ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಮಾರುಕಟ್ಟೆ ಜ್ಞಾನ ಅತ್ಯಗತ್ಯ

Last Updated 19 ಅಕ್ಟೋಬರ್ 2012, 8:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಾರುಕಟ್ಟೆ ವ್ಯವಸ್ಥೆ ಮತ್ತು ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದ ಮಾಹಿತಿ ಇಲ್ಲದೆ ರೈತರಿಗೆ ಹೆಚ್ಚಿನ ಪ್ರಗತಿ, ಆರ್ಥಿಕ ಲಾಭ ಗಳಿಸಲು ಸಾಧ್ಯವಾಗುತ್ತಿಲ್ಲ ಎಂದು ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಡಿ.ಎಲ್.ಮಹೇಶ್ವರಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ನಂದಿ ಗ್ರಾಮದ ತೋಟವೊಂದರಲ್ಲಿ ಗುರುವಾರ ನಡೆದ `ಬರ್ಡ್ ಆಫ್ ಪೆರಾಡೈಸ್~ ಹೂಗಳ ಕುರಿತ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಾರುಕಟ್ಟೆ ವಹಿವಾಟಿನ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನದ ಅಗತ್ಯವಿದೆ ಎಂದರು.

ಬಹುತೇಕ ರೈತರು ಅತ್ಯುತ್ತಮ ಬೆಳೆಗಳನ್ನೇ ಬೆಳೆಯುತ್ತಾರೆ. ಆದರೆ ಕೆಲ ಸಂದರ್ಭಗಳಲ್ಲಿ ಮಾರುಕಟ್ಟೆ ಕುರಿತು ಸಮಗ್ರ ಮಾಹಿತಿ ಮತ್ತು ದೃಷ್ಟಿಕೋನ ಇಲ್ಲದೆ ಬೆಳೆ ಮಾರಾಟದಲ್ಲಿ ಮತ್ತು ಲಾಭ ಗಳಿಸುವಲ್ಲಿ ವಿಫಲರಾಗುತ್ತಾರೆ. ನೆರೆ ಗ್ರಾಮಗಳ ಕೃಷಿ ಚಟುವಟಿಕೆ ನೋಡಿ ಕೃಷಿಯಲ್ಲಿ ತೊಡಗುವ ಕೆಲ ರೈತರು ಒಂದೇ ರೀತಿ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಾರೆ.

ಒಬ್ಬರು ಟೊಮೆಟೊ ಬೆಳೆದರೆ, ಎಲ್ಲರೂ ಟೊಮೆಟೊ ಬೆಳೆಯುತ್ತಾರೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ಬೆಳೆಯ ಗುಣಮಟ್ಟದ ಬೆಲೆ ಕುಸಿಯುತ್ತದೆ. ಜೊತೆಗೆ ಇತರ ಸಮಸ್ಯೆಗಳಿಗೂ ಕಾರಣವಾಗುತ್ತದೆ ಎಂದು ಅವರು ವಿಷಾದಿಸಿದರು.

ರೈತರಿಗೆ ಈ ರೀತಿ ತೊಂದರೆ ಆಗಬಾರದು ಎಂಬ ಉದ್ದೇಶದಿಂದಲೇ ತೋಟಗಾರಿಕೆ ಇಲಾಖೆ ರಾಜ್ಯದಲ್ಲೆಡೆ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ. ತರಬೇತಿ, ಕಾರ್ಯಾಗಾರದ ಮೂಲಕ ರೈತರಿಗೆ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ, ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಅಂತರ್ಜಲದ ಪ್ರಮಾಣ ಕುಸಿಯುತ್ತಿದ್ದರೂ ರೈತ ಸಮುದಾಯ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದೇ ಸಮಾಧಾನದ ಸಂಗತಿ.

ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆ ಜಾರಿಗೊಳಿಸುತ್ತಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಕೃಷಿ ವಿಜ್ಞಾನಿ ಡಾ.ಅನುರಾಧಾ ಸಾನೆ, ಬೆಂಗಳೂರಿನ ಹೆಬ್ಬಾಳದ ಅಂತರರಾಷ್ಟ್ರೀಯ ಪುಷ್ಪ ಮಾರುಕಟ್ಟೆ ಹರಾಜು ಅಧಿಕಾರಿ ಸಿ.ಮೂರ್ತಿ, ಮುದ್ದೇನಹಳ್ಳಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ವ್ಯವಸ್ಥಾಪಕ ವಿ.ಸುನೀಲ್,  `ಬರ್ಡ್ ಆಫ್ ಪೆರಾಡೈಸ್~ ಹೂ ಬೆಳೆಗಾರರ ಸಂಘದ ಅಧ್ಯಕ್ಷ ಶ್ರೀನಿವಾಸ್, ನಂದಿ ಗ್ರಾಮದ ಮುಖಂಡ ಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅರಳಲಿವೆ `ಬರ್ಡ್ ಆಫ್ ಪೆರಾಡೈಸ್~
ಚಿಕ್ಕಬಳ್ಳಾಪುರ:
ಜಿಲ್ಲೆಯಲ್ಲಿ `ಬರ್ಡ್ ಆಫ್ ಪೆರಾಡೈಸ್~ ಎಂಬ ಅಲಂಕಾರಿಕ ಹೂಗಳನ್ನು ಬೆಳೆಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ. `ಪುಷ್ಪೋದ್ಯಮಕ್ಕೆ ಹೆಚ್ಚಿನ ಬೇಡಿಕೆಯಿರುವ ಹಿನ್ನೆಲೆಯಲ್ಲಿ `ಬರ್ಡ್ ಆಫ್ ಪೆರಾಡೈಸ್~ ಹೂಗಳನ್ನೇ ಬೆಳೆಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದೇವೆ. ಹಲವು ಬಗೆ ಸವಾಲುಗಳಿದ್ದರೂ ಸಮರ್ಥವಾಗಿ ನಿಭಾಯಿಸಲು ಪ್ರಯತ್ನಿಸುತ್ತೇವೆ~ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಕೆಲ ಗ್ರಾಮಗಳನ್ನು ಆಯ್ದುಕೊಂಡು, ಅಲ್ಲಿ ಹೂಗಳನ್ನು ಬೆಳೆಸಲು ಮುಂದಾಗಿರುವ ಇಲಾಖೆ ಗುರುವಾರ ಪ್ರಥಮ ಹೆಜ್ಜೆಯಿಟ್ಟಿತು. ತಾಲ್ಲೂಕಿನ ನಂದಿ ಗ್ರಾಮದ ತೋಟದಲ್ಲಿ `ಬರ್ಡ್ ಆಫ್ ಪೆರಾಡೈಸ್~ ಹೂಗಳ ಕುರಿತು ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕಾರ್ಯಾಗಾರ ನಡೆಯಿತು.

`ಸಮಶೀತೋಷ್ಣ ವಲಯದಲ್ಲಿ ಬೆಳೆಯುವ `ಬರ್ಡ್ ಆಫ್ ಪೆರಾಡೈಸ್~ ಮೂಲತಃ ದಕ್ಷಿಣ ಆಫ್ರಿಕಾದ ಕಾಡುಜಾತಿ ಹೂ. ಹಕ್ಕಿಗಳು ಹೋಲುವಂತೆ ಅರಳುವ ಹೂಗಳು ಸುಮಾರು 5 ಅಡಿ ಎತ್ತರ ಬೆಳೆಯುತ್ತವೆ. ಮಿತವಾಗಿ ನೀರನ್ನು ಬಳಸಿಕೊಳ್ಳುವ ಈ ಸಸಿಯು ನಿಧಾನವಾಗಿ ಕೇಸರಿ ಮತ್ತು ನೀಲಿ ಬಣ್ಣದ ಹಕ್ಕಿಯಾಕಾರದ ಹೂಗಳನ್ನು ಅರಳಿಸುತ್ತದೆ.

ಬೀಜದ ಗಡ್ಡೆ ಮತ್ತು ಅಂಗಾಂಶ ಬೇಸಾಯದಿಂದ ಸಸ್ಯಾಭಿವೃದ್ಧಿ ಮಾಡಬಹುದು. ಬೀಜಗಳನ್ನು ಒಂದು ರಾತ್ರಿ ನೆನೆಸಿ, ಬಿತ್ತನೆ ಮಾಡುವುದರಿಂದ ಒಳ್ಳೆ ಮೊಳಕೆ ಬರುತ್ತದೆ~ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ, ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಡಿ.ಎಲ್.ಮಹೇಶ್ವರಪ್ಪ, ಜಂಟಿ ನಿರ್ದೇಶಕ ದೇವರಾಜ್, `ಬರ್ಡ್ ಆಫ್ ಪೆರಾಡೈಸ್~ ಬೆಳೆಗಾರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT