ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಮಸ್ಯೆಗೆ ಸಿಗಲಿದೆ ಮುಕ್ತಿ...

ಜಾನುವಾರು ಮಾರುಕಟ್ಟೆ ಕಾಮಗಾರಿ ಆರಂಭ
Last Updated 29 ಜುಲೈ 2013, 6:21 IST
ಅಕ್ಷರ ಗಾತ್ರ

ಮಾಯಕೊಂಡ: ಪಾಳುಬಿದ್ದ ಕಟ್ಟಡಗಳು, ದುರ್ವಾಸನೆ ಬೀರುವ ಹಾಳು ಗೋದಾಮುಗಳು, ಕಾಡು ಪ್ರಾಣಿಗಳ ಆಶ್ರಯವಾಗಿ ಬೆಳೆದು ನಿಂತ ಜಾಲಿ ತುಂಬಿದ್ದ ಮಾಯಕೊಂಡದ ಎಪಿಎಂಸಿ ಉಪ ಸಮಿತಿ ಆವರಣ ಹೊಸ ರೂಪ ಪಡೆದುಕೊಳ್ಳುವ ಕಾಲ ಬಂದಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ನಬಾರ್ಡ್‌ನಿಂದ ಅನುದಾನ ಪಡೆದು ವಿವಿಧ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದೆ.
ಮಾಯಕೊಂಡದ ಸರ್ವೇ ನಂ. 16/1ರಲ್ಲಿ 19 ಎಕರೆ 5 ಗುಂಟೆ ಜಮೀನಿನಲ್ಲಿ ಎಪಿಎಂಸಿ ಆರಂಭಿಸಿ, ಗೋದಾಮು, ಮಳಿಗೆ ಸ್ಥಾಪಿಸಲಾಗಿತ್ತು. ಸಾರಿಗೆ ಸಂಪರ್ಕದ ಕೊರತೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಆರಂಭಗೊಂಡು 15 ವರ್ಷಗಳಾದರೂ ಅಭಿವೃದ್ಧಿ ಕಾಣಲಿಲ್ಲ. ಸರ್ಕಾರ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸುವಾಗ ಬಿಟ್ಟರೆ ಬೇರೆ ಯಾವಾಗಲೂ ರೈತರು ಮತ್ತು ವರ್ತಕರು ಎಪಿಎಂಸಿ ಪ್ರಾಂಗಣದತ್ತ ಸುಳಿದಿರಲಿಲ್ಲ. ವಹಿವಾಟುಗಳಿಂದ ದೂರವೇ ಉಳಿದ ಎಪಿಎಂಸಿ ಉಪ ಸಮಿತಿ ಆವರಣ ಹಾಳು ಕೊಂಪೆಯಾಗಿತ್ತು. ಅಲ್ಲಿ ನಿರ್ಮಿಸಲಾದ ಗೋದಾಮಿನ ಕಿಟಿಕಿ, ಬಾಗಿಲು ಮುರಿದು ಬಿದ್ದು, ಶಿಥಿಲಾವಸ್ಥೆಯಲ್ಲಿದ್ದವು. ಎಪಿಎಂಸಿ ಪ್ರಾಂಗಣ ಅಕ್ರಮ ಚಟುವಟಿಕೆಗಳ ಅಡ್ಡೆ ಮತ್ತು ಅಲೆಮಾರಿಗಳಿಗೆ ಆಶ್ರಯ ತಾಣವಾಗಿತ್ತು. ಇದೀಗ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಿಂದ ಜಾನುವಾರು ಮಾರುಕಟ್ಟೆ ಆರಂಭಿಸಲು ಕಾಮಗಾರಿ ಆರಂಭಿಸಲಾಗಿದೆ. ಅದು ಮುಕ್ತಾಯ ಹಂತದಲ್ಲಿದೆ.

ಇದಕ್ಕಾಗಿ ಪ್ರಾಂಗಣದ ಸುತ್ತಲೂ 1000 ಮೀ. ಉದ್ದದ ಕಾಂಪೌಂಡ್ ನಿರ್ಮಿಸಲಾಗಿದೆ. ರೂ  75 ಲಕ್ಷದ ವೆಚ್ಚದಲ್ಲಿ 160ಗಿ35 ಮತ್ತು 72ಗಿ35 ವಿಸ್ತೀರ್ಣದ ಶೆಡ್ ನಿರ್ಮಿಲಾಗಿದೆ. ಶೆಡ್‌ಗಳಲ್ಲಿ ಗೋದಾಮು ಮತ್ತು ನೀರಿನ ತೊಟ್ಟಿಗಳ ನಿರ್ಮಿಸುವ ಕಾರ್ಯ ಮುಕ್ತಾಯ ಹಂತದಲ್ಲಿದೆ.

ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 50 ಸಾವಿರ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಮುಕ್ತಾಯಗೊಂಡಿದೆ. ರೂ 25 ಲಕ್ಷ ವೆಚ್ಚದಲ್ಲಿ ಧಾನ್ಯ ಸಂಗ್ರಹಣಾ ಗೋದಾಮು ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ.
 
ಗೋದಾಮು ನಿರ್ಮಿಸುವ ವರ್ತಕರಿಗೆ ಸಾಲ ಮತ್ತು ಸಹಾಯಧನ ಲಭ್ಯವಿದೆ. ಇದರಿಂದ ಸ್ಥಳೀಯ ವ್ಯಾಪಾರ ವೃದ್ಧಿಯಾಗಿ ಮಾಯಕೊಂಡ ಹೋಬಳಿಯ ರೈತರಿಗೆ ಅನುಕೂಲವಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಎಪಿಎಂಸಿ ಸದಸ್ಯ ರಾಜೇಂದ್ರ. 

ಎಪಿಎಂಸಿ ಪ್ರಾಂಗಣದ ಜಮೀನಿನಲ್ಲಿ ನಿವೇಶನ ಅಭಿವೃದ್ಧಿಪಡಿಸಿ ಗ್ರಾಮದ ಸುತ್ತಮುತ್ತಲ ವರ್ತಕರಿಗೆ ಕಡಿಮೆ ದರದಲ್ಲಿ ನೀಡಿ ವಾಣಿಜ್ಯ ಮಳಿಗೆ ತೆರೆಯಲು ಪ್ರೋತ್ಸಾಹಿಸುವ ಉದ್ದೇಶವಿದೆ. ಇನ್ನೂ ಯಾರೂ ಮಳಿಗೆಗಳಿಗೆ ಜಾಗ ಖರೀದಿಸಲು ಮತ್ತು ಪರವಾನಗಿ ಪಡೆಯಲು ಮುಂದೆ ಬಂದಿಲ್ಲ ಎನ್ನುತ್ತಾರೆ ಎಪಿಎಂಸಿ ಅಧ್ಯಕ್ಷ ಹೂವಿನ ಮಡುಹಾಲಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT