ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ

Last Updated 24 ಸೆಪ್ಟೆಂಬರ್ 2013, 5:26 IST
ಅಕ್ಷರ ಗಾತ್ರ

ಹರಿಹರ:  ತಾಲ್ಲೂಕಿನಲ್ಲಿ ಹಾದು ಹೋಗಿರುವ ಹರಿಹರ-ಕೊಟ್ಟೂರು ರೈಲ್ವೆ ಮಾರ್ಗದಲ್ಲಿರುವ ರೈತರ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ರೈಲ್ವೆ ಮಾರ್ಗದ ಪರಿಶೀಲನೆಗಾಗಿ ಸೋಮವಾರ ಜಿಲ್ಲಾಧಿಕಾರಿ ಎಸ್.ಟಿ. ಅಂಜನ್ ಕುಮಾರ್ ಅವರು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಗಂಗನರಸಿ, ದೀಟೂರು, ಕೆಂಚನಹಳ್ಳಿ, ಕುರುಬರಹಳ್ಳಿ, ಹೊಟ್ಟೆಗಾನಹಳ್ಳಿ ಮೂಲಕ ಹಾದು ಹೋಗಿರುವ ಹರಿಹರ-– ಕೊಟ್ಟೂರು ರೈಲ್ವೆ ಮಾರ್ಗವನ್ನು ಪರಿಶೀಲಿಸಿದರು. ನಂತರ, ರೈತರ ಸಮಸ್ಯೆ ಹಾಗೂ ಅಹವಾಲುಗಳನ್ನು ಸ್ವೀಕರಿಸಿದರು.

‘ಹರಿಹರ-– ದಾವಣಗೆರೆ ಮಧ್ಯೆದ ರೈಲ್ವೆ ಲೈನ್ ಕ್ರಾಸಿಂಗ್‌ಗೆ ಬದಲಾಗಿ ಬೈಪಾಸ್ ರಸ್ತೆ ನಿರ್ಮಿಸಲು ಅಗತ್ಯವಾದ ಜಮೀನನ್ನು ರೈತರಿಂದ ವಶಪಡಿಸಿಕೊಂಡಿದ್ದು, ಆ ಭಾಗದ ಜಮೀನುಗಳಿಗೆ ಎಕರೆಗೆ ` 27 ಲಕ್ಷ ಪರಿಹಾರ ನೀಡಿದ್ದಾರೆ. ಅದೇ, ನಮ್ಮ ಜಮೀನುಗಳಿಗೆ ಕೇವಲ ` 8 ಲಕ್ಷ ನೀಡುವ ಮೂಲಕ ತಾರತಮ್ಯ ಎಸಗಿದ್ದಾರೆ. ನಮ್ಮ ಜಮೀನಿಗೂ ಹೆಚ್ಚುವರಿ ಪರಿಹಾರ ದೊರಕಿಸಿಕೊಡಬೇಕು’ ಎಂದು ರೈತರಾದ ಎಸ್.ಜಿ. ಶಿವಕುಮಾರ್, ಕೆ.ಜಿ. ನಾರಪ್ಪ, ಜಯಣ್ಣ, ಕೆ.ಎಚ್. ಸಿದ್ದಪ್ಪ, ಕೆ.ಜಿ. ಬಸವರಾಜ, ಎಚ್.ಪಿ. ರಾಜಪ್ಪ, ಶಿವಣ್ಣ, ಜಗದೀಶ್ ಆಗ್ರಹಿಸಿದರು.

ರೈಲ್ವೆ ಮಾರ್ಗ ಮತ್ತು ಜಮೀನಿನ ಮಧ್ಯೆ ಬಸಿಕಾಲುವೆ, ಸರ್ವಿಸ್ ರಸ್ತೆ ನಿರ್ಮಿಸಿಕೊಡಬೇಕು. ರೈಲ್ವೆ ಕಾಮಗಾರಿಯಿಂದಾಗಿ ತುಂಡಾದ ಜಮೀನುಗಳಿಗೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಹಾಕಿಕೊಳ್ಳಲು ಸಬ್ ವೇ ಗಳನ್ನು ನಿರ್ಮಿಸಬೇಕು. ಸೇತುವೆ ನಿರ್ಮಾಣವಾದ ಸ್ಥಳದಲ್ಲಿ ಸುಸಜ್ಜಿತವಾದ ರಸ್ತೆ, ಸೂಚನಾ ಫಲಕ, ಪ್ರತಿಫಲಕಗಳನ್ನು ಕೂಡಲೇ ಹಾಕಿಕೊಡಬೇಕು. ರೈಲ್ವೆ ಕಾಮಗಾರಿ ಸಂದರ್ಭದಲ್ಲಿ ಹಾಳಾದ ಕೆಇಬಿ ಕಂಬಗಳನ್ನು ಪುನಃ ಸ್ಥಾಪಿಸಿ, ವೈರಿಂಗ್ ಮಾಡಿಕೊಡಬೇಕು ಎಂದು ಗಿರಿಜಮ್ಮ, ರಾಜಪ್ಪ ಭಾನುವಳ್ಳಿ, ಬಸಪ್ಪ ವೇಲೂರು, ಗುಡ್ಡಪ್ಪ, ಭಾನುವಳ್ಳಿ ಮಹೇಶಪ್ಪ, ನಾಗೇಂದ್ರಪ್ಪ ಒತ್ತಾಯಿಸಿದರು.

ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, 2003ರಿಂದ ಪ್ರಾರಂಭಗೊಂಡ ರೈಲ್ವೆ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಕಳೆದ 10 ವರ್ಷಗಳಿಂದ ರೈತರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಆದರೂ,ಇಲಾಖೆ, ರೈತರಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿದೆ.  ರೈತರ ಪ್ರಾಮಾಣಿಕ ಬೇಡಿಕೆಗಳನ್ನು ಪೂರ್ಣಗೊಳಿಸಿ ನಂತರ, ರೈಲ್ವೆ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಅಂಜನ್ ಕುಮಾರ್ ಮಾತನಾಡಿ, ದೊಗ್ಗಳ್ಳಿಯ ಸೇತುವೆ ಕೆಳಗಿನ ರಸ್ತೆ ದುರಸ್ತಿ, ಗಂಗನರಸಿಯ ಲೆವೆಲ್ ಕ್ರಾಸಿಂಗ್ ಬಳಿ ಗೇಟ್, ಪ್ರತಿ 20 ಮೀಟರ್‌ಗೆ ನೀರಾವರಿ ಮಾರ್ಗ ಕಲ್ಪಿಸುವ ಸಬ್‌ವೇ ನಿರ್ಮಾಣ, ಸರ್ವಿಸ್ ರಸ್ತೆ ನಿರ್ಮಾಣ ಮಾಡುವಂತೆ ರೈಲ್ವೆ ಇಲಾಖೆಯ ಉಪ ಮುಖ್ಯ ಎಂಜಿನಿಯರ್ ಎಂ.ಎಸ್.ಬನಸೋಡಿ ಅವರಿಗೆ ತಿಳಿಸಿದರು.

ರೈತರ ಅನುಕೂಲಕ್ಕೆ ತಕ್ಕಂತೆ ಅವರಿಗೆ ಅಗತ್ಯವಿರುವ ಕಡೆ ನೂತನ ಕಂಬ, ಎಲ್.ಟಿ. ವೈರಿಂಗ್ ಹಾಗೂ ವಿದ್ಯುತ್ ಸಂಪರ್ಕದ ದುರಸ್ತಿಯನ್ನು ಶೀಘ್ರವೇ ಮಾಡಿಕೊಡಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿಯರ್ ಬಿ. ರುದ್ರಪ್ಪ ಅವರಿಗೆ ಸೂಚಿಸಿದರು.

ಉಪವಿಭಾಗಾಧಿಕಾರಿ ಎಸ್. ನಾಗರಾಜ್, ರೈಲ್ವೆ ಇಲಾಖೆಯ ಮುಖ್ಯ ಎಂಜಿನಿಯರ್ ಪಿ.ಡಿ. ಶರ್ಮಾ, ಎಇಇ ಎಚ್. ಶಿವಕುಮಾರ್, ಜೆಇಇಗಳಾದ ಶಶಿಧರ್, ಎಲ್.ಡಿ. ಅನ್ಸಾರಿ, ಪಿ. ಗೋಪಿನಾಥ್, ಪಿಡಬ್ಲೂವೈ ಪ್ರದೀಪ್ ಗೌಡ, ಭೂಸ್ವಾಧಿನಾಧಿಕಾರಿ ಮಲ್ಲಪ್ಪ ಪೂಜಾರ್, ಕಂದಾಯ ನಿರೀಕ್ಷಕ ರಾಮಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಎಚ್.ಬಿ. ಹೇಮಂತ್ ಕುಮಾರ್, ಸಿಪಿಐ ಮಂಜುನಾಥ್ ನಲವಾಗಲ್, ಗ್ರಾಮಾಂತರ ಪಿಎಸ್ಐ ಎಚ್.ಸುನೀಲ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT