ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ತಿಳಿಸದೆ ಸರ್ವೆ ಕಾರ್ಯ: ಪ್ರತಿಭಟನೆ

Last Updated 20 ಡಿಸೆಂಬರ್ 2012, 9:48 IST
ಅಕ್ಷರ ಗಾತ್ರ

ತರೀಕೆರೆ: ತಾಲ್ಲೂಕಿನ ಕೆ.ಹೊಸೂರು ಗ್ರಾಮದ ಬಳಿ ರೈತರ ಗಮನಕ್ಕೆ ಬಾರದೆ ಭದ್ರಾ ಮೇಲ್ದಂಡೆ ಯೋಜನೆಯ ಸರ್ವೆ ಕಾರ್ಯಕ್ಕೆ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಸರ್ವೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸರ್ವೆ ಕಾರ್ಯಕ್ಕೆ ಮುಂದಾಗಿದ್ದನ್ನು ಬುಧವಾರ ರೈತರು ತಡೆದು ಪ್ರತಿಭಟಿಸಿ ಗುತ್ತಿಗೆದಾರರು ಸರ್ವೆಗೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿದರು.

ರೈತರ ಜಮೀನನ್ನು ಅಧಿಕೃತವಾಗಿ ಸ್ವಾಧೀನ ಪಡಿಸಿಕೊಳ್ಳದೆ ಜಮೀನಿನಲ್ಲಿ ಪ್ರವೇಶಿಸಿದ್ದನ್ನು ತೀವ್ರವಾಗಿ ಖಂಡಿಸಿದ ರೈತರು, ತರೀಕೆರೆ ಪಟ್ಟಣದ ರಾಮಣ್ಣ ಕೆರೆಯ ಬಳಿ ರೈತರ ಕೃಷಿ ಭೂಮಿಗೆ ಅಕ್ರಮವಾಗಿ ಪ್ರವೇಶಿಸಿರುವ ಗುತ್ತಿಗೆದಾರರು ಅಲ್ಲಿನ ರೈತರಿಗೆ ಬೆದರಿಸಿ ತೆಂಗು ಮತ್ತು ಅಡಿಕೆ ತೋಟಗಳನ್ನು ಕಡಿದು ಕಾಲುವೆ ನಿರ್ಮಿಸಿದ್ದಾರೆ ಎಂದು ರೈತರು ಉಪ ವಿಭಾಗಾಧಿಕಾರಿಗಳಿಗೆ ದೂರು ನೀಡಿದರು.

ಭದ್ರಾ ಮೇಲ್ದಂಡೆ ಯೋಜನೆಯ ಯಾವುದೇ ಕಾರ್ಯವನ್ನು ರೈತರ ಗಮನಕ್ಕೆ ತಾರದೆ ಸರ್ಕಾರ ಮತ್ತು ಗುತ್ತಿಗೆದಾರರು ಮುಂದಾದಲ್ಲಿ ತೀವ್ರತರ ಹೋರಾಟವನ್ನು ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಸಿದರು.

ರೈತರ ಆಕ್ಷೇಪಣೆಗಳಿಗೆ ಉತ್ತರಿಸಿದ ಉಪ ವಿಭಾಗಾಧಿಕಾರಿ ಅನುರಾಧಾ, ಕಂದಾಯ ಇಲಾಖೆಯಿಂದ ಭೂಮಿಯನ್ನು ಗುತ್ತಿಗೆದಾರರಿಗೆ ವರ್ಗಾಯಿಸಿಲ್ಲ ಈ ಪ್ರದೇಶದಲ್ಲಿ ನಡೆದ ಕಾಮಗಾರಿ ಬಗ್ಗೆ ತಮಗೆ ಮಾಹಿತಿಯಿಲ್ಲ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮವನ್ನು ತೆಗೆದು ಕೊಳ್ಳಲಾಗುವುದು ಎಂದರು.

ಉಪ ವಿಭಾಗಾಧಿಕಾರಿಗಳ ಉತ್ತರಕ್ಕೆ ತೃಪ್ತರಾಗದ ರೈತರು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ರೈತರ ಕೃಷಿಭೂಮಿಗೆ ಪ್ರತಿ ಎಕರೆಗೆ ರೂ.40 ಲಕ್ಷ ಹಣವನ್ನು ಬಿಡುಗಡೆ ಮಾಡುವ ಆದೇಶ ಮತ್ತು ತಾಲ್ಲೂಕಿನ ರೈತರಿಗೆ ಭದ್ರಾ ನದಿಯ ನೀರಿನ ಹಕ್ಕನ್ನು ಕಾಯ್ದಿರಿಸಿ ಅಧಿಕೃತ ಆದೇಶವನ್ನು ಸರ್ಕಾರ ಹೊರಡಿಸುವವರೆಗೆ ರೈತರ ಹೋರಾಟ ನಿಲ್ಲುವುದಿಲ್ಲ ಮತ್ತು ಯೋಜನೆಯ ಕಾರ್ಯಕ್ಕೆ ಮುಂದಾಗಲು ಬಿಡುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ರೈತರು ದೂರನ್ನು ದಾಖಲಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹಾಲೇಶಪ್ಪ, ಈಶ್ವರಪ್ಪ, ರುದ್ರಪ್ಪ, ಸುರೇಶ್, ರಾಜಶೇಖರ್, ಸೋಮಶೇಖರ್, ಧರ್ಮರಾಜ್, ಕಾಂತರಾಜ್, ನೀಲಕಂಠ ಚಾಕೋನಹಳ್ಳಿ, ಕೆ.ಹೊಸೂರು ಮತ್ತಿ ಕಸಬಾ ಹೋಬಳಿಯ ನೂರಾರು ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT