ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ವರವಾಗದ ರೈತ ಸಂತೆ ಪ್ರಾಂಗಣ

Last Updated 23 ಜುಲೈ 2012, 8:40 IST
ಅಕ್ಷರ ಗಾತ್ರ

ಬೀದರ್:  ಅದು, ರೈತರಿಗೆ ನೆರವಾಗುವ ಮಹತ್ವಾಕಾಂಕ್ಷೆಯೊಂದಿಗೆ ಸುಮಾರು ಒಂದು ಕೋಟಿ ರೂಪಾಯಿ ರೂಪಾಯಿ ವೆಚ್ಚದಲ್ಲಿ 2007ರಲ್ಲಿ ನಿರ್ಮಾಣವಾದ ರೈತರ ಸಂತೆ ಪ್ರಾಂಗಣ. ಐದು ವರ್ಷ ಕಳೆದರೂ ಉದ್ದೇಶ ಈಡೇರಿಲ್ಲ. ರೈತರಿಗೆ ಲಾಭ ತರುವ ಬದಲಿಗೆ ಕೃಷಿ ಮಾರುಕಟ್ಟೆ ಸಮಿತಿಗೇ ಇದು ಹೊರೆಯಾಗಿದೆ!

ನಗರದ ಗಾಂಧಿಗಂಜ್ ಪ್ರದೇಶದಲ್ಲಿರುವ ರೈತರ ಸಂತೆಯ ದುಃಸ್ಥಿತಿ ಇದು. ರೈತರ ನಿರಾಸಕ್ತಿ, ಮಧ್ಯವರ್ತಿಗಳ ವ್ಯಾಪಾರಿ ಮನೋಭಾವ ಎಲ್ಲದರ ಪರಿಣಾಮ, ಇನ್ನೂ ಸಂತೆಗೆ ರೈತರು ಆಗಮಿಸಿಲ್ಲ. ಹಾಗೇ ಖಾಲಿ ಇರುವ ಸಂತೆ ಈಗ ವಾಹನಗಳ ಪಾರ್ಕಿಂಗ್ ಆಗಿದ್ದರೆ, ರಾತ್ರಿಯವೇಳೆ ಅನೈತಿಕ ಚಟುವಟಿಕೆಗಳಿಗೂ ವೇದಿಕೆಯಾಗಿದೆ ಎಂಬ ದೂರುಗಳಿವೆ.

ಒಂದು ಕಡೆ ವಾಹನಗಳ ಪಾರ್ಕಿಂಗ್ ತಾಣ, ಆಸುಪಾಸಿನಲಿ ಕಸದ ವಿಲೇವಾರಿ, ಬಟ್ಟೆ ಒಣಗಲು ಹಾಕಲು ಸ್ಥಳವಾದ ಗೇಟು ಇದು ರೈತರ ಸಂತೆಯಿಂದ ಆಗುತ್ತಿರುವ ಸದ್ಯದ ಬಳಕೆ. ಮುಖ್ಯ ಮಾರುಕಟ್ಟೆ ಪ್ರಾಂಗಣ ಎಂದೇ ಪ್ರಸಿದ್ಧವಾದ ಗಾಂಧಿಗಂಜ್‌ನ `ರೈತರ ಸಂತೆ~ಗೆ ಈ ದುಃಸ್ಥಿತಿಯಿಂದ ಮುಕ್ತಿ ನೀಡಲು ಅಧಿಕಾರಿಗಳು ಮನಸ್ಸು ಮಾಡಿಲ್ಲ.

ರೈತರ ಸಂತೆಯ ಉಸ್ತುವಾರಿ ಇರುವ ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಾಂತಕುಮಾರ ಪನಸಾಲೆ ಅವರು, ರೈತರ ಅನೂಕುಲಕ್ಕಾಗಿ ಸುಮಾರು ರೂ. 1 ಕೋಟಿ ವೆಚ್ಚದಲ್ಲಿ `ರೈತರ ಸಂತೆ~ ನಿರ್ಮಿಸಲಾಗಿತ್ತು. ಆರಂಭದಲ್ಲಿ ಸ್ವಲ್ಪ ದಿನ ನಡೆದರೂ, ಎರಡು ವರ್ಷಗಳಿಂದ ಸಂತೆಗೆ ರೈತರು ಬಾರದೇ ಬಳಕೆಯಾಗುತ್ತಿಲ್ಲ ಎನ್ನುತ್ತಾರೆ.

ರೈತರ ಸಂತೆ ಬಳಕೆಯಾಗದೇ ಇದ್ದರೂ ಅದರ ನಿರ್ವಹಣೆಗಾಗಿ ಈಗಲೂ ತಿಂಗಳಿಗೆ ರೂ. 12 ರಿಂದ 15 ಸಾವಿರ ವೆಚ್ಚ ಆಗುತ್ತಿದೆ. ಇದ್ದರಿಂದ ಕೃಷಿ ಮಾರುಕಟ್ಟೆ ಸಮಿತಿಗೆ ನಷ್ಟ ಆಗುತ್ತಿದೆ ಎಂದು ಅವರು ವಿವರಿಸುತ್ತಾರೆ.

ಈ ಪರಿಸ್ಥಿತಿಯನ್ನು  ತಪ್ಪಿಸಲು ಸಂತೆಯಲ್ಲಿರುವ ಕಟ್ಟೆಗಳನ್ನು ಸುತ್ತಮುತ್ತಲಿನ ವ್ಯಾಪಾರಿಗಳಿಗೆ ಬಾಡಿಗೆ ನೀಡಲು ಅನುಮತಿ ಕೋರಿ ಈಗಾಗಲೇ ಕೃಷಿ ಮಾರುಕಟ್ಟೆಯ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ.

ಅನುಮತಿಯನ್ನು ಆಧರಿಸಿ ಮುಂದಿನ ದಿನಗಳಲ್ಲಿ ಒಟ್ಟಾರೆ 25 ಕಟ್ಟೆಗಳನ್ನು ರೈತರಿಗಾಗಿ ಉಳಿಸಿಕೊಂಡು ಉಳಿದ ಕಟ್ಟೆಗಳು ಸ್ಥಳೀಯ ತರಕಾರಿ ವ್ಯಾಪಾರಸ್ಥರಿಗೆ ತಿಂಗಳಿಗೆ ರೂ. 500 ರಂತೆ ಬಾಡಿಗೆಗೆ ನೀಡುವ ಚಿಂತನೆ ನಡೆಸಲಾಗುತ್ತದೆ. ಬಹುಶಃ ಇದು, ಜಾರಿಗೆ ಬಂದರೆ ಸಂತೆಯ ನಿರ್ವಹಣೆಗಾಗಿ ಆಗುತ್ತಿರುವ ವೆಚ್ಚವನ್ನಾದರೂ ಭರಿಸಬಹುದು ಎನ್ನುತ್ತಾರೆ.

ರೈತರು ತಾವು ಬೆಳೆದ ತರಕಾರಿಯನ್ನು ಸ್ವತಃ ಮಾರಾಟ ಮಾಡಿ ಹೆಚ್ಚಿನ ಲಾಭ ಪಡೆಯಲಿ ಎಂಬ ಉದ್ದೇಶದಿಂದ 2007ರಲ್ಲಿ ಆಗ ಉಸ್ತುವಾರಿ ಸಚಿವರು ಆಗಿದ್ದ, ಹಾಲಿ ಶಾಸಕ ಬಂಡೆಪ್ಪ ಕಾಶೆಂಪೂರ್ ಅವಧಿಯಲ್ಲಿ ಸ್ಥಾಪಿಸಲಾಗಿತ್ತು. ಆಗಿನ ಕೃಷಿ ಮಾರುಕಟ್ಟೆ ಸಚಿವ ಶರಣಬಪ್ಪ ದರ್ಶನಾಪೂರ್ ಉದ್ಘಾಟಿಸಿದ್ದರು.

ಆದರೆ, ಈಗಲೂ ವ್ಯಾಪಾರ ವಹಿವಾಟು ಸಂತೆಯ ಆಚೆಗೆ ಸೀಮಿತಗೊಂಡಿದ್ದು, ಸದ್ಯ ವ್ಯಾಪಾರಿಗಳು ತಮ್ಮ ದಿನನಿತ್ಯದ ಕಸ, ತ್ಯಾಜ್ಯವನ್ನು ಸಂತೆಯ ಆವರಣದಲ್ಲಿ ವಿಲೇವಾರಿ ಮಾಡುತ್ತಿದ್ದಾರೆ. ಉಳಿದಂತೆ, ಸಾರ್ವಜನಿಕರಿಗೆ ಬಯಲು ಶೌಚಾಲಯವೂ ಆಗುತ್ತಿದೆ. ಅಧಿಕಾರಿಗಳು ಇದನ್ನು ಸದುಪಯೋಗ ಪಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT