ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದಲೇ ನಾಲೆ ಏರಿ ದುರಸ್ತಿ

Last Updated 1 ಏಪ್ರಿಲ್ 2013, 5:31 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಕುಸಿದಿದ್ದ ಬಂಗಾರದೊಡ್ಡಿ ನಾಲೆಯ ಏರಿಯನ್ನು ದುರಸ್ತಿ ಮಾಡಲು ಕಾವೇರಿ ನೀರಾವರಿ ನಿಗಮ ಆಸಕ್ತಿ ವಹಿಸದ ಕಾರಣ ಗಂಜಾಂ ಹಾಗೂ ಪಟ್ಟಣದ ರೈತರು ಶನಿವಾರ ನಾಲೆ ಏರಿಯನ್ನು ದುರಸ್ತಿ ಮಾಡಿದರು.

ಚಂದ್ರವನ ಅಶ್ರಮಕ್ಕೆ ತೆರಳುವ ಮಾರ್ಗದಲ್ಲಿ ನಾಲೆಯ ಬಲ ಪಾರ್ಶ್ವದ ಏರಿ ಕುಸಿದಿತ್ತು. ವಾರದ ಹಿಂದೆ ತೂಬು ಇರುವ ಕಡೆ ಈ ಏರಿ ಕುಸಿತ ಕಂಡಿತ್ತು. ನಾಲೆಯ ನೀರು ಬೆಳೆಗೆ ನುಗ್ಗಿ ಅಲ್ಪ ಪ್ರಮಾಣದಲ್ಲಿ ಬತ್ತದ ಬೆಳೆಗೆ ಹಾನಿಯಾಗಿತ್ತು. ಏರಿಯನ್ನು ರಿಪೇರಿ ಮಾಡುವಂತೆ ರೈತರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ 20ಕ್ಕೂ ಹೆಚ್ಚು ರೈತರು ತಾವೇ ನಿಂತು ರಿಪೇರಿ ಮಾಡಿಕೊಂಡಿದ್ದಾರೆ. ಗಂಜಾಂ ಪ್ರಕಾಶ್, ದೇವರಾಜು, ನವಾಬ್, ರಾಮಣ್ಣ, ಕುಮಾರ ಇತರ ರೈತರು ಅರ್ಧ ದಿನ ಶ್ರಮ ವಹಿಸಿ ನಾಲೆ ಏರಿಯನ್ನು ಭಾಗಶಃ ದುರಸ್ತಿ ಮಾಡಿದರು.

ನಾಲೆಯ ಏರಿ ಕುಸಿದಿದ್ದರಿಂದ ಕಬ್ಬು ಇತರ ಬೆಳೆಗೆ ನೀರಿಲ್ಲದೆ ಸಮಸ್ಯೆ ಉಂಟಾಗಿತ್ತು. ಸಹಾಯಕ ಎಂಜಿನಿಯರ್ ನಾಗರಾಜು ಅವರಿಗೆ ಮನವಿ ಸಲ್ಲಿಸಿದ್ದರೂ ಇತ್ತ ಗಮನ ಹರಿಸಲಿಲ್ಲ. ಬೆಳೆ ಉಳಿಸಿಕೊಳ್ಳಲು ನಾವೇ ನದಿ ಒಡ್ಡಿನ ನಾಲೆಯ ಏರಿಯನ್ನು ರಿಪೇರಿ ಮಾಡಿಕೊಂಡಿದ್ದೇವೆ. ಶಾಶ್ವತವಾಗಿ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ನಾಲೆ ಒಡೆಯುವ ಸಂಭವವಿದೆ ಎಂದು ಪ್ರಕಾಶ್ ಇತರರು ಆತಂಕ ವ್ಯಕ್ತಪಡಿಸಿದ್ದಾರೆ.

ಬಂಗಾರದೊಡ್ಡಿ ನಾಲೆಯ ಏರಿ ಕುಸಿದಿರುವ ಸಂಗತಿ ಗೊತ್ತಾಗಿದೆ. ಈ ಕುರಿತು ಮೇಲಧಿಕಾರಿಗಳಿಗೆ ವರದಿ ನೀಡಿದ್ದೇನೆ ಎಂದು ಎಂಜಿನಿಯರ್ ನಾಗರಾಜು `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT