ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಮಾರ್ಗ ಶೀಘ್ರ ಅನುಷ್ಠಾನಕ್ಕೆ ಆಗ್ರಹ

Last Updated 20 ಜನವರಿ 2011, 19:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಧ್ಯಕರ್ನಾಟಕ ಜನತೆಯ ಬಹುದಿನಗಳ ಬೇಡಿಕೆಯಾದ ದಾವಣಗೆರೆ- ಚಿತ್ರದುರ್ಗ- ತುಮಕೂರು ನೇರ ರೈಲ್ವೆ ಮಾರ್ಗ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವ ಕುರಿತು ರೈಲ್ವೆ ಹೋರಾಟ ಸಮಿತಿಯ ಮೂರು ಜಿಲ್ಲೆಗಳ ಮುಖಂಡರು ಗುರುವಾರ ಸಂಸದ ಜನಾರ್ದನ ಸ್ವಾಮಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಆರ್.ವಿ. ಪುಟ್ಟಕಾಮಣ್ಣ ಮಾತನಾಡಿ, ನೇರ ರೈಲ್ವೆ ಮಾರ್ಗ ಯೋಜನೆಗೆ ತ್ವರಿತಗತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಯೋಜನೆ ಅನುಷ್ಠಾನವಾದರೆ ಈ ಭಾಗದ ಅಭಿವೃದ್ಧಿಗೂ ಅನುಕೂಲವಾಗುತ್ತದೆ. ಬಡವರಿಗೆ, ಕೃಷಿಕರಿಗೆ ಕೈಗೆಟಕುವ ದರದಲ್ಲಿ ಪ್ರಯಾಣಿಸಲು ಮತ್ತು ಕೃಷಿ ಉತ್ಪನ್ನಗಳು ಸಾಗಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಸಂಸದ ಜನಾರ್ದನಸ್ವಾಮಿ ಮಾತನಾಡಿ, ಆರ್ಥಿಕವಾಗಿ ಲಾಭದಾಯಕವಲ್ಲ ಎನ್ನುವ ಕಾರಣಕ್ಕೆ ಈ ಯೋಜನೆ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, 913 ಕೋಟಿ ರೂಪಾಯಿಯ ಈ ಯೋಜನೆಯನ್ನು ಹಿಂದಿನ ಬಜೆಟ್‌ನಲ್ಲಿ ಸೇರಿಸಲಾಗಿದೆ. ಯೋಜನಾ ಆಯೋಗ ಸಹ ಅನುಮೋದನೆ ನೀಡಿದೆ.

ರೈಲ್ವೆ ಮಂಡಳಿಯೂ ಅನುಮೋದನೆ ನೀಡಿದೆ. ಪ್ರಸ್ತುತ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡುವುದು ಮಾತ್ರ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದರು.

ಎರಡು ವರ್ಷಗಳಲ್ಲಿ ಯೋಜನೆ ಮುಕ್ತಾಯವಾಗಬೇಕು ಎನ್ನುವುದು ನಮ್ಮ ಬಯಕೆ. ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಆರಂಭವಾಗುವ ನಿರೀಕ್ಷೆಯಿದೆ. ಈಗಾಗಲೇ ರಾಜ್ಯ ಸರ್ಕಾರ 502 ಕೋಟಿ ರೂ ಅನುದಾನ ನೀಡಿದೆ ಎಂದು ಮಾಹಿತಿ ನೀಡಿದರು.

ಮುಖಂಡರಾದ ಮೀರಾಜುದ್ದೀನ್, ಮುರುಘರಾಜೇಂದ್ರ ಒಡೆಯರ್, ರಮಾ ನಾಗರಾಜ್, ವಾಮದೇವಪ್ಪ, ಪರಮೇಶ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT