ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಲ್ಲಿ ಸ್ವಾಭಿಮಾನ, ಆತ್ಮಸ್ಥೈರ್ಯ ತುಂಬಿರಿ

Last Updated 7 ಫೆಬ್ರುವರಿ 2012, 8:55 IST
ಅಕ್ಷರ ಗಾತ್ರ

ಚಿಕ್ಕೋಡಿ: ದೇಶದ ಜನಸಂಖ್ಯೆ ಶೇ.60ರಷ್ಟಿರುವ ಕೃಷಿಕ ಸಮುದಾಯ ನಾನಾ ಸಮಸ್ಯೆಗಳಿಗೆ ಈಡಾಗಿ ಸಂಕಷ್ಟಕ್ಕೆ ಸಿಲುಕಿದೆ. ಆದರೆ, ಮುಂಬರುವ ದಶಕದಲ್ಲಿ ಜನರು ಮತ್ತು ಸರ್ಕಾರಗಳು ತಮಗೆ ಆಹಾರ ಬೆಳೆದು ನೀಡುವಂತೆ ಕೃಷಿಕನ ಕಾಲಿಗೆ ಎರಗುವ ಸಮಯ ಬರಲಿದೆ ಎಂದು ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ಭವಿಷ್ಯ ನುಡಿದರು.

ಇಲ್ಲಿನ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯು ಕೃಷಿ ಇಲಾಖೆ ಮತ್ತು ಧಾರವಾಡದ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರ ಮಟ್ಟದ ಭವ್ಯ ಕೃಷಿ ಮೇಳದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಲ್ಕಾರು ದಶಕಗಳ ಆಚೆ ಕೃಷಿಯೇ ಎಲ್ಲ ವೃತ್ತಿಗಳಲ್ಲಿ ಶ್ರೇಷ್ಠ ಎನ್ನಲಾಗುತ್ತಿತ್ತು. ಆದರೆ, ಇಂದು ರೈತನ ಮಕ್ಕಳಿಗೆ ಕನ್ಯೆ ಸಿಗುತ್ತಿಲ್ಲ. ಮೂರು ಸಾವಿರ ಸಂಬಳವಿದ್ದರೂ ನೌಕರನಿಗೆ ಹೆಣ್ಣು ಕೊಡುವ ಸಂಪ್ರದಾಯ ಬೆಳೆಯುತ್ತಿದೆ. ಕೋಟ್ಯಧೀಶನಿಗೂ ಅನ್ನ ನೀಡುವವವನು ಕೃಷಿಕನೇ. ಆದರೆ, ಅನ್ನದಾತ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾನೆ.

ಉದ್ಯಮಿ, ಹಣಕಾಸು ಸಂಘಸಂಸ್ಥೆಗಳು ದಿವಾಳಿಯಾದರು. ಯಾವೊಬ್ಬ ಬಂಡವಾಳಶಾಹಿಯೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬೇರೆ ಅಡ್ರೆಸ್‌ನಲ್ಲಿ ಉದ್ಯೋಗ ಆರಂಭಿಸುತ್ತಾರೆ. ಆದರೆ, ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದ ಸ್ವಾಭಿಮಾನಿ ರೈತ ಬ್ಯಾಂಕ್‌ನವರು ಮನೆ ಮುಂದೆ ಬಂದಾಗ ಮಾನಕ್ಕಂಜಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಹೀಗಾಗಿ ಸ್ವಾಭಿಮಾನ ಮತ್ತು

ಜೀವನದ ಮೌಲ್ಯಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತನ ಮಗ ಹೊಲಗಳತ್ತ ಹೊರಳಿ ನೋಡುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ರೈತರಲ್ಲಿ ಸ್ವಾಭಿಮಾನ, ಆತ್ಮಸ್ಥೈರ್ಯ ತುಂಬಿ ಕೃಷಿಯಲ್ಲಿ ಕ್ರಾಂತಿ ಮಾಡಲು ಪ್ರೇರಣೆ ನೀಡುವ ಸಲುವಾಗಿಯೇ ಈ ಮೇಳ ಆಯೋಜಿಸಲಾಗಿದೆ. ಇದಕ್ಕೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆಯೂ ಲಭಿಸಿದೆ ಎಂದು ಹೇಳಿದರು.

ಮೇಳದಲ್ಲಿ ಕೆಎಲ್‌ಇ ಸಂಸ್ಥೆಯು ಸುಮಾರು 10 ಸಾವಿರ ಜನರ ಉಚಿತ ಆರೋಗ್ಯ ತಪಾಸಣೆ ನಡೆಸಿದ್ದು, ಐದು ಲಕ್ಷ ರೂ.ಗಳ ಮೌಲ್ಯದ ಔಷಧಿಗಳನ್ನು ಉಚಿತವಾಗಿ ವಿತರಿಸಿದೆ ಎಂದು ಹೇಳಿದರು. ಕೃಷಿಕ ಮಕ್ಕಳಿಗೆ ಶೈಕ್ಷಣಿಕ ಮಾರ್ಗದರ್ಶಿಯನ್ನೂ ನೀಡಿಲಾಗಿದ್ದು, ಪ್ರತಿ ಎರಡು ವರ್ಷಕ್ಕೊಮ್ಮೆಯಾದರೂ ಇಂತಹ ಮೇಳ ಹಮ್ಮಿಕೊಳ್ಳುವಂತೆ ಕಾರ್ಖಾನೆ ಸಂಚಾಲಕ ಮಂಡಳಿಗೆ ಸೂಚನೆ ನೀಡಿದರು.

ಹಾರ್ನಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ, ಅಥಣಿಯ ಪ್ರಭು ಚೆನ್ನಬಸವ ಸ್ವಾಮೀಜಿ, ಬೊಮ್ಮನಳ್ಳಿಯ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ,ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ಕಾಕಾಸಾಹೇಬ ಪಾಟೀಲ, ಡಿಕೆಎಸ್‌ಎಸ್‌ಕೆ ಸಂಚಾಲಕ ಅಮೀತ ಕೋರೆ,  ಜಿ.ಪಂ ಉಪಾಧ್ಯಕ್ಷೆ ಸುನೀತಾ ಶಿರಗಾಂವಿ, ಕೆಎಲ್‌ಇ ಉಪಾಧ್ಯಕ್ಷ ಅಶೋಕ ಬಾಗೇವಾಡಿ, ಎಸ್‌ಪಿ ಸಂದೀಪ ಪಾಟೀಲ, ಜಿಲ್ಲಾಧಿಕಾರಿ ಅನ್ಬುಕುಮಾರ, ಉಪವಿಭಾಗಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್,  ಅಶೋಕ ಪಾಟೀಲ,ಜೆ.ಎಸ್.ಗುಡಗಂಟಿ ಮೊದಲಾ ದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT