ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಳಗಾವಿ: `ಮಠಾಧೀಶರೆಲ್ಲ ಸೇರಿಕೊಂಡು ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಮೂಲಕ ಕೃಷಿ ಕ್ಷೇತ್ರದಲ್ಲಿ ಆಂದೋಲನ ಮಾಡಬೇಕು” ಎಂದು ವಿಜಾಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಕರೆ ನೀಡಿದರು.

ನಾಗನೂರ ರುದ್ರಾಕ್ಷಿಮಠ ಹಾಗೂ ಮಹಾತ್ಮ ಗಾಂಧಿ ವಿಶ್ವಸ್ಥ ಮಂಡಳಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ಶ್ರೀಗಳ ನಡಿಗೆ ಕೃಷಿಯ ಕಡೆಗೆ~ ಕೃಷಿ ಅಭಿವೃದ್ಧಿ ಚಿಂತನಾ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

`ರೈತರು ತಾವು ಬಡವರು, ಸೋತವರು ಎಂದು ಹತಾಶರಾಗಬಾರದು. ರೈತರೆಂದೂ ಭಿಕ್ಷುಕರಲ್ಲ; ದೇಶಕ್ಕೆ ಅನ್ನ ನೀಡುವ ರೈತನೇ ನಿಜವಾದ ಮಹಾದಾನಿ. ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಮಠಾಧೀಶರು ದಿಟ್ಟ ಹೆಜ್ಜೆ ಇಡುತ್ತಿರುವುದು ನಾಡಿನ ಭಾಗ್ಯ~ ಎಂದರು.

`ಏನೂ ಇಲ್ಲದ ಮಣ್ಣಿನಿಂದ ಅದ್ಭುತ ಸಂಪತ್ತನ್ನು ರೈತ ತೆಗೆಯುತ್ತಾನೆ. ಒಂದು ಬೀಜವನ್ನು ಬಿತ್ತಿ ಸಾವಿರಾರು ಬೀಜಗಳನ್ನು ಸೃಷ್ಟಿಸುವ ಪವಾಡ ಪುರುಷನಾಗಿದ್ದಾನೆ. ಮಠಗಳೆಲ್ಲ ಕೃಷಿ ಪ್ರಯೋಗ ಶಾಲೆಗಳಾಗಬೇಕು. ಮಠಗಳು ರೈತರಿಗೆ ಆಶ್ರಯ ತಾಣಗಳಾಗಬೇಕು~ ಎಂದರು.

`ರೈತ ಅತ್ಯಂತ ಶ್ರೀಮಂತ. ಆತ ತನ್ನ ಆಹಾರವನ್ನು ತಾನೇ ಬೆಳೆದುಕೊಳ್ಳುವುದರ ಜೊತೆಗೆ ಉಳಿದವರಿಗೂ ಹಂಚುತ್ತಾನೆ. ಆತ ಪರಾವಲಂಬಿ ಆಗಬಾರದು. ಈ ನಿಟ್ಟಿನಲ್ಲಿ ಮಠಾಧೀಶರು ಪರಾಮರ್ಶೆ ಮಾಡಿ ದೇಶವನ್ನು ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಸಬೇಕು~ ಎಂದರು.

ಸಿದ್ಧರಾಮ ಸ್ವಾಮೀಜಿ, ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಜಯಮೃತ್ಯುಂಜಯ ಸ್ವಾಮೀಜಿ, ಕರ್ನಾಟಕ ಕೃಷಿ ಮಿಷನ್ ಅಧ್ಯಕ್ಷ ಡಾ.ಎಸ್.ಎ. ಪಾಟೀಲ, ಬಾಗಲಕೋಟೆ ತೋಟಗಾರಿಕಾ ವಿ.ವಿ. ಕುಲಪತಿ ಡಾ.ಎಸ್. ಬಿ. ದಂಡಿನ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT