ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣದಲ್ಲೇ ಟಿಕೆಟ್ ರಹಿತ ಪ್ರಯಾಣದ ರಸೀದಿ

Last Updated 7 ಫೆಬ್ರುವರಿ 2012, 8:15 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಯಾಣಿಕರಿಗೆ ಪ್ರಯಾಣಕ್ಕೂ ಮುನ್ನವೇ ದಂಡ ವಿಧಿಸಿ ನಗರದ ರೈಲು ನಿಲ್ದಾಣದಲ್ಲಿ ರಸೀದಿ ನೀಡಲಾಗುತ್ತಿದೆ. ವಿಶೇಷವಾಗಿ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ತುರ್ತಾಗಿ ತೆರಳಲೇಬೇಕಾದ ಅನಿವಾರ್ಯತೆ ಯಿರುವ ನೂರಾರು ಪ್ರಯಾಣಿಕರು ಈ ರೀತಿ ವಿಚಾರಣಾ ಕೌಂಟರ್‌ನಲ್ಲಿಯೇ ತಪಾಸಣಾ ದಳದ ಸಿಬ್ಬಂದಿಗೆ ದಂಡಕಟ್ಟಿ ರಸೀದಿ ಪಡೆದು, ಟಿಕೆಟ್ ರಹಿತ ಪ್ರಯಾಣದ `ಅಪರಾಧಿ~ಗಳಾಗಿ ಗುರುತಿಸಿಕೊಳ್ಳುತ್ತಿದ್ದಾರೆ!

ಯಾಕೆ ಹೀಗೆ?: ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ `ತರಳಬಾಳು ಹುಣ್ಣಿಮೆ~ ಹಿನ್ನೆಲೆ ಯಲ್ಲಿ ಪ್ರಯಾಣಿಕರ ಸಂಖ್ಯೆ ಮೂರುಪಟ್ಟು ಏರಿದೆ. ಪ್ರತಿದಿನ ದಾವಣಗೆರೆಯಿಂದ ಬೀರೂರಿಗೆ ಸರಾಸರಿ ಸುಮಾರು 150ರಿಂದ 200 ಮಂದಿ ಪ್ರಯಾಣಿಸುತ್ತಾರೆ. ಕಳೆದ ಒಂದು ವಾರದ ಅವಧಿಯಲ್ಲಿ ಈ ಸಂಖ್ಯೆ 600ರಿಂದ 800ಕ್ಕೆ ಏರಿದೆ.

ಮುಖ್ಯವಾಗಿ ಜನಶತಾಬ್ದಿ ರೈಲಿಗೆ ಹೋಗುವವರ ಸಂಖ್ಯೆ ಇದರಲ್ಲಿ ಹೆಚ್ಚು. ಜನಶತಾಬ್ದಿಗೆ ಕಡೂರಿನಲ್ಲಿ ನಿಲುಗಡೆ ಇಲ್ಲ. ಪ್ರಯಾಣಿಕರು ಬೀರೂರಿನಲ್ಲಿ ಇಳಿದು ಕಡೂರಿಗೆ ಹೋಗುತ್ತಾರೆ. ಈ ರೈಲು ಹುಬ್ಬಳ್ಳಿಯಿಂದ ಹೊರಡುವ ಮೂರು ಗಂಟೆಗಳ ಮೊದಲು ಮುಂಗಡ ಬುಕ್ಕಿಂಗ್ ಸ್ಥಗಿತಗೊಳಿಸಲಾಗುತ್ತದೆ. ಅಲ್ಲಿಂದ ಬಳಿಕ ಸಾಮಾನ್ಯ ಟಿಕೆಟ್ ಪಡೆದು ಪ್ರಯಾಣಿಸಬಹುದು. ಆದರೆ, ಇದ್ಯಾವುದೂ ಸಾಧ್ಯವಾಗದ ಪ್ರಯಾಣಿಕರು ಈ ರೀತಿ ಮುಂಗಡ ದಂಡದ `ಟಿಕೆಟ್~ ಪಡೆಯುತ್ತಿದ್ದಾರೆ.

ಎಷ್ಟು ದಂಡ?: ಜನಶತಾಬ್ದಿ ರೈಲಿನಲ್ಲಿ ಬೀರೂರಿಗೆ ರೂ 72 ದರವಿದೆ. ದಂಡ ಸಹಿತವಾಗಿ ಸರಾಸರಿ ರೂ 230 ಪಾವತಿಸಿ ಪ್ರಯಾಣಿಕರು ತೆರಳುತ್ತಾರೆ. (ಬಸ್‌ನಲ್ಲಿ ತೆರಳಿದರೂ ರೂ 150 ಮೀರುವುದಿಲ್ಲ). ಪರಿಸ್ಥಿತಿಯ ಲಾಭ ಪಡೆದ ಇಲಾಖೆ ಈ ರೀತಿ ಟಿಕೆಟ್ ನೀಡುತ್ತಿದೆ ಎಂದು ತರಳಬಾಳು ಹುಣ್ಣಿಮೆಗೆ ತೆರಳುತ್ತಿದ್ದ ಪ್ರಯಾಣಿಕರೊಬ್ಬರು `ಪ್ರಜಾವಾಣಿ~ಗೆ ವಿವರಿಸಿದರು.

ಗುರಿ ಮುಟ್ಟದ ಕಾರಣ:  ಇಲಾಖೆ ಟಿಕೆಟ್ ತಪಾಸಣಾ ಸಿಬ್ಬಂದಿಗೆ ಪ್ರತಿ ತಿಂಗಳು ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಬೇಕು ಎಂದು ನಿರ್ದಿಷ್ಟ ಗುರಿ ನಿಗದಿಪಡಿಸಿದೆ. ಆದರೆ, ಅಂಥವರ ಸಂಖ್ಯೆ ಗಣನೀಯವಾಗಿ ತಗ್ಗಿದೆ. ಹಾಗಾಗಿ ಈ ವಿಧಾನದ ಮೊರೆ ಹೋಗಿರಬಹುದು ಎಂದು ರೈಲ್ವೆ ಮೂಲಗಳೇ ಶಂಕೆ ವ್ಯಕ್ತಪಡಿಸಿವೆ.

ಪ್ರಯಾಣಿಕರದೇ ಒತ್ತಡ: ಕಾನೂನು ಪ್ರಕಾರ ಪ್ರಯಾಣಕ್ಕೂ ಮುನ್ನ ದಂಡ ವಿಧಿಸುವುದು ತಪ್ಪು. ಆದರೆ, ಪ್ರಯಾಣಿಕರೇ ರೈಲ್ವೆ ಸಿಬ್ಬಂದಿ ಮೇಲೆ ಒತ್ತಡ ಹೇರಿ ಈ ರೀತಿ ಟಿಕೆಟ್ ಪಡೆಯುತ್ತಾರೆ. ಕೊನೇ ಕ್ಷಣದಲ್ಲಿ ಬರುವ ಅವರ ಅಸಹಾಯಕತೆಗೆ ನಾವು ಸ್ಪಂದಿಸಲೇಬೇಕಾಗುತ್ತದೆ. ಕೊನೆಗೆ ಒಬ್ಬರ ಮೇಲೆ ರೂ. 250 ದಂಡ ಹೇರುವ ಬದಲು ಮೂವರು ಪ್ರಯಾಣಿಕರನ್ನು ಸೇರಿಸಿ ದಂಡ ಸಹಿತ ಟಿಕೆಟ್ ನೀಡುತ್ತೇವೆ. ಹೀಗೆ ಅನುಕೂಲ ಪಡೆದ ಮಂದಿ ಮತ್ತೆ ರೈಲ್ವೆ ಇಲಾಖೆಯನ್ನೇ ದೂರುತ್ತಾರೆ.

ಪ್ರಯಾಣಿಕರ ಹಿತದೃಷ್ಟಿಯಿಂದ ಅವರಿಗೆ ನೆರವಾದದ್ದಕ್ಕೆ ಈ ರೀತಿ ಆರೋಪ ಇಲಾಖೆ ಮೇಲೆ ಬರುತ್ತಿದೆ ಎಂದು ನಗರದ ರೈಲು ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT