಟದ ಅಂಜಿಕೆಯಲ್ಲಿ ಕಾಲ ಕಳೆಯುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗ ಆಣೆಕಟ್ಟೆಯಲ್ಲಿ ಇರುವ ನೀರಿನಲ್ಲಿಯೆ ವಾರಾಬಂದಿ ಮೂಲಕ ಕಾಲುವೆಗೆ ನೀರು ಹರಿಸುವುದು ಸೂಕ್ತವಲ್ಲ. ಇದರಿಂದ ರೈತ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುತ್ತಾನೆ. ಎಲ್ಲಿಂದಾದರೂ ನೀರು ತನ್ನಿ. ಶತಾಯಗತಾಯ ಪ್ರಯತ್ನ ಮಾಡಿ ಏಪ್ರಿಲ್ 10ರ ವರೆಗೆ ನೀರು ಹರಿಸಿ ಎಂದು ಆಗ್ರಹಿಸಿದರು.

ನಾರಾಯಣಪುರ ಆಣೆಕಟ್ಟೆ ವ್ಯಾಪ್ತಿಯಲ್ಲಿ ಇಷ್ಟೆಲ್ಲಾ ಹೋರಾಟ ನಡೆದರೂ ಸರ್ಕಾರ ತೆಪ್ಪಗೆ ಕುಳಿತಿರುವುದು ಖಂಡನೀಯ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ವಿರೋಧ ಪಕ್ಷದವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಂಡು ಮಹಾರಾಷ್ಟ್ರ ಸರ್ಕಾರವನ್ನು ಸಂಪರ್ಕಿಸಿ ಕೋಯ್ನಾದಿಂದ ನೀರು ಬಿಡಿಸಬೇಕಿತ್ತು ಎಂದು ಹೇಳಿದರು.

ರೈತರ ಪಂಪಸೆಟ್‌ಗಳಿಗೆ ಕನಿಷ್ಠ 6 ಗಂಟೆ ವಿದ್ಯುತ್ ನೀಡುವ ಬದಲಿಗೆ ಕೇವಲ 3 ಗಂಟೆ ನೀಡಲಾಗುತ್ತಿದೆ. ಇದರಿಂದ ಪಂಪಸೆಟ್ ಅವಲಂಬಿಸಿರುವ ರೈತರ ಬೆಳೆಗಳು ಬಾಡುತ್ತಿವೆ. ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ಮನೋಭಾವನೆಯ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. ಕಾರಣ ದಿನಕ್ಕೆ ಕನಿಷ್ಠ 6 ಗಂಟೆ ವಿದ್ಯುತ್ ಒದಗಿಸಬೇಕು ಎಂದು ಒತ್ತಾಯಿಸಿದರು.

ಕಾಲುವೆಗೆ ಎಷ್ಟು ದಿನಗಳವರೆಗೆ ನೀರು ಹರಿಸುತ್ತೀರಿ ಎಂಬ ಬಗ್ಗೆ ಸ್ಪಷ್ಟ ದಿನಾಂಕ ಪ್ರಕಟಿಸಬೇಕು. ರೈತರ ಬೆಳೆ ಕಾಪಾಡುವಲ್ಲಿ ಮುತುವರ್ಜಿ ವಹಿಸಬೇಕು. ಇಲ್ಲದಿದ್ದರೆ ರಸ್ತೆ ತಡೆ, ಅಮರಣಾಂತ ಉಪವಾಸದಂತಹ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸೂಲಪ್ಪ ಕಮತಗಿ, ವಿಠಲ ಯಾದವ್, ಮಾನಪ್ಪ ಸೂಗೂರ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT