ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಭೂಮಿ ಮರಳಿಸಲು ಆಗ್ರಹ

Last Updated 29 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಬಿಎಸ್‌ಎಎಲ್ ಸಂಸ್ಥೆಯ ಉದ್ದೇಶಿತ ಕಾರ್ಖಾನೆ ಸ್ಥಾಪನೆಗಾಗಿ 15 ವರ್ಷಗಳ ಹಿಂದೆಯೇ ಸ್ವಾಧೀನ ಪಡಿಸಿಕೊಂಡಿರುವ 746 ಎಕರೆ ಕೃಷಿ ಭೂಮಿಯನ್ನು ರೈತರಿಗೆ ವಾಪಸ್ ನೀಡಬೇಕು ಎಂದು ಆಗ್ರಹಿಸಿ ಭೂ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಬುಧವಾರ ಇಲ್ಲಿ  ಪ್ರತಿಭಟನೆ ನಡೆಸಿದರು.

ರಾಜ್ಯ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಯು. ಬಸವರಾಜ್ ಮಾತನಾಡಿ, 1995 ಮತ್ತು 98ರಲ್ಲಿ ಕೆಐಎಡಿಬಿಯು ತಾಲ್ಲೂಕಿನ ಬೇವಿನಹಳ್ಳಿ, ಕಕ್ಕಬೇವಿನಹಳ್ಳಿ, ಅಮರಾಪುರ, ಟಿ.ಬೂದಿಹಾಳ್, ಚಾಗನೂರು ಮತ್ತಿತರ ಗ್ರಾಮಗಳ ಕೃಷಿ ಭೂಮಿ ವಶಪಡಿಸಿಕೊಂಡಿದ್ದು, ಸಮರ್ಪಕ ಪರಿಹಾರವನ್ನೂ ನೀಡದ್ದರಿಂದ ರೈತ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಆರೋಪಿಸಿದರು. ಬಿಎಸ್‌ಎಎಲ್ (ಐಎಸ್‌ಪಿ) ಕಾರ್ಖಾನೆಗೆ ಮೊದಲ ಹಂತದಲ್ಲಿ 1,169 ಎಕರೆ ಭೂಮಿಯನ್ನು ಕಡಿಮೆ ದರ ನೀಡಿ ಖರೀದಿಸಲಾಗಿದೆ.

ನಂತರ 2ನೇ ಹಂತದಲ್ಲೂ ಕೆಐಎಡಿಬಿ ವಶಪಡಿಸಿಕೊಂಡಿದೆ. ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡುವ ಹಾಗೂ ಗ್ರಾಮ ದತ್ತು ತೆಗೆದುಕೊಳ್ಳುವ ಭರವಸೆ ನೀಡಲಾಗಿತ್ತು. ಆದರೆ, ಭೂಮಿ ವಶಪಡಿಸಿಕೊಂಡು 15ವರ್ಷ ಕಳೆದರೂ ಈವರೆಗೆ ಯಾವುದೇ ಭರವಸೆ ಈಡೇರಿಲ್ಲ. ಜಮೀನು ಇಲ್ಲದೆ ರೈತರು ನಿರುದ್ಯೋಗಿಗಳಾಗಿ, ವ್ಯವಸಾಯದಿಂದಲೂ ವಂಚಿತರಾಗಿ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಸಮಿತಿ ಮುಖಂಡರಾದ ಮಲ್ಲಿಕಾರ್ಜುನ ರೆಡ್ಡಿ, ಹನುಮಂತಪ್ಪ, ಗವಿಸಿದ್ಧ, ನಾಗರಾಜ್, ಸುರೇಶ್, ಲಕ್ಷ್ಮಣ, ತಿಮ್ಮಪ್ಪ, ತಿಪ್ಪಯ್ಯ, ದೇವೇಂದ್ರಪ್ಪ, ಮಹೇಶ್, ಅಯ್ಯನಗೌಡ, ಲಿಂಗಣ್ಣ, ಬಸಪ್ಪ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT