ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ವರ ಈ `ಬೀಜ ಭಂಡಾರ'

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಉತ್ತಮ ಗುಣಮಟ್ಟದ ಬಿತ್ತನೆ ಬೀಜ ರೈತರ ಹಕ್ಕು. ಇದು ತುಮಕೂರು ಜಿಲ್ಲೆಯ ಕುಣಿಗಲ್, ಗುಬ್ಬಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದರ ಉದ್ದೇಶ. ಇದೇ ಕಾರಣಕ್ಕೆ ಸಂಸ್ಥೆಯಿಂದ ಈಗ `ರೈತರಿಂದ ರೈತರಿಗಾಗಿ ರೈತರಿಗೋಸ್ಕರ ರೈತ ಪ್ರಭುತ್ವದ ಬೀಜ ಭಂಡಾರ'ಕ್ಕೆ ಚಾಲನೆ.

ಈ ಭಂಡಾರದಲ್ಲಿ ಒಂದಲ್ಲ, ಎರಡಲ್ಲ ಅರವತ್ತೊಂದಕ್ಕೂ ಹೆಚ್ಚು ಬತ್ತದ ನಾಟಿ ತಳಿ, ಮೂವತ್ತಕ್ಕೂ ಹೆಚ್ಚು ರಾಗಿಯ ನಾಟಿ ತಳಿಗಳ ಭರಪೂರ ಸಂಗ್ರಹವಿದೆ. ಬತ್ತದ ತಳಿಗಳಲ್ಲಿ ಚಿನ್ನಪೊನ್ನಿ, ದೊಡ್ಡಿಬತ್ತ, ಅಂದನೂರು ಸಣ್ಣ, ರಾಯಚೂರು ಸಣ್ಣ, ಸೇಲಂ ಸಣ್ಣ, ಮುತ್ತಿನ ಸಣ್ಣ, ಗೌರಿ ಸಣ್ಣ, ರತ್ನಚೂಡಿ, ರಾಜಮುಡಿ, ಸಿದ್ದ ಸಣ್ಣ, ಜಡೆ ಸಣ್ಣ ತಳಿಗಳಿಗೆ ಹೆಚ್ಚು ಬೇಡಿಕೆ. ರಾಗಿಯಲ್ಲಿ ಕೆಂಪು, ಮಜ್ಜಿಗೆ, ಬೋಂಡ, ನಾಗಮಲೆ, ಪಿಚ್ಚಕಡ್ಡಿ, ಹೈನು, ಮಳಲಿ ತಳಿಗಳಿಗೆ ಹೆಚ್ಚು ಬೇಡಿಕೆ. ಇವು ದೇಶಿ ತಳಿ ಎನ್ನುವ ವೈಶಿಷ್ಟ್ಯದ ಜತೆ ಸುಧಾರಿತ ತಳಿಗಳು. ಇದರ ಜತೆ ಕುಂಬಳ, ಹೀರೆ, ಸೋರೆ, ಬೆಂಡೆ, ಬದನೆ, ನೆಲಗಡಲೆ... ಇತರ ಬೆಳೆಗಳ ನಾಟಿ ತಳಿಯೂ ಇಲ್ಲಿ ಸಿಗುತ್ತವೆ.

ಬರ, ರೋಗ ನಿರೋಧಕ ಶಕ್ತಿಯುಳ್ಳ ಸುಧಾರಿತ ತಳಿಗಳನ್ನು ಸಂಗ್ರಹಿಸಲು ಸಂಸ್ಥೆ ಎರಡು ವರ್ಷದ ಹಿಂದೆ ಹಳ್ಳಿ ಹಳ್ಳಿಗಳಲ್ಲೂ `ಬೀಜ ಭಿಕ್ಷೆ' ಅಭಿಯಾನ ನಡೆಸಿದೆ. ಜತನದಿಂದ ಕಾಪಿಟ್ಟುಕೊಂಡು ದೇಶಿ ತಳಿ ಬಳಸುತ್ತಿದ್ದ ರೈತರ ಮನವೊಲಿಸಿ ಬೀಜ ಸಂಗ್ರಹಿಸಿದೆ. ಈ ಬೀಜಗಳನ್ನು ಸಂರಕ್ಷಿಸುವ ಉದ್ದೇಶದಿಂದ ಆಯ್ದ ರೈತರಿಗೆ ನೀಡಿ ಬೀಜೋತ್ಪಾದನೆಗೆ ಮನ್ನಣೆ ನೀಡಿದೆ.

ಇದರಿಂದ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ರೈತರಿಗೆ ಸುಲಭವಾಗಿ ಹಳ್ಳಿಗಳಲ್ಲೇ ಸಿಗುತ್ತಿವೆ. ಇದಕ್ಕಾಗಿ ಪ್ರಮುಖ ಗ್ರಾಮಗಳಲ್ಲಿ ಬೀಜ ಭಂಡಾರ ಆರಂಭಿಸಿದೆ. ಕುಣಿಗಲ್ ತಾಲ್ಲೂಕಿನಲ್ಲಿ 38, ಗುಬ್ಬಿ ತಾಲ್ಲೂಕಿನಲ್ಲಿ 15 ಬೀಜ ಭಂಡಾರಗಳು ಕಾರ್ಯ ನಿರ್ವಹಿಸುತ್ತಿವೆ. ವರ್ಷದಿಂದ ವರ್ಷಕ್ಕೆ ಇದರ ವ್ಯಾಪ್ತಿ ಹೆಚ್ಚುತ್ತಿದೆ.

ಇದರ ಜತೆ ಸಂಸ್ಥೆ ನಾಟಿ, ದೇಶೀಯ ಸುಧಾರಿತ ತಳಿಗಳ ಸಂರಕ್ಷಣೆ, ಸುಧಾರಣೆ, ಸಂವರ್ಧನೆ ಮಾಡುವ ಜತೆ ಗುಣಮಟ್ಟ ಕಾಯ್ದುಕೊಳ್ಳುವ ಕೆಲಸವನ್ನು ನಿರ್ವಹಿಸುತ್ತಿದೆ. ಇದರೊಟ್ಟಿಗೆ ರೈತರ ನಡುವೆ ಪರಸ್ಪರ ಬೀಜ ವಿನಿಮಯಕ್ಕೂ ವೇದಿಕೆ ಒದಗಿಸಿದೆ.

ಶ್ರೀ ಪದ್ಧತಿಯಲ್ಲಿ ಬತ್ತ
ಬತ್ತದ ಬೆಳೆಯಲ್ಲಿ ಬೀಜ, ಗೊಬ್ಬರ, ಸಮಯ, ಹಣ ಉಳಿಸುವ `ಶ್ರೀ ಪದ್ಧತಿ' ಅಳವಡಿಸಿಕೊಳ್ಳಲು ಸಂಸ್ಥೆ ಪ್ರೋತ್ಸಾಹ ನೀಡುವ ಜತೆ ಸಹಕಾರ ಮಾರ್ಗದರ್ಶನ ನೀಡಿದೆ. ಇದರಿಂದ ಕುಣಿಗಲ್‌ನಲ್ಲಿ 350, ಗುಬ್ಬಿ ತಾಲ್ಲೂಕಿನಲ್ಲಿ 50 ಎಕರೆಯಲ್ಲಿ ಬತ್ತ ಬೆಳೆದು ಬಂಪರ್ ಬೆಳೆ ತೆಗೆಯಲಾಗಿದೆ.

ಶ್ರೀ ಪದ್ಧತಿಯಲ್ಲಿ ಎಕರೆಗೆ 25 ಕೆ.ಜಿ. ಬೀಜದ ಬದಲು, ಕೇವಲ ಎರಡು ಕೆ.ಜಿ. ಬಳಕೆ. ಸಾಲು ನಾಟಿ ಮಾಡುವುದರಿಂದ ಕಳೆ ಕೀಳಲು ಅನುಕೂಲ. ಕಳೆ ತೆಗೆಯಲು ಸಂಸ್ಥೆ `ವೀಡರ್' ಯಂತ್ರ ಒದಗಿಸಿದೆ. ಇದರಿಂದ ಹಣ, ಸಮಯ ಎರಡೂ ಉಳಿತಾಯ. ರೋಗ ನಿಯಂತ್ರಣಕ್ಕಾಗಿ ಸ್ಥಳೀಯ ಗಿಡಮೂಲಿಕೆಗಳ ಮತ್ತು ಬೇವಿನ ಕಷಾಯದ ಮದ್ದು ಬಳಕೆ. ಎರೆಹುಳು ಗೊಬ್ಬರ, ಮನೆ ಗೊಬ್ಬರ, ಹುರುಳಿ ಸೊಪ್ಪು ಮತ್ತಿತರ ಸಾವಯವ ಗೊಬ್ಬರದ ಅವಲಂಬನೆ. ಎಕರೆಗೆ 20ರಿಂದ 25 ಕ್ವಿಂಟಲ್ ಸಹಜ ಇಳುವರಿ ಬರುತ್ತಿದೆ.

ಗ್ರಾಮಗಳಲ್ಲಿ ರೈತರು ಸಂಘಟಿತರಾಗಿ ಬೇಸಾಯ ಮಾಡಿದ್ದಾರೆ. ಇದರಿಂದ ಸಾಕಷ್ಟು ಅನುಕೂಲವಾಗಿದೆ. ಸಮಯ, ಹಣದ ಉಳಿತಾಯ, ಕೂಲಿ ಕಾರ್ಮಿಕರ ಕೊರತೆ ತಪ್ಪಿದೆ ಎನ್ನುತ್ತಾರೆ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಹೋಬಳಿ ಹೊಸಹಳ್ಳಿಯ ವಿನಾಯಕ ಸುಜೀವನ ಒಕ್ಕೂಟದ ರೈತ ಶಂಕರಲಿಂಗೇಗೌಡ.

ಮೊದಲ ಬಾರಿ ನೂರು ಎಕರೆ ಕಬ್ಬಿನ ಬೆಳೆಗೂ ಶ್ರೀ ಪದ್ಧತಿ ಅಳವಡಿಸಲಾಗಿದೆ. ಪ್ರಸಕ್ತ ವರ್ಷ ಕುಣಿಗಲ್‌ನಲ್ಲಿ ಸಾವಿರ ಎಕರೆ ಬತ್ತ, ಗುಬ್ಬಿಯಲ್ಲಿ 300 ಎಕರೆ ಬತ್ತ, ಕುಣಿಗಲ್‌ನಲ್ಲಿ 500 ಎಕರೆ ಕಬ್ಬು, 300 ಎಕರೆಯಲ್ಲಿ ದೇಶಿ ತಳಿಗಳ ಬಿತ್ತನೆ ನಡೆಸಲು ರೈತರು ಸಜ್ಜಾಗಿದ್ದಾರೆ.

ಪೂರಕ ಚಟುವಟಿಕೆ
ಸಂಸ್ಥೆ ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವ ಜತೆ ಸಮುದಾಯದ ಸಬಲೀಕರಣ ಯೋಜನೆಯಡಿ ಸಂಘಟನೆ, ತರಬೇತಿ, ಸರ್ಕಾರಿ ಸೌಲಭ್ಯ ಮತ್ತು ಸೇವೆ, ಗ್ರಾಮೀಣ ಆರೋಗ್ಯ ಸೇವೆ, ಶಿಕ್ಷಣ ಸೇವೆ ಒದಗಿಸುತ್ತಿದೆ.

  ಜೀವನೋಪಾಯ ಉತ್ತೇಜನದಡಿ ಸುಸ್ಥಿರ ಕೃಷಿ ಹಾಗೂ ಪಶು ಸಂಗೋಪನೆ, ಕಿರು ಉದ್ದಿಮೆ ಸ್ಥಾಪನೆಗೆ ನೆರವು, ಉದ್ಯೋಗ ಒದಗಿಸುವಲ್ಲಿ ನಿರತವಾಗಿದೆ. ಆರ್ಥಿಕ ಸೇರ್ಪಡೆ ಯೋಜನೆಯಡಿ ರೈತರಿಗೆ ಬೆಳೆ ಸಾಲ, ಮಹಿಳಾ ಸಂಘಗಳಿಗೆ ಅವಧಿ ಸಾಲ, ವಿಮಾ ಸೌಲಭ್ಯ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಹಕ ಸೇವಾ ಕೇಂದ್ರಗಳ ಸ್ಥಾಪನೆ ಮತ್ತು ಶೂನ್ಯ ಠೇವಣಿ ಖಾತೆ ತೆರೆಯುವಿಕೆಯಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎನ್ನುತ್ತಾರೆ ಐಡಿಎಫ್ ಸುಜೀವನ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆಂಪೇಗೌಡ. ಸಂಪರ್ಕ ಸಂಖ್ಯೆ -7760970008.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT