ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಂಘಟನೆಗೆ ಕೆಪಿಆರ್‌ಎಸ್‌ ಅಭಿಯಾನ

Last Updated 24 ಸೆಪ್ಟೆಂಬರ್ 2013, 9:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಯೋಜನೆ ವಿಳಂಬ ಸೇರಿದಂತೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಹಾಗೂ ಬೇಡಿಕೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಕರ್ನಾಟಕ ಪ್ರಾಂತ ರೈತ ಸಂಘವು (ಕೆಪಿಆರ್‌ಎಸ್‌) ವಿವಿಧ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದೆ.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟಕ್ಕೆ ಮಾತ್ರವೇ ಸೀಮಿತವಾಗದೇ ಪ್ರತಿ ಗ್ರಾಮಗಳಿಗೂ ತಲುಪಲು, ರೈತರನ್ನು ಸಂಘಟಿಸಲು  ವಿವಿಧ ಕಾರ್ಯ­ಕ್ರಮ­ಗಳನ್ನು ಹಮ್ಮಿಕೊಳ್ಳುತ್ತಿದೆ. ಸೆ.27ರಿಂದ ಆರಂಭವಾಗಲಿರುವ ಅಭಿಯಾನವು ಮುಂದಿನ ಒಂದು ತಿಂಗಳವರೆಗೆ ನಡೆ­ಯಲಿದೆ. ನಂತರ ಜಿಲ್ಲೆಯ ಆರು ತಾಲ್ಲೂಕು­ಗಳ ಗ್ರಾಮ ಘಟಕಗಳ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.

ರಾಜಧಾನಿ ಸಮೀಪದಲ್ಲಿದ್ದರೂ ಜಿಲ್ಲೆ ರೈತರು ಹಲ ರೀತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತಪರ ಹೋರಾಟದ ಮಾದರಿಯಲ್ಲೇ ಚಳ­ವಳಿಯನ್ನು ಸಂಘಟಿಸುವ ಉದ್ದೇಶದಿಂದ ಹಲ ಕಾರ್ಯಕ್ರಮ ಹಮ್ಮಿಕೊಳ್ಳ­ಲಾಗು­ತ್ತಿದೆ ಎಂದು ಕೆಪಿಆರ್‌ಎಸ್‌ ಸಂಘ­ಟನೆಯ ಮುಖಂಡರು ಹೇಳುತ್ತಾರೆ.

ಸೆಪ್ಟೆಂಬರ್‌ 27ರಂದು ಜಿಲ್ಲೆಯಾ­ದ್ಯಂತ 8 ಜಾಥಾ ಕಾರ್ಯಕ್ರಮ ಕೈಗೊಳ್ಳ­ಲಿ­ದ್ದೇವೆ. ಅಂದು ಚಿಕ್ಕಬಳ್ಳಾ­ಪುರದಲ್ಲಿ ನಡೆಯುವ ‘ಎಡಪಕ್ಷಗಳ ಪರ್ಯಾಯ ರಾಜಕೀಯ’ ಸಮಾವೇಶ­ದಲ್ಲಿ ಪಾಲ್ಗೊಂಡು ನಂತರ ಜಾಥಾ ಮೂಲಕ ಗ್ರಾಮಗಳಲ್ಲಿ ಸಂಚರಿಸಲಿದ್ದೇವೆ ಎಂದು ಕೆಪಿಆರ್‌ಎಸ್‌ ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಚನ್ನರಾಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಅಕ್ಟೋಬರ್ 8ರಂದು ಬೆಂಗಳೂರಿ­ನಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳ­ಲಾಗುವುದು. ಅಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದರ ಮೂಲಕ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾ­ಯಿಸ­ಲಾಗುವುದು  ಎಂದು ತಿಳಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಜಿ.ವಿ.ಅಶ್ವತ್ಥನಾರಾಯಣರೆಡ್ಡಿಯವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಅಕ್ಟೋಬರ್‌ 2ರಂದು ಚಿಂತಾಮಣಿ ತಾಲ್ಲೂಕಿನ ಬೈರೇಬಂಡಾ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರದ್ಧಾಂಜಲಿ ಕಾರ್ಯ­ಕ್ರಮದಲ್ಲಿ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವುದರ ಜೊತೆಜೊತೆಗೆ ಮುಂದಿನ ದಿನಗಳಲ್ಲಿ ರೈತ ಚಳವಳಿ ಹೇಗೆ ಮುನ್ನಡೆಯಬೇಕು ಎಂಬುದರ ಬಗ್ಗೆಯೂ ಚರ್ಚಿಸಲಿದ್ದೇವೆ. ಅಂದು ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ಜಿಲ್ಲಾ ಮತ್ತು ರಾಜ್ಯಮಟ್ಟದ ಸಮಾವೇಶಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಗೋಪಿನಾಥ್‌ ತಿಳಿಸಿದರು.

ಅಕ್ಟೋಬರ್‌ 11 ಮತ್ತು 12ರಂದು ಚಿಂತಾಮಣಿ ತಾಲ್ಲೂಕಿನ ಕೋಣಕುಂಟ್ಲ ಗ್ರಾಮದಲ್ಲಿ ಎರಡು ದಿನಗಳ ಕಾಲ ಅಧ್ಯಯನ ಶಿಬಿರ ನಡೆಸಲಾಗುವುದು.  ಎಸ್‌ಎಫ್‌ಐ, ಡಿಎಸ್‌ಎಸ್‌, ಕೆಪಿ­ಆರ್‌ಎಸ್‌ ಸಂಘಟನೆಗಳು ಜನ್ಮತಾಳಲಿಕ್ಕೆ ಪ್ರಮುಖ ಪಾತ್ರವಹಿಸಿದ ಗ್ರಾಮದಲ್ಲಿ ಹಲವು ವರ್ಷಗಳ ಬಳಿಕ ಜಿಲ್ಲಾಮಟ್ಟದ ಅಧ್ಯಯನ ಶಿಬಿರ ನಡೆಸಲಾಗುವುದು. ಆರು ತಾಲ್ಲೂಕುಗಳಿಂದ ಸುಮಾರು 250 ಮಂದಿ ರೈತರು ಭಾಗವಹಿಸಲಿದ್ದಾರೆ.

ರೈತ, ಕೃಷಿ, ಪ್ರಚಲಿತ ವಿದ್ಯಮಾನ, ಪ್ರಸ್ತುತ ಸಮಸ್ಯೆಗಳು ಮತ್ತು ಭವಿಷ್ಯದ ಸವಾಲುಗಳ ಬಗ್ಗೆ ಅರಿವು ಮೂಡಿಸ­ಲಾಗುವುದು ಎಂದು ಸಂಘಟನೆಯ ಸಹಕಾರ್ಯದರ್ಶಿ ಬಿ.ಎನ್‌.­ಮುನಿಕೃಷ್ಣಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT