ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ತಡೆದು ಪ್ರತಿಭಟನೆ: ಐವರು ಜೈಲಿಗೆ

Last Updated 15 ಫೆಬ್ರುವರಿ 2012, 6:15 IST
ಅಕ್ಷರ ಗಾತ್ರ

ಮೈಸೂರು: ರೈಲು ತಡೆದು ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡದ ಮೊತ್ತ ಪಾವತಿಸದ ಐದು ಮಂದಿ ಕನ್ನಡಪರ ಹೋರಾಟಗಾರರನ್ನು ಸ್ಥಳೀಯ ನ್ಯಾಯಾಲಯ ಮಂಗಳವಾರ ಜೈಲಿಗೆ ಕಳುಹಿಸಿದೆ.

ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಎಂ.ಮೋಹನ್‌ಕುಮಾರ್‌ಗೌಡ, ಕನ್ನಡ ಚಳವಳಿ ಹೋರಾಟ ಕೇಂದ್ರ ಸಮಿತಿಯ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಾನಸ, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಿತ್ರ, ಕಾವಲುಪಡೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎನ್. ಉಮೇಶ್ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 2007ರ ಫೆಬ್ರುವರಿ 6ರಂದು ನಗರದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ಮೇಲೆ ದೂರು ದಾಖಲಾಗಿತ್ತು.

ಬುಧವಾರ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ಏಳು ಜನರಿಗೂ ತಲಾ ರೂ. 1500 ದಂಡ ವಿಧಿಸಿ ತೀರ್ಪು ನೀಡಿತು. ಇಬ್ಬರು ಮಹಿಳೆಯರು ದಂಡ ಪಾವತಿಸಿದರು. ಆದರೆ, 5 ಮಂದಿ ದಂಡ ಪಾವತಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಜೈಲಿಗೆ ಕಳುಹಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಗೌರವ ಕಾರ್ಯದರ್ಶಿ ಎಂ.ಚಂದ್ರಶೇಖರ್ ಹಾಗೂ ಇತರರು ಕೋರ್ಟ್ ಆವರಣಕ್ಕೆ ತೆರಳಿ ಬಂಧಿತರಿಗೆ ಬೆಂಬಲ ಸೂಚಿಸಿದರು.

ಈ ಕುರಿತು ಮಾತನಾಡಿದ ಮೋಹನ್‌ಕುಮಾರ್‌ಗೌಡ, `ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ನಾವು ರೈಲು ತಡೆ ಚಳವಳಿ ನಡೆಸಿದ್ದೇವೆ. ಆದ್ದರಿಂದ ದಂಡ ಪಾವತಿಸುವುದಿಲ್ಲ. ಇಷ್ಟಕ್ಕೂ ದಂಡದ ಮೊತ್ತ ಎಷ್ಟು? ಎಂಬುದು ಇದುವರೆಗೂ ಗೊತ್ತಾಗಿಲ್ಲ. ಸದ್ಯ ನಮ್ಮನ್ನು ಜೈಲಿಗೆ ಕರೆದೊಯ್ಯಲಾಗುತ್ತಿದೆ. ಕಾವಲುಪಡೆ ಕಾರ್ಯಕರ್ತರು ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ ದಂಡದ ಹಣ ಪಾವತಿಸಲು ನಿರ್ಧರಿಸಿದ್ದಾರೆ~ ಎಂದು ಹೇಳಿದರು.

ಹಣ ಸಂಗ್ರಹ: ಅತ್ತ ಐವರನ್ನು ಜೈಲಿಗೆ ಕರೆದೊಯ್ದ ಬೆನ್ನಲ್ಲೆ, ದಂಡದ ಮೊತ್ತ ಪಾವತಿಸಲು ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು  ಕೋರ್ಟ್ ಮುಂಭಾ ಗದ ಗಾಂಧಿ ಪ್ರತಿಮೆ ಎದುರು ಸಾರ್ವಜನಿಕರಿಂದ ಹಣ ಸಂಗ್ರಹಿಸಿದರು. ಬಂಧಿತರೆಲ್ಲರೂ ಸಾರ್ವಜನಿಕ ವಿಷಯಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡಿ ದ್ದಾರೆ. ಆದ್ದರಿಂದ ಧನಸಹಾಯ ಮಾಡ ಬೇಕು ಎಂದು ಮನವಿ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT