ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಬಿ.ಎಸ್.ಎಸ್.ಕೆ. ಕೃಷಿಂಗ್‌ಗೆ ತಡೆ

Last Updated 8 ಫೆಬ್ರುವರಿ 2011, 9:20 IST
ಅಕ್ಷರ ಗಾತ್ರ

ಬೀದರ್: ಕಾರ್ಖಾನೆಗೆ ಕಬ್ಬು ಸಾಗಿಸುವಲ್ಲಿ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ರೈತರು ಸೋಮವಾರ ಹಳ್ಳಿಖೇಡ್(ಬಿ)ನಲ್ಲಿ ಇರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ ಕೃಷಿಂಗ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ನಿರ್ದೇಶಕರಾದ ಅಶೋಕ ತಮಾಸಂಗೆ, ಸಂಗಮೇಶ ಪಾಟೀಲ್, ಸಂಜಯ ಖೇಣಿ ಹಾಗೂ ಸುಭಾಷ ಕಾಶೆಂಪೂರ್ ಅವರ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಕಬ್ಬು ಸಾಗಾಣಿಕೆಗೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಆಯಾ ಪ್ರದೇಶಗಳ ನಿರ್ದೇಶಕರನ್ನು ತಮ್ಮ ಜೊತೆಗೇ ಕರೆತಂದು ಧರಣಿ ಕುಳಿತರು. ಕೂಡಲೇ ಆಡಳಿತ ಮಂಡಳಿ ಮೇಲೆ ಒತ್ತಡ ತಂದು ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.

ಬೆಳಿಗ್ಗೆ 10.30ಕ್ಕೆ ಕಾರ್ಖಾನೆಯ ಕಬ್ಬು ಕೃಷಿಂಗ್ ಅನ್ನು ಬಂದ್ ಮಾಡಿಸಿದರು. ನಂತರ ಆವರಣದಲ್ಲಿ ಧರಣಿ ಆರಂಭಿಸಿದರು. ಕಟಾವು ಗ್ಯಾಂಗ್, ಲಾರಿ, ಬಂಡಿಗಳ ಸಮಸ್ಯೆಯಿಂದಾಗಿ ರೈತರು ಹೊಲದಲ್ಲಿ ಬೆಳೆದು ನಿಂತ ಕಬ್ಬು ಕಾರ್ಖಾನೆಗೆ ಸಾಗಿಸುವುದಕ್ಕೆ ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಅನೇಕ ರೈತರು ದೂರಿದರು.

220 ಲಾರಿ ಮತ್ತು 703 ಬಂಡಿ ಕಟಾವು ಗ್ಯಾಂಗ್‌ಗಳನ್ನು ತರುವುದಕ್ಕಾಗಿ ಆಡಳಿತ ಮಂಡಳಿಯಿಂದ ಸಕ್ಕರೆ ವಿಭಾಗಕ್ಕೆ 8 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಲಾರಿ ಮತ್ತು ಟ್ರಾಕ್ಟರ್ ಸೇರಿ 140 ಗ್ಯಾಂಗ್ ಹಾಗೂ 400 ಬಂಡಿ ಗ್ಯಾಂಗ್‌ಗಳನ್ನು ಮಾತ್ರ ತರಲಾಗಿದೆ ಎಂದು ದೂಷಿಸಿದರು.

ಸದ್ಯ ತರಲಾಗಿರುವ ಕಟಾವು ಗ್ಯಾಂಗ್‌ಗಳಿಗೆ 5 ಕೋಟಿ ಮಾತ್ರ ಖರ್ಚಾಗಿದೆ. ಇನ್ನುಳಿದ 3 ಕೋಟಿ ರೂಪಾಯಿ ನುಂಗಿ ಹಾಕಲಾಗಿದೆ. ನಿರ್ದೇಶಕರು ಈ ಬಗ್ಗೆ ಸಭೆಯಲ್ಲಿ ಪ್ರಶ್ನೆ ಎತ್ತಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದರು.

ಕಟಾವು ಗ್ಯಾಂಗ್ ತರುವಲ್ಲಿ ನಡೆದಿರುವ ಅವ್ಯವಹಾರದಲ್ಲಿ ಕಾರ್ಖಾನೆಯ ಅಧ್ಯಕ್ಷ ಸುಭಾಷ ಕಲ್ಲೂರ, ಉಪಾಧ್ಯಕ್ಷ ಎಂ.ಜಿ. ಮುಳೆ, ಮುಖ್ಯ ಲೆಕ್ಕಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಮುಖ್ಯ ಸಕ್ಕರೆ ಅಭಿವೃದ್ಧಿ ಅಧಿಕಾರಿ, ಸಕ್ಕರೆ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಮಿಕ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಯಾವ ಪ್ರದೇಶಕ್ಕೆ ಎಷ್ಟು ಕಟಾವು ಗ್ಯಾಂಗ್ ಎಂಬ ಬಗ್ಗೆ ನಿಯಮ ರೂಪಿಸಿದ್ದರೂ ಅದರ ಪ್ರಕಾರ ಗ್ಯಾಂಗ್‌ಗಳನ್ನು ಕಳುಹಿಸಲಾಗುತ್ತಿಲ್ಲ. ಮನಸ್ಸಿಗೆ ಬಂದ ಹಾಗೆ ಮಾಡಲಾಗುತ್ತಿದೆ. ಕಟಾವು ಗ್ಯಾಂಗ್ ಕೊರತೆಯಿಂದ ಕಬ್ಬು ಕಟಾವು ಮಾಡುವುದಕ್ಕೆ 10 ರಿಂದ 15 ಸಾವಿರ ರೂಪಾಯಿ ಲಂಚ ಕೇಳಲಾಗುತ್ತಿದೆ ಎಂದು ಗಂಭೀರವಾಗಿ ಆಪಾದಿಸಿದರು.

ಸಂಜೆ 6.30ರವರೆಗೆ ಕಾರ್ಖಾನೆಯ ಕೃಷಿಂಗ್ ಬಂದ್ ಆಗಿತ್ತು. ನಂತರ ಸ್ಥಳಕ್ಕೆ ಭೇಟಿ ನೀಡಿದ ಕಾರ್ಖಾನೆಯ ಅಧ್ಯಕ್ಷ ಸುಭಾಷ ಕಲ್ಲೂರ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ರೈತರ ಆಳಲು ಆಲಿಸಿದರು. ಫೆಬ್ರುವರಿ 10ರ ಒಳಗೆ ಕಟಾವು ಗ್ಯಾಂಗ್‌ಗಳ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಭರವಸೆ ನೀಡಿದರು. ಆಗ ರೈತರು ಇದಕ್ಕೆ ತಪ್ಪಿದ್ದಲ್ಲಿ ಮುಂದೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು.

ನಿರ್ದೇಶಕರಾದ ಅಶೋಕ ತಮಾಸಂಗೆ, ಸಂಗಮೇಶ ಪಾಟೀಲ್, ಸಂಜಯ ಖೇಣಿ, ಸುಭಾಷ ಕಾಶೆಂಪೂರ್, ದತ್ತಾತ್ರಿ ದಾಚೆಪಲ್ಲಿ ರೈತರೊಂದಿಗೇ ಇದ್ದರು. ಭಾಲ್ಕಿ ತಾಲ್ಲೂಕಿನ ಮಾಸಿಮಾಡ್, ಧನ್ನೂರಾ (ಎಚ್), ಮಳಚಾಪುರ, ಹಾಲಹಳ್ಳಿ (ಕೆ), ಏಣಕೂರ, ತೂಗಾಂವ್, ಶೆಡೋಳ್, ತಳವಾಡ, ದಾಡಗಿ, ಭಾತಂಬ್ರಾ, ಬೀದರ್ ತಾಲ್ಲೂಕಿನ ಆಣದೂರು, ಆಣದೂರುವಾಡಿ, ಅತಿವಾಳ, ಮರಕಲ್, ಮರಕುಂದಾ, ಹುಮನಾಬಾದ್ ತಾಲ್ಲೂಕಿನ ನಿರ್ಣಾ ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT