ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಆನ್‌ಲೈನ್‌ ಮೂಲಕ ಹಣ ಪಾವತಿ

ಈ ವರ್ಷದಿಂದ ಹೊಸ ಕೃಷಿ ಮಾರುಕಟ್ಟೆ ನೀತಿ
Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿದ ಕೂಡಲೇ ಅವರಿಗೆ ಆನ್‌ಲೈನ್‌ ಮೂಲಕ ಹಣ ಪಾವತಿಸಲು ನೂತನ ಕೃಷಿ ಮಾರಾಟ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕೃಷಿ  ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಬುಧವಾರ ಇಲ್ಲಿ ಕೃಷಿ ಮಾರುಕಟ್ಟೆ ನೀತಿಯ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಹೊಸ ನೀತಿ ಯನ್ನು ಈ ವರ್ಷವೇ ಅನುಷ್ಠಾನ ಗೊಳಿಸಲಾಗುವುದು ಎಂದರು.

ರೈತರ ಬ್ಯಾಂಕ್‌ ಖಾತೆಗೆ ಆನ್‌ಲೈನ್‌ ಮೂಲಕ ಹಣ ಪಾವತಿಸುವುದರಿಂದ ಪಾರದರ್ಶಕತೆ ಇರಲಿದೆ. ವಿಳಂಬಕ್ಕೆ ಅವಕಾಶ ಇರುವುದಿಲ್ಲ. ಮಾರಾಟ ವಿಧಾನ ಸರಳೀಕರಣಗೊಳ್ಳಲಿದೆ ಎಂದು ತಿಳಿಸಿದರು.

ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಯಲ್ಲಿ ಸೂಕ್ತ ಬೆಲೆ ಇಲ್ಲದಿದ್ದರೆ, ರೈತರು ದಾಸ್ತಾನು ಮಳಿಗೆಗಳಲ್ಲಿ ಸಂರಕ್ಷಿಸಿ ಇಟ್ಟುಕೊಳ್ಳಬಹುದು. ಈ ನಿಟ್ಟಿನಲ್ಲಿ ಉಗ್ರಾಣ ಆಧಾರಿತ ಮಾರಾಟಕ್ಕೆ ಪ್ರೋತ್ಸಾಹ ನೀಡಲಾಗುವುದು. ಇದ ಕ್ಕಾಗಿ 50 ಉಗ್ರಾಣಗಳನ್ನು ಗುರುತಿಸ ಲಾಗುವುದು ಎಂದರು.

ವಿಧಾನಮಂಡಲದ ಮುಂಬರುವ ಅಧಿವೇಶನದಲ್ಲಿ ಮಸೂದೆ ಮಂಡಿಸಿ ನೂತನ ಕೃಷಿ ಮಾರಾಟ ನೀತಿ ಜಾರಿಗೊಳಿಸಲು ಕ್ರಮಕೈಗೊಳ್ಳಲಾಗು ವುದು ಎಂದು ಸಚಿವರು ತಿಳಿಸಿದರು.

ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸುವ ಉದ್ದೇಶದಿಂದ ಎಲ್ಲ ಮಾರುಕಟ್ಟೆಗಳನ್ನು ಜೋಡಿಸಲಾಗುವುದು. ಉತ್ಪನ್ನಗಳ ಗುಣಮಟ್ಟ ಪರೀಕ್ಷೆ ಮಾಡಿ ವರ್ಗಿಕರಿಸಲಾಗುವುದು. ಹರಾಜಿನಲ್ಲಿ ಹೆಚ್ಚಿನ ವರ್ತಕರಿಗೆ ಭಾಗವಹಿಸಲು ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಏಕೀಕೃತ ಪರವಾನಗಿ ನೀಡಲಾಗುವುದು ಎಂದು ತಿಳಿಸಿದರು.

ಹುಬ್ಬಳ್ಳಿಯ ವರ್ತಕ ಮಂಡ್ಯದ ಎಪಿಎಂಸಿಯಲ್ಲಿ ತನಗೆ ಬೇಕಾದ ಉತ್ಪನ್ನಗಳನ್ನು ಖರೀದಿಸಬಹುದು. ಇದಕ್ಕೆ ಅವಕಾಶ ಕಲ್ಪಿಸಿರುವುದರಿಂದ ಸ್ಪರ್ಧೆ ಹೆಚ್ಚಾಗಲಿದ್ದು, ರೈತರಿಗೆ ಉತ್ತಮ ದರ ಸಿಗಲಿದೆ ಎಂದು ಸಹಕಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಆರ್‌.ಮನೋಜ್‌ ತಿಳಿಸಿದರು.

ಸಂಸ್ಕರಣಾ ಘಟಕ
ರೈತರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶ ದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಣ್ಣು, ಹೂವು, ತರಕಾರಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಶಿವಶಂಕರಪ್ಪ ತಿಳಿಸಿದರು.

ಹನಿ ನೀರಾವರಿ ಪದ್ಧತಿ ಅಳವಡಿಸಿ ಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಶೇ 90ರಷ್ಟು ಹಾಗೂ ಇತರರಿಗೆ ಶೇ 75ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಎಲ್ಲರಿಗೂ ಶೇ 90ರಷ್ಟು ಸಬ್ಸಿಡಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗಂಗಾವತಿ ತಾಲ್ಲೂಕಿನ ಕಾರಟಗಿ ಯಲ್ಲಿ ಅಕ್ಕಿ ತಂತ್ರಜ್ಞಾನ ಪಾರ್ಕ್‌, ರಾಣೆಬೆನ್ನೂರಿನಲ್ಲಿ ಮೆಕ್ಕೆಜೋಳ ತಂತ್ರಜ್ಞಾನ ಪಾರ್ಕ್‌, ಗುಲ್ಬರ್ಗದಲ್ಲಿ ತೊಗರಿ ತಂತ್ರಜ್ಞಾನ ಪಾರ್ಕ್‌ ಹಾಗೂ ತಿಪಟೂರಿನಲ್ಲಿ ತೆಂಗು ತಂತ್ರಜ್ಞಾನ ಪಾರ್ಕ್‌ ಸ್ಥಾಪನೆಗೆ ಕ್ರಮಕೈಗೊಳ್ಳ ಲಾಗಿದೆ ಎಂದರು.

ಕೊಬ್ಬರಿ ಖರೀದಿ ಮುಂದುವರಿಕೆ
ಉಂಡೆ ಕೊಬ್ಬರಿಯನ್ನು ಈ ತಿಂಗಳ ಅಂತ್ಯದವರೆಗೂ ಬೆಂಬಲ ಬೆಲೆ ಕೊಟ್ಟು ಖರೀದಿಸಲಾಗುವುದು ಎಂದು ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದರು. ಈವರೆಗೆ 2.75 ಲಕ್ಷ ಕ್ವಿಂಟಲ್‌ ಕೊಬ್ಬರಿ ಖರೀದಿಸಿದ್ದು, ರೂ. 165 ಕೋಟಿ ವೆಚ್ಚ ಮಾಡಲಾಗಿದೆ ಎಂದರು.

ಕೇಂದ್ರ ಸರ್ಕಾರ ರೂ. 5,500 ಹಾಗೂ ರಾಜ್ಯ ಸರ್ಕಾರ ರೂ.1000 ಸೇರಿದಂತೆ ಪ್ರತಿ ಕ್ವಿಂಟಲ್‌ ಕೊಬ್ಬರಿಯನ್ನು ರೈತ ರಿಂದ ರೂ.6,500ಕ್ಕೆ ಖರೀದಿಸಲಾಗುತ್ತಿದೆ. ಕೇಂದ್ರ ಸರ್ಕಾರ ಇನ್ನೂ ಹಣ ನೀಡಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಆವರ್ತನಿಧಿ ಯಿಂದ ಹಣ ಬಿಡುಗಡೆ ಮಾಡಿ ಖರೀದಿಸುತ್ತಿದೆ ಎಂದು ತಿಳಿಸಿದರು.

ಅಕ್ಟೋಬರ್‌ಗೆ ಈರುಳ್ಳಿ ದರ ಇಳಿಕೆ
ರಾಜ್ಯದಲ್ಲಿ ಬೆಳೆಯುವ ಈರುಳ್ಳಿ ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಬರಲಿದ್ದು, ಆಗ ಬೆಲೆ ಇಳಿಕೆಯಾಗಲಿದೆ ಎಂದು ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಂಕರ ಲಿಂಗೇಗೌಡ ತಿಳಿಸಿದರು.

ರಾಜ್ಯದಲ್ಲಿ 1.29 ಲಕ್ಷ ಹೆಕ್ಟೇರ್‌ನಲ್ಲಿ 2.5 ಲಕ್ಷ ಟನ್‌ ಈರುಳ್ಳಿ ಉತ್ಪಾದನೆ ಯಾಗುತ್ತಿದೆ. ಇದನ್ನು ಮುಂಗಾರಿನಲ್ಲಿ ಬೆಳೆಯುವುದರಿಂದ ಉಳಿದ ಸಮಯ ದಲ್ಲಿ ಈರುಳ್ಳಿ ಕೊರತೆಯಾಗುತ್ತಿದೆ. ಆದ್ದರಿಂದ ಫೆಬ್ರುವರಿವರೆಗೂ ಬೆಳೆಯು ವಂತೆ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು ಎಂದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT