ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಶೇ 1ರ ಬಡ್ಡಿಗೆ ಸಾಲ: ಸಿಎಂ

Last Updated 13 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ‘ರೈತ ಹೋರಾಟಗಾರ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ ಯೋಜನೆಯೊಂದನ್ನು ಕೃಷಿ ಬಜೆಟ್‌ನಲ್ಲಿ ಘೋಷಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಪ್ರೊ.ಎಂ.ಡಿ. ನಂಜುಂಡಸ್ವಾಮಿ ಪ್ರತಿಷ್ಠಾನವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಂಜುಂಡಸ್ವಾಮಿ ಜಯಂತಿ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಂಜುಂಡಸ್ವಾಮಿ ಅವರು ನಾಡಿನ ರೈತರಲ್ಲಿ ಆತ್ಮವಿಶ್ವಾಸ ಹಾಗೂ ಹೋರಾಟದ ಕಿಚ್ಚನ್ನು ಮೂಡಿಸಿದ ಮಹಾನ್ ವ್ಯಕ್ತಿ. ಸ್ವಾರ್ಥ ಸಾಧನೆಯಲ್ಲಿ ಮುಳುಗಿದ್ದ ಸರ್ಕಾರಗಳನ್ನು ಬಡಿದೆಬ್ಬಿಸುವ ರೀತಿಯಲ್ಲಿ ರೈತ ಪರ ಹೋರಾಟ ನಡೆಸುತ್ತಿದ್ದರು. ಅವರ ಅಂದಿನ ಹೋರಾಟದ ಫಲವಾಗಿ ರೈತರು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಹಾಗಾಗಿ ನಂಜುಂಡಸ್ವಾಮಿ ಹೆಸರು ಶಾಶ್ವತವಾಗಿ ಉಳಿಯುವ ಯೋಜನೆ ಹಮ್ಮಿಕೊಳ್ಳಲಾಗುವುದು’ ಎಂದರು.

‘ಕೃಷಿ ಬಜೆಟ್ ಮಂಡಿಸುವ ಮೂಲಕ ರೈತರ ಎಲ್ಲ ಸಮಸ್ಯೆಯನ್ನು ಒಂದೇ ಬಾರಿಗೆ ಪರಿಹರಿಸುತ್ತೇನೆಂಬ ಭ್ರಮೆಯಿಲ್ಲ. ರೈತರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೃಷಿ ಬಜೆಟ್ ಮಂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

‘ರೈತರಿಗೆ ಶೇ 1ರ ಬಡ್ಡಿದರದಲ್ಲಿ ಸಾಲ ನೀಡಲು ಚಿಂತಿಸಲಾಗಿದೆ. ಹಾಗೆಯೇ ರೈತ ಸಂಘ ನೀಡಿರುವ ಸಲಹೆ, ಬೇಡಿಕೆಗಳನ್ನು ಗಂಭೀರವಾಗಿ ಪರಿಶೀಲಿಸಿ, ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.
‘ನಂಜುಂಡಸ್ವಾಮಿ ಅವರು ರೈತರ ಪರ ನಿಷ್ಪಕ್ಷಪಾತವಾಗಿ ಹೋರಾಟ ನಡೆಸಿದ ಧೀಮಂತ ವ್ಯಕ್ತಿ. ಅವರು ಮನಸ್ಸು ಮಾಡಿದ್ದರೆ ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ ತಮ್ಮ ಹೋರಾಟದಿಂದ ಹಿಂದೆ ಸರಿಯಲಿಲ್ಲ. ಅವರ ಮುಂದಾಳತ್ವ ಗುಣ ಹಾಗೂ ದೂರದರ್ಶಿತ್ವ ರೈತ ಮುಖಂಡರಿಗೆ ಪ್ರೇರಣೆಯಾಗಲಿ’ ಎಂದರು.

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘ನಂಜುಂಡಸ್ವಾಮಿ ಅವರು ಕೃಷಿ ಲೋಕದ ಮಹಾನ್ ಸಂತ. ಅಪರೂಪದ ಸಮಾಜ ಸುಧಾರಕ. ಅವರೊಬ್ಬ ನಿಜವಾದ ಭೂಮಿಪುತ್ರ. ವ್ಯವಸ್ಥೆಯಿಂದ ಕಂಗೆಟ್ಟ ಕೃಷಿಕರಲ್ಲಿ ಧೈರ್ಯ- ಸ್ಥೈರ್ಯ ಮೂಡಿಸಿದ ಮಹಾನ್ ಚೇತನ’ ಎಂದು ಬಣ್ಣಿಸಿದರು.

ಆತ್ಮಹತ್ಯೆ ಬೇಡ: ‘ರೈತರು ಬಹಿರಂಗ ಕೃಷಿ ಜತೆಗೆ ಆಂತರಿಕ ಕೃಷಿಯನ್ನು ಉತ್ತಮಪಡಿಸಿಕೊಳ್ಳಬೇಕು. ಆಂತರಿಕ ಕೃಷಿ ಎಂದರೆ ವಿವೇಕ ಹಾಗೂ ಉತ್ತಮ ವಿಚಾರ ರೂಢಿಸಿಕೊಳ್ಳುವುದು. ಸಮಸ್ಯೆಗಳ ಬಗ್ಗೆ ಆತಂಕಗೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ’ ಎಂದರು.

‘ರೈತರು, ವ್ಯಾಪಾರಿಗಳು ಮಾತ್ರವಲ್ಲದೇ ಸ್ವಾಮೀಜಿಗಳೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತಂಕ ಎಲ್ಲರನ್ನು ಕಾಡುತ್ತದೆ. ಆತಂಕ ಹೆಚ್ಚಾದರೆ ಜೀವನವನ್ನೇ ಬಲಿ ಕೊಡಬೇಕಾಗುತ್ತದೆ. ಹಾಗಾಗಿ ಎಷ್ಟೇ ಸಂಕಷ್ಟ ಎದುರಾದರೂ ಧೈರ್ಯದಿಂದ ಎದುರಿಸಬೇಕು’ ಎಂದು ಕರೆ ನೀಡಿದರು.

‘ನನಗೂ ಆತಂಕವಿದೆ. ನನ್ನ ಆತಂಕವನ್ನು ಕೇಳಿದರೆ ನೀವು ಕಣ್ಣೀರಿಡುತ್ತೀರಿ. ಮಠ ಬಿಟ್ಟು ಓಡಿ ಹೋಗಬೇಕು ಎನಿಸುತ್ತದೆ. ಆದರೆ ಸಮಸ್ಯೆಗಳಿಗೆ ಹೆದರುವವನು ನಾನಲ್ಲ. ಏನೇ ಸಮಸ್ಯೆ ಬರಲಿ ಎದುರಿಸುವ ಆತ್ಮವಿಶ್ವಾಸವಿದೆ. ಆದ್ದರಿಂದ ರೈತರು ಯಾವುದೇ ಸಂದರ್ಭದಲ್ಲೂ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು’ ಎಂದರು.

ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯ ಮಾತನಾಡಿ, ‘ನಂಜುಂಡಸ್ವಾಮಿ ಅವರ ವಿಚಾರ- ಹೋರಾಟದ ವಿಧಾನಗಳು ಇಂದಿಗೂ ಪ್ರಸ್ತುತವೆನಿಸಿವೆ. ರಾಜಕೀಯ ಪಕ್ಷಗಳು ನಾಶವಾಗುತ್ತವೆ ಎಂದು 30 ವರ್ಷಗಳ ಹಿಂದೆಯೇ ಅವರು ಹೇಳಿದ್ದರು. ಅದರಂತೆ ಇಂದು ಎಲ್ಲ ರಾಜಕೀಯ ಪಕ್ಷಗಳು ತಮ್ಮ ಶಕ್ತಿಯನ್ನು ಕಳೆದುಕೊಂಡಿವೆ. ತಮ್ಮ ತತ್ವ- ಸಿದ್ಧಾಂತಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸದಂತಾಗಿವೆ’ ಎಂದು ಹೇಳಿದರು.

‘ರೈತ ಪರ ಸಂಘಟನೆಗಳು ಮಾತ್ರ ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿವೆ. ಕೃಷಿ ಬಜೆಟ್ ಮಂಡಿಸುವುದಾಗಿ ಹೇಳಿ ಕೆಲವರು ತಮ್ಮ ತೆವಲು ತೀರಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಈ ಬಜೆಟ್‌ನಿಂದ ಅನುಕೂಲವಾಗುವುದಿಲ್ಲ ಎಂಬ ಅರಿವು ಹೆಚ್ಚಿನ ರೈತರಲ್ಲಿಲ್ಲ’ ಎಂದು ವ್ಯಂಗ್ಯವಾಡಿದರು.

‘ನಂಜುಂಡಸ್ವಾಮಿ ಅವರು ತುಸು ರಾಜಿ ಮಾಡಿಕೊಂಡಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದರು. ಆದರೆ ಅವರು ಎಂದಿಗೂ ರಾಜಿ ಮಾಡಿಕೊಂಡವರಲ್ಲ. ರೈತ ಮುಖಂಡರಿಲ್ಲದೇ ವಿಧಾನಸಭೆ ಇಂದು ಬಡವಾಗಿದೆ. ಮುಖಂಡರು ಭಿನ್ನಾಭಿಪ್ರಾಯ ಮರೆತು ಸಂಘಟಿತರಾಗಿ ರಾಜಕೀಯ ನಾಯಕತ್ವದ ಬರಗಾಲವನ್ನು ಹೋಗಲಾಡಿಸಬೇಕು’ ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ‘ಹಸಿರು ಹರಿಕಾರ ಪ್ರೊ. ಎಂ.ಡಿ.ಎನ್’, ‘ವಿಧಾನಸಭೆಯಲ್ಲಿ ಪ್ರೊ.ಎಂ.ಡಿ.ಎನ್’, ‘ರಾಮಾಯಣದಲ್ಲಿನ ಪಾತ್ರಗಳು ಹಾಗೂ ರೈತ ಕ್ರಾಂತಿ’ ಕೃತಿಗಳು ಹಾಗೂ ಧ್ವನಿಮುದ್ರಿಕೆಗಳನ್ನು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದರು.

ನಂತರ ಭಾರತೀಯ ಕಿಸಾನ್ ಒಕ್ಕೂಟದ ಚೌಧರಿ ಮಹೇಂದ್ರ ಸಿಂಗ್ ಟಿಕಾಯತ್ (ಅವರ ಪುತ್ರ ರಾಕೇಶ್ ಟಿಕಾಯತ್ ಪ್ರಶಸ್ತಿ ಸ್ವೀಕರಿಸಿದರು) ಹಾಗೂ ಶ್ರೀಲಂಕಾದ ರೈತ ಮುಖಂಡ ಶರತ್ ಫರ್ನಾಂಡೋ ಅವರಿಗೆ ಎಂ.ಡಿ.ಎನ್. ಅಂತರರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ, ಅಂತರರಾಷ್ಟ್ರೀಯ ಕಾರ್ಯದರ್ಶಿ ಚುಕ್ಕಿ ನಂಜುಂಡಸ್ವಾಮಿ, ಲಾವಿಯಾಕ್ಯಾಂಪಸಿನಾದ ದಕ್ಷಿಣ ಏಷ್ಯಾ ಸಂಚಾಲಕ ಯುದ್‌ವೀರ್‌ಸಿಂಗ್, ಮಹಿಳಾ ಸಂಚಾಲಕಿ ಶಾಂತಾ ಮಾನವಿ, ಪ್ರತಿಷ್ಠಾನದ ಪಚ್ಚೆ ನಂಜುಂಡಸ್ವಾಮಿ ಉಪಸ್ಥಿತರಿದ್ದರು.

ವಿಳಂಬ
ರೈತೋತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಬೆಳಿಗ್ಗೆ 11ಕ್ಕೆ ಉದ್ಘಾಟಿಸಬೇಕಿತ್ತು. ಆದರೆ ಅವರು ಸಭಾಂಗಣ ಪ್ರವೇಶಿಸಿದಾಗ ಸಮಯ ಮಧ್ಯಾಹ್ನ 1 ಗಂಟೆ ಮೀರಿತ್ತು. ಈ ಬಗ್ಗೆ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT