ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಪ್ರತಿಭಟನೆ

ಉಳ್ಳಾಗಡ್ಡಿ ಬೆಲೆ ಕುಸಿತ: ಕಲ್ಲು ತೂರಾಟ
Last Updated 12 ಡಿಸೆಂಬರ್ 2013, 7:04 IST
ಅಕ್ಷರ ಗಾತ್ರ

ಬೆಳಗಾವಿ: ಉಳ್ಳಾಗಡ್ಡಿ ಬೆಲೆ ಹಠಾತ್ ಕುಸಿತಗೊಂಡಿದ್ದರಿಂದ ಆಕ್ರೋಶಗೊಂಡ ರೈತರು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಎದುರು ರಸ್ತೆ ಮೇಲೆ ಕಲ್ಲುಗಳನ್ನಿಟ್ಟು ಬುಧವಾರ ರಸ್ತೆ ತಡೆ ನಡೆಸಿದರು. ಹುಬ್ಬಳ್ಳಿ ಎಪಿಎಂಸಿಯಲ್ಲಿ ಬೆಲೆ ಕುಸಿತದಿಂದ ಪ್ರತಿಭಟನೆ ನಡೆಯುತ್ತಿ­ರುವ ಕಾರಣ, ಬುಧವಾರ ಬೆಳಗಾವಿ ಎಪಿಎಂಸಿಗೆ ಧಾರವಾಡ, ವಿಜಾಪುರ, ಗದಗ ಸೇರಿದಂತೆ ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ರೈತರು ಉಳ್ಳಾಗಡ್ಡಿ ತಂದಿದ್ದರು.

ದಲ್ಲಾಳಿಗಳು ಬೆಳಗ್ಗೆ ಕ್ವಿಂಟಲ್‌ ಉಳ್ಳಾಗಡ್ಡಿಗೆ ₨ 800 ರಿಂದ ₨ 1200 ದರ ನಿಗದಿ ಪಡಿಸಿದ್ದನ್ನು ಖಂಡಿಸಿದ ರೈತರು, ಕನಿಷ್ಠ ₨ 3000 ದರ ನಿಗದಿ ಪಡಿಸಬೇಕು ಎಂದು ಒತ್ತಾಯಿಸಿದರು. ದಲ್ಲಾಳಿಗಳು ಮತ್ತು ಅಂಗಡಿಕಾರರು ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆ ಕಡಿಮೆಯಾಗಿದೆ ಎಂದು ಹೇಳಿ, ಹೆಚ್ಚಿನ ದರ ನೀಡಲು ನಿರಾಕರಿಸಿದರು. ಇದನ್ನು ಖಂಡಿಸಿ ರೈತರು ಎಪಿಎಂಸಿಯ ಮುಖ್ಯ­ದ್ವಾರ­ವನ್ನು ಬಂದ್ ಮಾಡಿ, ಬೆಳಗಾವಿ–ಕಂಗ್ರಾಳಿ ರಸ್ತೆ ತಡೆ ನಡೆಸಿದರು.

‘ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆ ಕುಸಿತಗೊಂಡಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ದಲ್ಲಾಳಿಗಳು ಕಡಿಮೆ ದರ ನಿಗದಿ ಪಡಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕೇಜಿಗೆ ₨ 35 ರಿಂದ 45ರ ದರದಲ್ಲಿ ಉಳ್ಳಾಗಡ್ಡಿ ಮಾರಾಟವಾಗುತ್ತಿದೆ. ದಲ್ಲಾಳಿಗಳು ಮತ್ತು ಅಂಗಡಿಕಾರರು ಹೆಚ್ಚಿನ ಲಾಭ ಪಡೆಯಲು ಈ ಬಗೆಯ ಕುತಂತ್ರ ಹೂಡುವ ಮೂಲಕ ಹಗಲು ದರೋಡೆಗೆ ಮುಂದಾಗಿದ್ದಾರೆ’ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ನಾಲ್ಕು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ರೈತರು ಜಿಲ್ಲಾಧಿಕಾರಿ ಬರುವವರೆಗೆ ಪ್ರತಿಭಟನೆ ನಡೆಸುವು ದಾಗಿ ಪಟ್ಟುಹಿಡಿದಿದ್ದರು. ಮಧ್ಯ ಪ್ರವೇಶಿಸಿದ ಪೊಲೀಸ್ ಅಧಿಕಾರಿ­ಗಳು ಚರ್ಚಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮಧ್ಯಾಹ್ನ ಮತ್ತೆ ಮಾರಾಟಕ್ಕೆ ಚಾಲನೆ ಸಿಕ್ಕಿತು.

ಕಲ್ಲುತೂರಾಟ: ರಸ್ತೆ ತಡೆ ನಡೆಸಿದ ಪರಿ­ಣಾಮ ವಾಹನ ಸಂಚಾರಕ್ಕೆ ಅಸ್ತವ್ಯಸ್ತ­ವಾಗಿತ್ತು. ಇದರಿಂದ ಕೋಪಗೊಂಡ ಕೆಲ ಸಾರ್ವಜನಿರು ರೈತರೊಂದಿಗೆ ಮಾತಿನ ಚಕಮಕಿ ಮತ್ತು ವಾದಕ್ಕೆ ಇಳಿದರು. ಆ ಸಂದರ್ಭದಲ್ಲಿ ಕೆಲವರು ಕಲ್ಲು ತೂರಾಟ ನಡೆಸಿದ ಪರಿಣಾಮ ವಾತಾವರಣ ಉದ್ರಿಕ್ತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT