ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸೇವೆಗೆ ಸಜ್ಜಾದ `ಜಾಗರಿ ಪಾರ್ಕ್'

ಮುಧೋಳ: ಸಾವಯವ ಬೆಲ್ಲ ತಂತ್ರಜ್ಞಾನ ಸಂಸ್ಥೆ ಉದ್ಘಾಟನೆ ಇಂದು
Last Updated 2 ಸೆಪ್ಟೆಂಬರ್ 2013, 7:18 IST
ಅಕ್ಷರ ಗಾತ್ರ

ಬಾಗಲಕೋಟೆ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಮುಧೋಳದಲ್ಲಿ ರೂ8 ಕೋಟಿ ಅನುದಾನದಲ್ಲಿ ನಿರ್ಮಾಣವಾಗಿರುವ `ಸಾವಯವ ಬೆಲ್ಲ ತಂತ್ರಜ್ಞಾನ ಸಂಸ್ಥೆ' (ಜಾಗರಿ ಪಾರ್ಕ್) ಇದೇ 2ರಂದು ಉದ್ಘಾಟನೆಗೆ ಸಜ್ಜಾಗಿದೆ.

ಕಬ್ಬು ಬೆಳೆ ಸಂಶೋಧನೆ, ವಿಸ್ತರಣೆ, ಉತ್ಪಾದನೆ, ಸೂಕ್ತ ಮಾರುಕಟ್ಟೆ ಜಾಲಗಳ ಮಾಹಿತಿ ಸಂಗ್ರಹಣೆ ಉದ್ದೇಶ ಹೊಂದಿರುವ 40 ಟನ್ ಸಾಮಾರ್ಥ್ಯದ ಈ ಜಾಗರಿ ಪಾರ್ಕ್ ಅನ್ನು ಧಾರವಾಡ ಕೃಷಿ ವಿಶ್ವವಿದ್ಯಾಲವು ಕೊಲ್ಲಾಪುರ ಮಾದರಿಯ ಸುಧಾರಿತ ಬೆಲ್ಲ ಉತ್ಪಾದಿಸುವ ಗುರಿಯೊಂದಿಗೆ ಜಿಲ್ಲೆಯ ಕಬ್ಬು ಬೆಳೆಗಾರರ ಸೇವೆಗೆ ಸಜ್ಜುಗೊಳಿಸಿದೆ.

ಜಾಗರಿ ಪಾರ್ಕ್ ಕುರಿತು `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಪಾರ್ಕ್‌ನ ಯೋಜನಾಧಿಕಾರಿ ಡಾ.ಚಂದ್ರಶೇಖರ ಸಿ.ಪಿ., `ಉತ್ಕೃಷ್ಟ ಮಟ್ಟದ, ಸ್ವಚ್ಛವಾದ ಮತ್ತು ಆರೋಗ್ಯಪೂರ್ಣವಾದ ಬೆಲ್ಲ ತಯಾರು ಮಾಡುವ ರೂ 65 ಲಕ್ಷ ಮೌಲ್ಯದ `304' ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಿದ ಉಪಕರಣಗಳು ಹಾಗೂ ರೂ 1.6 ಕೋಟಿ ಮೌಲ್ಯದ ಕಬ್ಬು ನುರಿಸುವ, ಬೆಲ್ಲ ಕುದಿಸುವ ಘಟಕ ಇದಾಗಿದೆ' ಎಂದರು.

`ಜಲ ಬೆಲ್ಲ (ಕಾಕ್ವಿ), ಪುಡಿ ಬೆಲ್ಲ, ಪೆಂಡಿಬೆಲ್ಲ ಮತ್ತು ಮೌಲ್ಯ ವರ್ಧಿತ ಬೆಲ್ಲವನ್ನು ಶೇಖರಿಸಲು ಬೇರೆ ಬೇರೆ ಕೋಣೆಗಳು, ಉಗ್ರಾಣ ಮತ್ತು ಗುಣಮಟ್ಟ ನಿಯಂತ್ರಣದ ಪ್ರಯೋಗಾಲಯ ಹಾಗೂ ವಿದ್ಯುತ್ ವ್ಯತ್ಯಯವಾದಾಗ ಸರಿದೂಗಿಸಲು 50 ಕೆ.ವಿ. ಜನರೇಟರನ್ನು ಕೂಡ `ಜಾಗರಿ ಪಾರ್ಕ್'ನಲ್ಲಿ ಅಳವಡಿಸಲಾಗಿದೆ' ಎಂದು ತಿಳಿಸಿದರು. 

`ಅಲ್ಲದೇ, ಮಾರುಕಟ್ಟೆ ಕೋಶ, ಮಾಹಿತಿ ಕೇಂದ್ರ, ಮ್ಯೂಸಿಯಂ, ತರಬೇತಿ ಕೇಂದ್ರ, ರೈತರ ವಸತಿ ಮತ್ತು ಅಡುಗೆ ಮನೆ ಹಾಗೂ ಊಟದ ಕೊಠಡಿಗಳನ್ನು ಒಳಗೊಂಡ ರೂ1.4 ಕೋಟಿ ಮೌಲ್ಯದಲ್ಲಿ ನಿರ್ಮಾಣವಾಗಿರುವ ಕಟ್ಟಡ ಸಹ ಉದ್ಘಾಟನೆಗೆ ಸಿದ್ಧವಾಗಿದೆ' ಎಂದರು.

ಅತ್ಯಧಿಕ ನೀರು ಮತ್ತು ಗೊಬ್ಬರವನ್ನು ಬಳಸಿ ಜಿಲ್ಲೆಯಲ್ಲಿ ಯಥೇಚ್ಛವಾಗಿ ಬೆಳೆಯುತ್ತಿರುವ ಕಬ್ಬಿನಿಂದ ನೆಲ ಜವಳಾಗತೊಡಗಿದ್ದು, ಕೆಲವೇ ವರ್ಷದಲ್ಲಿ ಭೂಮಿ ತನ್ನ ಸತ್ವ ಕಳೆದುಕೊಂಡು ಉಪಯೋಗ ಶ್ಯೂನವಾಗಲಿದೆ ಎಂಬ ಆತಂಕವನ್ನು ಸ್ವಲ್ಪಮಟ್ಟಿಗೆ ತಡೆಯಲು ಈ ನೂತನ ಸಾವಯವ ಬೆಲ್ಲ ತಯಾರಿಕಾ ಘಟಕ ಸಹಾಯಕವಾಗಲಿದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.

ಉದ್ಘಾಟನೆ: ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ ಇದೇ 2 ರಂದು ಬೆಳಿಗ್ಗೆ 11ಕ್ಕೆ  ಮುಧೋಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ `ಜಾಗರಿ ಪಾರ್ಕ್' ಉದ್ಘಾಟಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ, ಸಚಿವೆ ಉಮಾಶ್ರೀ, ಶಾಸಕ ಗೋವಿಂದ ಕಾರಜೋಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT