ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಸರ್ಕಾರದ ಅಣಕು ಶವಯಾತ್ರೆ

ಹೆದ್ದಾರಿಗೆ ಭೂಮಿ ಕೊಟ್ಟವರಿಗೆ ಪರಿಹಾರ ಧನ ನೀಡಲು ಒತ್ತಾಯ
Last Updated 7 ಡಿಸೆಂಬರ್ 2013, 7:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಹೆದ್ದಾರಿ ನಿರ್ಮಾಣ­ಕ್ಕಾಗಿ ಜಮೀನುಗಳನ್ನು ಕಳೆದುಕೊಂಡ ರೈತರಿಗೆ ಸಮರ್ಪಕ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ–7ರ ಭೂಸ್ವಾಧೀನ ರೈತರ ಹೋರಾಟ ಸಮಿತಿ ಸದಸ್ಯರು ಶುಕ್ರವಾರ ಐದನೇ ದಿನವೂ ಧರಣಿ ಮುಂದುವರೆಸಿ ಸರ್ಕಾರದ ಅಣಕು ಶವಯಾತ್ರೆ ನಡೆಸಿದರು.

‘ಸರ್ಕಾರವು ಅಸ್ತಿತ್ವದಲ್ಲಿದ್ದರೂ ರೈತರ ಪಾಲಿಗೆ ಇಲ್ಲದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳದಲ್ಲೇ ಬಟ್ಟೆ, ಕಟ್ಟಿಗೆ, ಮಡಿಕೆ, ಒಣಹುಲ್ಲು ಮುಂತಾದವು­­ಗಳನ್ನು ಸಂಗ್ರಹಿಸಿಕೊಂಡು ಚಟ್ಟವೊಂ­ದನ್ನು ಸಿದ್ಧಪಡಿಸಿದರು. ಬಳಿಕ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲದವರೆಗೆ ಜಿಲ್ಲಾಡಳಿತ ಭವನದ ಒಳ ಮತ್ತು ಹೊರಾವರಣದಲ್ಲಿ ಶವಯಾತ್ರೆ ನಡೆಸಿದರು.

ಜಿಲ್ಲಾಡಳಿತ ಭವನದ ಒಳಗೆ ಹೋಗಲು ಯತ್ನಿಸಿದ ಅವರನ್ನು ಪೊಲೀಸರು ತಡೆದರು. ಬಳಿಕ ಒಳ ಆವರಣದಲ್ಲಿ ಸುತ್ತು ಹಾಕಿದ ಅವರು ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೇಡಿಕೆ ಈಡೇರಿಸದ ಸರ್ಕಾರ ರೈತರ ಪಾಲಿಗೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಭವನದ ಮುಖ್ಯ ಪ್ರವೇಶದ್ವಾರದ ಹೊರಗಡೆ ಅಣಕು ಶವಕ್ಕೆ ಅಗ್ನಿಸ್ಪರ್ಶ ಮಾಡಿ, ಶವಯಾತ್ರೆ ಕೊನೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಅತ್ತ ಜಮೀನೂ ಇಲ್ಲದೇ, ಇತ್ತ ಪರಿಹಾರ ಧನವೂ ಇಲ್ಲದೇ ರೈತರು ಐದು ದಿನಗಳಿಂದ ಜಿಲ್ಲಾಡಳಿತ ಭವನದ ಆವರಣದಲ್ಲಿ ಧರಣಿ ನಡೆಸುತ್ತಿದ್ದರೂ; ಯಾರೂ ನಮ್ಮೊಂದಿಗೆ ಚರ್ಚಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಮಗಾರಿಗಳಿಗೆ ಮತ್ತು ಯೋಜನೆ­ಗಳಿಗೆ ಕೋಟ್ಯಂತರ ರೂಪಾಯಿ ನೀಡುತ್ತಿ­ರುವ ಸರ್ಕಾರವು ಎಕರೆಗೆ ₨ 20 ಲಕ್ಷ ರೂಪಾಯಿ ಪರಿಹಾರ ಧನ ನೀಡಲು ಯಾಕೆ ಹಿಂಜರಿಯುತ್ತಿದೆ. ರೈತರ ಪರ ಕಾಳಜಿ ಮತ್ತು ಕಳಕಳಿ ಹೊಂದಿರು­ವು­ದಾಗಿ ಹೇಳಿಕೊಳ್ಳುವ ಸರ್ಕಾರ ಪರಿಹಾರ ಧನ ಬಿಡುಗಡೆ ಮಾಡಲು ಯಾಕೆ ವಿಳಂಬ ತೋರುತ್ತಿದೆ. ಆರ್ಥಿಕ ನಷ್ಟಕ್ಕೆ ಒಳಗಾಗಿರುವ ರೈತರ ಬಾಳನ್ನು ಸರಿ­ದೂ­ಗಿಸಲು ಕೂಡಲೇ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.

ಹೆದ್ದಾರಿ ತಡೆಗೆ ಯತ್ನ: ಬಂಧನ
ಬಾಗೇಪಲ್ಲಿ:
ಚಿಕ್ಕಬಳ್ಳಾಪುರ ಬಳಿ ರಾಷ್ಟ್ರೀಯ ಹೆದ್ದಾರಿ–7 ನಿರ್ಮಾಣಕ್ಕೆ ರೈತರಿಂದ ಪಡೆದಿರುವ ಜಮೀನಿಗೆ ಪರಿಹಾರ ನೀಡ­ಬೇಕೆಂದು ಒತ್ತಾಯಿಸಿ ತಾಲ್ಲೂಕಿನ ನಾರೇಪಲ್ಲಿ ಟೋಲ್‌ ಪ್ಲಾಜಾ ಬಳಿ ಹೆದ್ದಾರಿ ತಡೆ ನಡೆಸಲು ಯತ್ನಿಸಿದ 150ಕ್ಕೂ ಹೆಚ್ಚು ರೈತರನ್ನು ಪೊಲೀಸರು ಶುಕ್ರವಾರ ಬಂಧಿಸಿ, ನಂತರ ಬಿಡುಗಡೆ ಮಾಡಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.­ನಾರಾಯಣ­ಸ್ವಾಮಿ,  ಮುಖಂಡ­ರಾದ ಸಿ.ಡಿ.ಗಂಗುಲಪ್ಪ, ಜಿ.ಎಂ.­ರಾಮಕೃಷ್ಣಪ್ಪ, ತಿಪ್ಪನ್ನ, ನರಸಿಂಹ­ಮೂರ್ತಿ, ವೆಂಕಟ­ರಾಯಪ್ಪ, ಗಂಗ­ರತ್ನಮ್ಮ, ರಾಮ­ರತ್ನಮ್ಮ, ವೆಂಕಟೇಶಮ್ಮ, ರಮಣಮ್ಮ, ಶಭಾನಾ, ಭಾರತಿ, ಹಸೀನಾಬೀ, ನಾಗರತ್ನಮ್ಮ ಇತರರು ಇದ್ದರು.

ರೈತರ ಧರಣಿ ವಾಪಸ್‌
ಚಿಕ್ಕಬಳ್ಳಾಪುರ:
ರಾಷ್ಟ್ರೀಯ ಹೆದ್ದಾರಿ–7ರ ಭೂಸ್ವಾಧೀನ ರೈತರ ಹೋರಾಟ ಸಮಿತಿ ಸದಸ್ಯರು ಶುಕ್ರವಾರ ದಿಢೀರ್‌ ಬೆಳವಣಿಗೆ­ಯೊಂ­ದರಲ್ಲಿ ಧರಣಿ ಹಿಂಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ­ಗಳೊಂ­ದಿಗೆ ಡಿಸೆಂಬರ್‌ 13ರಂದು ಸಭೆ ನಡೆಸಿ ಪರಿಹಾರ ಧನಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಆರ್‌.ವಿಶಾಲ್‌ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯಲಾಗಿದೆ.

’ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕ ಕೆ.ವಿ.ನಾಗರಾಜ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಎನ್‌.ಚಿನ್ನಪ್ಪ, ಸದಸ್ಯ ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಆರ್‌.ರೆಡ್ಡಿ ಮತ್ತಿತರರು ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್‌ ಅವರನ್ನು ಭೇಟಿಯಾಗಿ ನಮ್ಮ ಸಮಸ್ಯೆ ಕುರಿತು ಚರ್ಚಿಸಿದರು. ಜಿಲ್ಲಾಧಿಕಾರಿ ಭರವಸೆ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆ ಹಿಂಪಡೆದವು’ ಎಂದು  ಹೋರಾಟ ಸಮಿತಿ ಕಾರ್ಯದರ್ಶಿ ಯಲುವಹಳ್ಳಿ ಸೊಣ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT