ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಯುವಪಡೆ ಸಾರ್ಥಕ ಶ್ರಮದಾನ

Last Updated 28 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಯಾದಗಿರಿ: ಸರ್ಕಾರವೇ ಎಲ್ಲವನ್ನೂ ಮಾಡಲಿ ಎನ್ನುವ ಮನೋಭಾವ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಯುವಕರು, ರೈತರು ಸೇರಿ ಮಾದರಿ ಕೆಲಸವನ್ನು ಮಾಡಿದ್ದಾರೆ. ಕೈಯಲ್ಲಿ ಸಲಕೆ, ಹಾರೆಗಳನ್ನು ಹಿಡಿದು, ನೀರು ಹರಿಯುವ ಕಾಲುವೆಯಲ್ಲಿನ ಹೂಳು ತೆಗೆದು ಹಾಕಿದ್ದಾರೆ. ಇದಕ್ಕೆ ಗುಲ್ಬರ್ಗ ನೀರಾವರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಕಾಡಾ)ದ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ ಸಾಥ್ ನೀಡಿದ್ದಾರೆ.

ತಾಲ್ಲೂಕಿನ ಹತ್ತಿಕುಣಿ ಜಲಾಶಯದಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಕಾಲುವೆಗಳಲ್ಲಿ ಹೂಳು ತುಂಬಿದ್ದರಿಂದ ರೈತರ ಜಮೀನಿಗೆ ಸಮರ್ಪಕವಾಗಿ ನೀರು ಸಿಗುತ್ತಿರಲಿಲ್ಲ. ಹಲವಾರು ಬಾರಿ ಕಾಡಾ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನ ಆಗಿರಲಿಲ್ಲ. ಜಲಾಶಯದಲ್ಲಿ ನೀರಿದ್ದರೂ, ಬೆಳೆಗಳು ಒಣಗುವ ಸ್ಥಿತಿ ಬಂದೊದಗಿತ್ತು.

ಕಾಡಾ ಅಧ್ಯಕ್ಷರಾದ ನಂತರ ಗಿರೀಶ ಮಟ್ಟೆಣ್ಣವರ, ನಾಲ್ಕೈದು ಬಾರಿ ಹತ್ತಿಕುಣಿ ಜಲಾಶಯಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದರು. ಬಂದಾಗೊಮ್ಮೆ ನೀರು ಹರಿಸುವಂತೆ ರೈತರು ಮನವಿ ಮಾಡುತ್ತಲೇ ಇದ್ದರು. ರೈತರ ಗೋಳು ನೋಡಲಾಗದ ಗಿರೀಶ ಮಟ್ಟೆಣ್ಣವರ ಇದಕ್ಕೊಂದು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಯೋಚಿಸಿದರು. ಅದರ ಫಲವಾಗಿಯೇ `ನೇಗಿಲ ಯೋಗಿಗೆ ಶ್ರಮದಾನ~ ಎನ್ನುವ ಕಾರ್ಯಕ್ರಮ ಸಿದ್ಧವಾಯಿತು.

ಕಾಲುವೆಗಳಲ್ಲಿ ತುಂಬಿರುವ ಹೂಳನ್ನು ತೆಗೆಯಲು ಯುವಕರು, ರೈತರನ್ನು ಒಳಗೊಂಡ ಸುಮಾರು 700 ಜನರ ಪಡೆಯೇ ಸಿದ್ಧವಾಯಿತು. ನ.19 ರಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ನಿರಂತರವಾಗಿ ಹೂಳು ತೆಗೆಯುವ ಕೆಲಸ ಆರಂಭವಾಯಿತು. ಮಟ್ಟೆಣ್ಣವರ ಬಣ್ಣದ ಬನಿಯನ್, ಪಂಚೆ ತೊಟ್ಟು ಕಾಲುವೆಯ ಹೂಳು ತೆಗೆಯಲು ಕೈಜೋಡಿಸಿದರು. 

ಇದರ ಪರಿಣಾಮವಾಗಿ ಸುಮಾರು 9 ಕಿ.ಮೀ. ಉದ್ದದ ಕಾಲುವೆಯು ನೀರು ಹರಿಸಲು ಸಿದ್ಧವಾಯಿತು. ಕಂದಕೂರು, ಹತ್ತಿಕುಣಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಸುಮಾರು 12 ಹಳ್ಳಿಗಳ ರೈತರ ಜಮೀನುಗಳಿಗೆ ನೀರು ಒದಗಿಸಲು ಕಾಲುವೆ ಸಿದ್ಧವಾಗಿ ನಿಂತಿದೆ. ಮಂಗಳವಾರ (ನ.29) ಬೆಳಿಗ್ಗೆ ಕಾಲುವೆಗೆ ನೀರು ಹರಿಸಲಾಗುತ್ತಿದೆ.

ಮಳೆಯನ್ನೇ ನಂಬಿ ಈಗಾಗಲೇ ಬಿತ್ತನೆ ಮಾಡಿರುವ ರೈತರು ಮಳೆ ಇಲ್ಲದೇ ಆತಂಕಕ್ಕೆ ಒಳಗಾಗಿದ್ದರು. ಇಂತಹ ಗಂಭೀರ ಸ್ಥಿತಿಯಲ್ಲಿ ಜಲಾಶಯದ ಕಾಲುವೆಗಳಲ್ಲಿ ನೀರು ಹರಿಸುತ್ತಿರುವುದು ರೈತರಿಗೆ ನೆಮ್ಮದಿಯನ್ನು ಉಂಟು ಮಾಡಿದೆ.

ಮಾದರಿ ಕಾರ್ಯ: ಹತ್ತಿಕುಣಿ ಜಲಾಶಯದ ಕಾಲುವೆಗಳಲ್ಲಿ ಮಂಗಳವಾರದಿಂದ ನೀರು ಹರಿಸಲಾಗುತ್ತಿದೆ. ರೈತರು, ಯುವಕರು ಸೇರಿ, ನೇಗಿಲ ಯೋಗಿಗೆ ಶ್ರಮದಾನ ಎನ್ನುವ ಕಾರ್ಯಕ್ರಮದ ಮೂಲಕ ಕಾಲುವೆ ಹೂಳು ತೆಗೆಯುವಲ್ಲಿ ಯಶಸ್ವಿ ಆಗಿರುವುದರಿಂದ ಇದೀಗ ಕಾಲುವೆಗೆ ನೀರು ಬಿಡುವಂತಾಗಿದೆ ಎಂದು ಗಿರೀಶ ಮಟ್ಟೆಣ್ಣವರ `ಪ್ರಜಾವಾಣಿ~ಯೊಂದಿಗೆ ಸಂತಸ ಹಂಚಿಕೊಂಡರು.

ಕಾಲುವೆಯ ಹೂಳು ತೆಗೆಯಲು ಟೆಂಡರ್ ಕರೆದು ಪ್ರಕ್ರಿಯೆ ನಡೆಸಲು ಸಾಕಷ್ಟು ವಿಳಂಬವಾಗುತ್ತಿತ್ತು. ಯಾದಗಿರಿ ತಾಲ್ಲೂಕಿನಲ್ಲಿ ಮೊದಲೇ ಬರಗಾಲದ ಛಾಯೆ ಇದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಜಮೀನಿಗೆ ಆದಷ್ಟು ಶೀಘ್ರದಲ್ಲಿ ನೀರು ಹರಿಸಬೇಕಾಗಿತ್ತು. ಇದೆಲ್ಲವನ್ನು ಪರಿಗಣಿಸಿ, ನೇಗಿಲ ಯೋಗಿಗೆ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೈತರು, ಯುವಕರು ಸೇರಿ 700 ಜನರು ಭಾಗವಹಿಸಿ ಒಂದೇ ದಿನದಲ್ಲಿ 9 ಕಿ.ಮೀ. ಉದ್ದದ ಕಾಲುವೆಯಲ್ಲಿನ ಹೂಳು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT