ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ `ಟ್ಯಾಬ್ಲೆಟ್' ವಿತರಣೆ

Last Updated 8 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಗುಲ್ಬರ್ಗ: ಕೃಷಿ, ಆರೋಗ್ಯ ಹಾಗೂ ಶಿಕ್ಷಣ ಬಗ್ಗೆ ರೈತರಿಗೆ ಮಾಹಿತಿ ಒದಗಿಸಲು ಪ್ರಾಯೋಗಿಕವಾಗಿ ಬಾಗಲಕೋಟೆ ಜಿಲ್ಲೆಯ 100 ರೈತರಿಗೆ ಟ್ಯಾಬ್ಲೆಟ್ (ಅತಿ ಸಣ್ಣ ಕಂಪ್ಯೂಟರ್) ಕೊಡಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ ಹೇಳಿದರು.

ನಗರದ ಸರ್ವಜ್ಞ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಪ್ರಪಂಚದಾದ್ಯಂತ ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳನ್ನು ರೈತರು ನೋಡಬೇಕು. ರೈತರ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿರುವ ಅವಕಾಶ ಹಾಗೂ ಶಿಕ್ಷಣ ಸಂಸ್ಥೆಗಳ ಬಗ್ಗೆ ತಿಳಿಯಬೇಕು. ಯಾವ ನಗರದಲ್ಲಿ ಯಾವ ಆಸ್ಪತ್ರೆ ಇದೆ, ಉತ್ತಮ ವೈದ್ಯರ ಬಗ್ಗೆ ತಿಳಿಸಿ ಕೊಡುವ ಸಾಫ್ಟ್‌ವೇರ್‌ಗಳನ್ನು ಟ್ಯಾಬ್ಲೆಟ್‌ನಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು.

ಗ್ರಾಮೀಣ ಭಾಗದ ಪ್ರತಿಭಾವಂತರೆಲ್ಲ ಪಟ್ಟಣದತ್ತ ಮುಖ ಮಾಡುವುದರ ಬದಲಾಗಿ ಪಟ್ಟಣದವರು ಗ್ರಾಮಗಳತ್ತ ಮುಖ ಮಾಡಬೇಕಿದೆ. 21ನೇ ಶತಮಾನದಲ್ಲಿ ಮಾಹಿತಿ-ತಂತ್ರಜ್ಞಾನ ಅಗಾಧವಾಗಿ ಬೆಳೆದಿದೆ. ಇದರ ಅರಿವು ರೈತರಿಗೆ ಆಗಬೇಕು ಎಂದ ಅವರು, ಪ್ರಾಯೋಗಿಕ ಹಂತ ಯಶಸ್ವಿಯಾದರೆ, ರೈತರೆಲ್ಲರಿಗೂ ಟ್ಯಾಬ್ಲೆಟ್ ನೀಡಲಾಗುವುದು. ಅನ್ನ ಬೆಳೆಯುವ ರೈತರು ಚೆನ್ನಾಗಿದ್ದರೆ ಮಾತ್ರ ದೇಶ ಸುಭಿಕ್ಷವಾಗುತ್ತದೆ ಎಂದರು.

ಎರಡನೆ ಹಂತದ ನಗರಗಳಿಗೂ ವಿಸ್ತರಣೆ: ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಎರಡನೆ ಹಂತದ ನಗರಗಳಿಗೂ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನವನ್ನು ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.

ಮಾಹಿತಿ ತಂತ್ರಜ್ಞಾನ ಬೆಂಗಳೂರಿಗೆ ಮಾತ್ರ ಸಿಮೀತವಾಗಬಾರದು ಎನ್ನುವ ಉದ್ದೇಶ ರಾಜ್ಯ ಸರ್ಕಾರದ್ದಾಗಿದೆ. ಇದಕ್ಕಾಗಿ ಸೆ. 26ರಂದು ಹುಬ್ಬಳ್ಳಿ-ಧಾರವಾಡದಲ್ಲಿ ಹಾಗೂ ಅಕ್ಟೋಬರ್ 22-23ರಂದು ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲಾಗುತ್ತಿದೆ ಎಂದು ಹೇಳಿದರು.
ಮೋಹನದಾಸ್ ಪೈ ಅವರು ನೀಡಿರುವ `ಮಾಹಿತಿ ಮತ್ತು ಸಮೂಹ ಸಂವಹನ (ಐಸಿಟಿ) 2020' ವರದಿ ಪ್ರಕಾರ ಎರಡನೇ ಹಂತದ ನಗರಗಳಿಗೂ ಐ.ಟಿ-ಬಿ.ಟಿ ವಿಸ್ತರಿಸುವ ಅಗತ್ಯವಿದೆ. ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿದೇಶಿ ವಿನಿಮಯದಲ್ಲಿ ಕರ್ನಾಟಕ ರಾಜ್ಯದ ಪಾಲು ಶೇ 36ರಷ್ಟಿದೆ. ಒಟ್ಟು ರೂ 1.35 ಲಕ್ಷ ಕೋಟಿಯಷ್ಟು ಮಾಹಿತಿ-ತಂತ್ರಜ್ಞಾನ ರಫ್ತಾಗುತ್ತಿದೆ. 2020ರ ವೇಳೆಗೆ ರೂ 4 ಲಕ್ಷ ಕೋಟಿ ಗುರಿ ತಲುಪುವ ಉದ್ದೇಶವಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT