ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಾಮರಸ್ಯಕ್ಕೆ ಧಕ್ಕೆ: ಖಂಡನೆ

Last Updated 2 ಏಪ್ರಿಲ್ 2013, 4:01 IST
ಅಕ್ಷರ ಗಾತ್ರ

ಮಾಲೂರು: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಉತ್ತರ- ದಕ್ಷಿಣ ಪಿನಾಕಿನಿ ನದಿ ಹೆಸರನ್ನು ಬಳಸಿಕೊಂಡು ಕರ್ನಾಟಕ ಹಾಗೂ ತಮಿಳುನಾಡು ಗಡಿಭಾಗದ ರೈತರ ಸಾಮರಸ್ಯವನ್ನು ಕೆಡುಸುತ್ತಿದ್ದಾರೆ ಎಂದ ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸ್ಥಳೀಯ ಘಟಕದ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಕೃತಿ ದಹಿಸಿದರು.

ಬೆಂಗಳೂರು ನಗರದ ಕೊಳಚೆ ನೀರು ವರ್ತೂರು ಕೋಡಿಯಿಂದ ಮುಗಳೂರು ಕಾಲುವೆ ಮುಖಾಂತರ ತಮಿಳುನಾಡಿಗೆ ಹರಿಯತ್ತಿದೆ. ಜಿಲ್ಲೆಯಲ್ಲಿ ಯಾವುದೇ ನದಿನಾಲೆಗಳು ಇಲ್ಲದೆ ಮಳೆ ಆಶ್ರಯದಿಂದ ರೈತರು ಕೃಷಿ ಚಟುವಟಿಕೆ ನಡೆಸುತಿದ್ದಾರೆ. ಇಲ್ಲಿನ ಜನತೆ ಕುಡಿಯುವ ನೀರು ಇಲ್ಲದೆ ಕಂಗಾಲಾಗಿದ್ದು, ವ್ಯರ್ಥವಾಗಿ ಹರಿದುಹೋಗುತ್ತಿರುವ ಕೊಳಚೆ ನೀರನ್ನು ಸಂಸ್ಕರಿಸಿ ತಾಲ್ಲೂಕಿನ ವಿವಿಧ ಕೆರೆಗಳಿಗೆ ಹರಿಸಲು ಸರ್ಕಾರ ರೂ 70 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಹೇಳಿದರು.

ಗಡಿಭಾಗದ ಕನ್ನಡಿಗರು ಮತ್ತು ತಮಿಳರು ಸಾಮರಸ್ಯದಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ನೀರಿನ ವಿಚಾರದಲ್ಲಿ ವಿಷ ಬೀಜ ಬಿತ್ತಿ ಎರಡೂ ರಾಜ್ಯಗಳ ಜನರ ಮಧ್ಯೆ ಕಿಚ್ಚು ಹಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಬೆಡ್‌ಶೆಟ್ಟಹಳ್ಳಿ ರಮೇಶ್ ಕಿಡಿಕಾರಿದರು.

ಕಾವೇರಿ ಸಮಸ್ಯೆ ಕಡಿಮೆಯಾಗುತ್ತಿದ್ದಂತೆ ಕೊಳಚೆ ನೀರಿನ ವಿಚಾರವನ್ನು ಕೈಗೆತ್ತಿಕೊಂಡು ಜಯಲಲಿತಾ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಕ್ರಮ ಪದ ಬಳಸಿ ತಮ್ಮ ರಾಜಕೀಯ ಸ್ವಾರ್ಥಕ್ಕೆ ಸಾಕ್ಷಿ ತೋರಿಸಿದ್ದಾರೆ. ಪದೆಪದೇ ನೀರಿನ ವಿಚಾರದಲ್ಲಿ ಮೂಗು ತೂರಿಸುತ್ತಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ತಮ್ಮ ವರ್ತನೆ ಬದಲಾವಣೆ ಮಾಡಿಕೊಳ್ಳದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಅಬಣಿ ಶಿವಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್‌ಗೌಡ, ಕಾರ್ಯದರ್ಶಿ ಎ.ಅಶ್ವತ್ಥರೆಡ್ಡಿ, ಉಪಾಧ್ಯಕ್ಷ ಪ್ರಭಾಕರ್, ತಾಲ್ಲೂಕು ಕಾರ್ಯಾಧ್ಯಕ್ಷ ಟಿ.ಇ.ದೇವರಾಜ್, ರೈತ ಮುಖಂಡರಾದ ಮಂಜುನಾಥ್, ನಾರಾಯಣಸ್ವಾಮಿ, ಕಾಟೇರಿ ಮುನಿಸ್ವಾಮಿ, ಅರಳೇರಿ ನಾರಾಯಣಸ್ವಾಮಿ ಭಾಗವಹಿಸಿದ್ದರು. ತಹಶೀಲ್ದಾರ್ ನಂಜಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT