ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಕೃಷಿ ಜಾತ್ರೆ... ನಗರವಾಸಿಗಳಿಗೆ ಪಿಕ್‌ನಿಕ್!

Last Updated 3 ಡಿಸೆಂಬರ್ 2012, 7:04 IST
ಅಕ್ಷರ ಗಾತ್ರ

ರಾಯಚೂರು: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ  ಶನಿವಾರ ಆರಂಭಗೊಂಡ ಕೃಷಿ ಮೇಳದ ಎರಡನೇ ದಿನವಾದ ಭಾನುವಾರ ರಾಯಚೂರು ಜಿಲ್ಲೆ ಸೇರಿದಂತೆ ಗುಲ್ಬರ್ಗ ವಿಭಾಗದ ವಿವಿಧ ಭಾಗಗಳ ಅಸಂಖ್ಯಾತ ರೈತರು ಭೇಟಿ ನೀಡಿದ್ದರು.ರೈತರಿಗೆ ಜಾತ್ರೆಯಾಗಿ ಪರಿಣಮಿಸಿದರೆ ರಾಯಚೂರು ನಗರ ವಾಸಿಗಳಿಗೆ ಇದು ಭಾನುವಾರದ ರಜಾ ಕಳೆಯಲು ಕುಟುಂಬದವರೊಂದಿಗೆ ಕಾಲ ಕಳೆಯಲು ತೆರಳಿದ ಪಿಕ್‌ನಿಕ್ ಆದಂತಿತ್ತು.

ದೇವದುರ್ಗ ತಾಲ್ಲೂಕಿನ ಕೊತ್ತದೊಡ್ಡಿ ರೈತ ಭೀಮೇಶ ಅವರ ಅಂಗೋಲಾ ತಳಿಯ ಗಜಗಾತ್ರದ `ಭೂಪ' ಎಂಬ ಎತ್ತು ರೈತರೊಂದಿಗೆ ಕಬಡ್ಡಿ ಆಟ ಆಡಿ ಹುಬ್ಬೇರಿಸುವಂತೆ ಮಾಡಿತು!

ರೈತ ವೀರಭದ್ರಗೌಡ ಒಂದು ಕಡೆಯಿಂದ ಕೈ ತೋರಿಸಿದರೆ ಆ ಕಡೆಯಿಂದ ಕಬಡ್ಡಿ ಆಡುವವರ ರೀತಿ ತಲೆ ಹಾಕಿ ಕಾಲು ಕೆದರಿ ಓಡಾಡುತ್ತಿದ್ದುದು ಕೃಷಿ ಮೇಳಕ್ಕೆ ಬಂದರಿಗೆ ಮನರಂಜನೆ ತಂದಿತ್ತು.

ಎರಡು ಎಕರೆ ಪ್ರದೇಶದಲ್ಲಿ ತೋಟಗಾರಿಕೆ, ಮೊಲ, ಕೋಳಿ, ಸಾವಯವ ಕೃಷಿ, ಮೇಕೆ ಸಾಕಾಣಿಕೆ, ತರಕಾರಿ, ಹೂ, ಹಣ್ಣು ಬೆಳೆದು ರೈತ ಹೇಗೆ ಸ್ವಾವಲಂಬಿಯಾಗಿ ಬದುಕುಬಹುದು ಎಂಬ ಲಾಭದಾಯಕ ಕೃಷಿ ಬಗ್ಗೆ ತಿಳಿಸಿಕೊಡುವ `ಸಮಗ್ರ ಕೃಷಿ ಪದ್ಧತಿ' ಮಾದರಿ ಇರುವ ಕ್ಷೇತ್ರಕ್ಕೆ ರೈತರು, ನಗರದ ಜನತೆ ಭೇಟಿ ನೀಡಿ ಮಾಹಿತಿ ಪಡೆದರು.

ಇ-ಸ್ಯಾಪ್ ವೀಕ್ಷಣೆಗೆ ರೈತರ ಕುತೂಹಲ: ಸಣ್ಣ ರೈತರು ಕಳೆ ನಿರ್ವಹಣೆ ಯಂತ್ರ, ಬಿತ್ತನೆ ಬೀಜ ಸಬ್ಸಿಡಿ ದರದ ಬಗ್ಗೆ ತಲೆ ಕೆಡಿಸಿಕೊಂಡು ಕೃಷಿ ಇಲಾಖೆ, ಕೃಷಿ ವಿವಿ ವಿವಿಧ ವಿಭಾಗಗಳ, ವಿವಿಧ ಬೆಳೆಗಳ ತಜ್ಞರು ಹಾಕಿದ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ಕೃಷಿ ವಿವಿಯ ಕೃಷಿ ಮಹಾವಿದ್ಯಾಲಯದ  ಕೀಟಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಪ್ರಭುರಾಜ ಎ ಅವರು  ಸಂಶೋಧನೆ ಮಾಡಿ ಕೃಷಿ ವಿವಿ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಕರ್ನಾಟಕ ಸರ್ಕಾರದ ನೆರವಿನಡಿ ಅಭಿವೃದ್ಧಿಪಡಿಸಿದ `ಬೆಳೆ ಸಂರಕ್ಷಣೆಗಾಗಿ ಆಧುನಿಕ ತಂತ್ರಜ್ಞಾನ ಇ-ಸ್ಯಾಪ್' ಕುರಿತು ಮಾಹಿತಿ ದೊರಕಿಸುವ ಮಳಿಗೆಗೆ ರೈತರು ದುಂಬಾಲು ಬಿದ್ದು ಮಾಹಿತಿ ಪಡೆಯುತ್ತಿದ್ದುದು ಕಂಡು ಬಂದಿತು.

ಸೋಮವಾರ ಕೃಷಿ ಮೇಳದ ಕೊನೆಯ ದಿನವಾಗಿದೆ. ನಾಳೆಯೂ ಇದೇ ಕೃಷಿ ವಸ್ತು ಪ್ರದರ್ಶನ, ತಾಕುಗಳ ಪ್ರದರ್ಶನ, ತಜ್ಞರಿಂದ ಮಾಹಿತಿ, ಪ್ರಗತಿಪರ ರೈತರು, ರೈತ ಮುಖಂಡರು, ಕೃಷಿ ತಜ್ಞರಿಂದ ಸಂವಾದ ಕಾರ್ಯಕ್ರಮ ನಡೆಯಲಿದೆ.

ಗುಲ್ಬರ್ಗದಲ್ಲಿ ಇದೇ 8ರಂದು ಕೃಷಿ ವಿವಿಯು ಕೃಷಿ ಮೇಳ ನಡೆಯಲಿದ್ದು   ಅಲ್ಲಿರೈತ ಕೃಷಿ ವಿಜ್ಞಾನಿ, ಕೃಷಿ          ವಿಜ್ಞಾನಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕೃಷಿ ವಿವಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT