ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು ಒಪ್ಪಿದರೆ ಮಾತ್ರ ಉದ್ಯಮ ಸ್ಥಾಪನೆ

Last Updated 23 ಆಗಸ್ಟ್ 2012, 7:05 IST
ಅಕ್ಷರ ಗಾತ್ರ

ಕೆರೂರ: ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಭಾಗದಲ್ಲಿ ಉದ್ಯಮ ಸ್ಥಾಪನೆಯೇ ನನ್ನ ಗುರಿ. ಆದರೆ ರೈತರ ಭೂಮಿ ಯನ್ನು ಅವರ ಒಪ್ಪಿಗೆ ಇಲ್ಲದೆ ಬಲವಂತವಾಗಿ ಸ್ವಾಧೀನ ಮಾಡಿ ಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸ್ಪಷ್ಟ ಪಡಿಸಿದರು.

ಕೈಗಾರಿಕೋದ್ಯಮ ಸ್ಥಾಪನೆ ಹಾಗೂ ಅದರ ಸಾಧಕ-ಬಾಧಕಗಳ ಕುರಿತು ಈಚೆಗೆ ಪಟ್ಟಣದ ಎಂ.ಎಚ್.ಎಂ. ಕಾಲೇಜಿನ ಸಭಾಂಗಣದಲ್ಲಿ ರೈತ ಧುರೀಣರೊಂದಿಗೆ ನಡೆದ ಚರ್ಚಾ ಸಭೆಯಲ್ಲಿ ಅವರು ಮಾತನಾಡಿದರು.
ಕೆರೂರ ಹಾಗೂ ನರೇನೂರ ಭಾಗದಲ್ಲಿ ಕೆಐಎಡಿಬಿ ಗುರುತಿಸಿದ 3209 ಎಕರೆ ಭೂಮಿಯಲ್ಲಿ ಒಣ ಬೇಸಾಯದ ಪ್ರತಿ ಎಕರೆಗೆ 7 ಲಕ್ಷ ರೂ. ಹಾಗೂ ನೀರಾವರಿ ಭೂಮಿಗೆ 9 ಲಕ್ಷ ರೂ. ಪರಿಹಾರ ನಿಗದಿ ಮಾಡಿದ್ದು, ಇನ್ನೂ ಹೆಚ್ಚಿನ ಪರಿಹಾರ ನೀಡಲು ಪ್ರಯತ್ನಿಸಲಾಗುತ್ತದೆ. ಇದಕ್ಕೆ ರೈತರು ಮನಸ್ಸು ಮಾಡಬೇಕಿದೆ ಎಂದು ನಿರಾಣಿ ಮನವಿ ಮಾಡಿಕೊಂಡರು.

ಅಟೋಮೊಬೈಲ್ ಕಾರ್ಖಾನೆ :
ಇಲ್ಲಿ ಎಮ್‌ಟೆಕ್ ಕಂಪನಿಯು 16,000 ಕೋಟಿ ರೂ ಬಂಡವಾಳದಲ್ಲಿ ಅಟೋಮೊಬೈಲ್ ಬಿಡಿ ಭಾಗಗಳನ್ನು ತಯಾರಿಸುವ ಕಾರ್ಖಾನೆ ಸ್ಥಾಪಿಸಲು ಮುಂದೆ ಬಂದಿದೆ. ಈ ಹಿನ್ನೆಲೆಯಲ್ಲಿ ಭೂಸ್ವಾಧೀನದ ಉದ್ದೇಶವಿದೆ. ಆದರೆ ಇದಕ್ಕೆ ಕೃಷಿಕ ಬಾಂಧವರ ಒಪ್ಪಿಗೆ ಮಾತ್ರ ಬಾಕಿ ಇದೆ. ಸುಮಾರು 300 ರೈತರು ಈ ಬಗ್ಗೆ ಅಚಲ ನಿರ್ಧಾರ ತೋರಬೇಕು ಎಂದು ಸಚಿವ ನಿರಾಣಿ ಹೇಳಿದರು.

ಇದೇ ತಾ.25ರಂದು ಮುಖ್ಯಮಂತ್ರಿ ಕಾರ್ಯಕ್ರಮದ ಬಳಿಕ 8 ದಿನಗಳ ಅವಧಿಯಲ್ಲಿ ಈ ಉದ್ಯಮ ಸ್ಥಾಪನೆ, ಭೂಸ್ವಾಧೀನಕ್ಕೆ ಜಮೀನು ನೀಡುವ ಕುರಿತು ರೈತ ನಾಯಕರು, ಕೃಷಿಕರು ಹಾಗೂ ಹಿರಿಯರೊಂದಿಗೆ ಮುಕ್ತವಾಗಿ ಚರ್ಚಿಸಲಾಗುವುದು.

ಉದ್ಯಮದಿಂದ ಆಗುವ ಅನುಕೂಲ, ಅನಾನುಕೂಲತೆ, ಉದ್ಯೋಗ ಸೃಷ್ಟಿ ಇತರೆ ವಿಷಯ ಕುರಿತು ಸಭೆಯಲ್ಲಿ ಒಮ್ಮತದ ನಿರ್ಣಯಕ್ಕೆ ಬರಲಾಗುವುದು. ನಂತರ ಜನಪ್ರತಿನಿಧಿಗಳೊಂದಿಗೆ ಸೇರಿ ಮುಂದಿನ ರೂಪುರೇಷೆ ಕುರಿತು ನಿರ್ಧರಿಸ ಲಾಗುವುದು ಎಂದರು.      

                                                      
ಈ ಸಂದರ್ಭದಲ್ಲಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಮಹಾಂತೇಶ ಮೆಣಸಗಿ, ಗಂಗಾಧರ ಘಟ್ಟದ, ಜಿ.ಪಂ. ಸದಸ್ಯ ಹನುಮಂತ ನಿರಾಣಿ,  ಪ.ಪಂ. ಮಾಜಿ ಅಧ್ಯಕ್ಷ ಲಾಖೋಪತಿ ಹೊಸಪೇಟೆ, ಪ.ಪಂ ಉಪಾಧ್ಯಕ್ಷ  ಶಂಕರ ಕಡಕೋಳ ಸೇರಿದಂತೆ ಅನೇಕ ರೈತ ಮುಖಂಡರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT