ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು, ರಸ್ತೆ ತಡೆ: ನೂರಾರು ರೈತರ ಬಂಧನ

Last Updated 2 ಅಕ್ಟೋಬರ್ 2012, 4:45 IST
ಅಕ್ಷರ ಗಾತ್ರ

ಮದ್ದೂರು: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತಸಂಘದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸಮೀಪದ ಗೆಜ್ಜಲಗೆರೆ ಬಳಿ ಬೆಳಿಗ್ಗೆ 5 ಗಂಟೆಗೆ ಶಿರಡಿ ಎಕ್ಸ್‌ಪ್ರೆಸ್ ರೈಲನ್ನು ತಡೆದು ಪ್ರತಿಭಟನೆ ಆರಂಭಿಸಿದರು.

ರೈಲ್ವೆ ಹಳಿಗಳಿಗೆ ಹಸು ಎಮ್ಮೆಗಳನ್ನು ಕಟ್ಟಿ ಮೇವು ಹಾಕಿದ ರೈತರು, ಹಳಿಯ ಮೇಲೆ ಸಾಲಾಗಿ ಕುಳಿತರು. ಶಿರಡಿ ಎಕ್ಸ್‌ಪ್ರೆಸ್ ರೈಲಿಗೆ ತಡೆವೊಡ್ಡುತ್ತಿದ್ದಂತೆ ಬೆಂಗಳೂರು-ಮೈಸೂರಿನಿಂದ ಬರುತ್ತಿದ್ದ ಎಲ್ಲ ರೈಲುಗಳು ಹನಕೆರೆ, ಶಿವಪುರ ಹಾಗೂ ಮಂಡ್ಯದ ಬಳಿ ನಿಂತು ರೈಲು ಸಂಚಾರ ಹಲವು ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತು.

ನೂರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು 9ಗಂಟೆ ವೇಳೆಗೆ ರಾಜ್ಯ ರೈತಸಂಘದ ಉಪಾಧ್ಯಕ್ಷ ವಿ.ಅಶೋಕ್, ಜಿಲ್ಲಾಧ್ಯಕ್ಷ ಕೆ.ನರಸರಾಜು, ತಾಲ್ಲೂಕು ಅಧ್ಯಕ್ಷ ವಿಶ್ವನಾಥ್, ನಾಗರಾಜು, ಸೀತರಾಮು, ರಾಮಲಿಂಗಯ್ಯ, ಕೆ.ನಂಜುಂಡಯ್ಯ, ವರದಪ್ಪ, ಜಿ.ಎ.ಶಂಕರ್, ಚಂದ್ರು, ಚನ್ನಪ್ಪ, ಹರೀಶ್, ಸುನೀಲ್, ಜಿ.ಪಿ.ಯೋಗೇಶ್, ವೆಂಕಟೇಶ್ ಸೇರಿದಂತೆ 70 ಮಂದಿಯನ್ನು ಬಂಧಿಸಲಾಯಿತು. ನಮ್ಮಂದಿಗೆ ಜಾನುವಾರುಗಳನ್ನು ಬಂಧಿಸಿ ಎಂದು ರೈತರು ಪಟ್ಟು ಹಿಡಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚೆದುರಿಸಿ, ಶಿರಡಿ ಎಕ್ಸ್‌ಪ್ರೆಸ್ ರೈಲು ಹೊರಡಲು ಅನುವು ಮಾಡಿದರು.

ಆತ್ಮಹತ್ಯೆಗೆ ಯತ್ನ:
ಈ ಸಂದರ್ಭದಲ್ಲಿ ರೈತ ಮುಖಂಡರ ಬಂಧನ ಖಂಡಿಸಿ ಭಾವುಕನಾದ ರೈತ ರಾಘವೇಂದ್ರ ತನ್ನ ಬಳಿಯಿದ್ದ ಟವೆಲ್‌ನ್ನು ಗಂಟು ಕಟ್ಟಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ಅಲ್ಲಿಯೇ ಇದ್ದ ರೈತರು, ಪೊಲೀಸರು ಆತನನ್ನು ನೇಣಿನಿಂದ ಪಾರು ಮಾಡಿ ಅನಾಹುತ ತಪ್ಪಿಸಿದರು.

ಇತ್ತ ರೈತ ಮುಖಂಡರನ್ನು ಬಂಧಿಸಿ ಕರೆದೊಯ್ಯುತ್ತಿದ್ದಂತೆ ರೈತನಾಯಕಿ ಸುನಂದ ಜಯರಾಂ ನೇತೃತ್ವದಲ್ಲಿ ನೂರಾರು ಮಹಿಳೆಯರು ಇನ್ನೊಂದೆಡೆ ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲನ್ನು ಅಡ್ಡಗಟ್ಟಿದರು. ಸುಮಾರು 11ಗಂಟೆ ವೇಳೆಗೆ ಸುನಂದ ಜಯರಾಂ ಸೇರಿದಂತೆ 30ಕ್ಕೂ ಹೆಚ್ಚು ಮಹಿಳೆಯರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಇಷ್ಟಾದರೂ ಪಟ್ಟು ಬಿಡದ ಗ್ರಾಮಸ್ಥರು ಮತ್ತೆ ರೈಲಿನ ಹಳಿ ಮೇಲೆ ಕುಳಿತು ಪ್ರತಿಭಟನೆ ಮುಂದುವರಿಸಿದಾಗ ಪೊಲೀಸರು ಅಸಹಾಯಕರಾದರು.

ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ, ಎಸಿ ಶಾಂತ ಹುಲ್ಮನಿ, ಐಜಿ ಅಮರ್‌ಕುಮಾರ್‌ಪಾಂಡೆ, ಎಸ್ಪಿ ಕೌಶಲೇಂದ್ರಕುಮಾರ್, ಡಿವೈಎಸ್‌ಪಿ ಹನುಮಂತರೆಡ್ಡಿ,  ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮಸ್ಥರನ್ನು ಮನವೊಲಿಸಲು ವಿಫಲರಾದರು. ಸಂಜೆಯವರೆಗೂ ರೈಲು ತಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ರಸ್ತೆಯಲ್ಲಿ ಅಡುಗೆ: ಪಟ್ಟಣದ ಎಪಿಎಂಸಿ ಮಾರುಕಟ್ಟೆ ಬಳಿ ಸೋಮವಾರ ತಮಿಳುನಾಡಿಗೆ ನೀರು ಬಿಡುಗಡೆ ಖಂಡಿಸಿ ಎಳನೀರು ವರ್ತಕರು, ಹಮಾಲಿಗಳ ಸಂಘದ ಸದಸ್ಯರು ಹೆದ್ದಾರಿಯಲ್ಲಿಯೇ ಅಡುಗೆ ತಯಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಹೆದ್ದಾರಿಯಲ್ಲಿಯೇ ಶಾಮಿಯಾನ ಹಾಕಿ ತರಕಾರಿ ಕತ್ತರಿಸಿ,  ಒಲೆಯನ್ನಿಟ್ಟು ಅಡುಗೆ ಸಿದ್ಧಪಡಿಸಿದರು.
 
ಮಧ್ಯಾಹ್ನದ ವೇಳೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 500ಕ್ಕೂ ಹೆಚ್ಚು ಮಂದಿ ರಸ್ತೆಯಲ್ಲಿಯೇ ಸಾಲಾಗಿ ಕುಳಿತು ಭೋಜನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗೆಜ್ಜಲಗೆರೆ ಬಳಿ ರೈತರನ್ನು ಬಂಧಿಸಿ ಕರೆ ತಂದ ಎರಡು ಸಾರಿಗೆ ಬಸ್‌ಗಳನ್ನು ಅಡ್ಡಗಟ್ಟಿದರು. ವರ್ತಕರ ಸಂಘದ ಅಧ್ಯಕ್ಷ ರವಿಚನ್ನಸಂದ್ರ, ಕಾರ್ಯದರ್ಶಿ ರಾಜು, ಕಾಳೀರಯ್ಯ, ಮಹೇಶ್, ಕೂಲಿಕಾರರ ಸಂಘದ ಅಧ್ಯಕ್ಷ ಶಿವು ನೇತೃತ್ವ ವಹಿಸಿದ್ದರು.

ನಿರಂತರ ಧರಣಿ: ತಾಲ್ಲೂಕು ಕಚೇರಿ ಎದುರು ತಮಿಳುನಾಡಿಗೆ ನೀರು ಹರಿಸುವ ಕ್ರಮ ಖಂಡಿಸಿ ಸೋಮವಾರ ತಾಲ್ಲೂಕು ಕಾವೇರಿ ಹಿತರಕ್ಷಣಾ ಸಮಿತಿ ಸದಸ್ಯರು ನಿರಂತರ ಧರಣಿ ಆರಂಭಿಸಿದರು. ಜೆಡಿಎಸ್ ಮುಖಂಡ ಬಿ.ವಿಜಯೇಂದ್ರ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡರಾದ ಅಪ್ಪು ಪಿ.ಗೌಡ, ಅಂಬರೀಷ್, ಆನಂದ್, ಹುಣಸೆಮರದದೊಡ್ಡಿ ಸ್ವಾಮಿ, ಶಂಕರೇಗೌಡ, ಬಿಜೆಪಿ ಕೃಷ್ಣ ಪಾಲ್ಗೊಂಡಿದ್ದರು.

ಯುವ ಕಾಂಗ್ರೆಸ್ ಪ್ರತಿಭಟನೆ: ಇಲ್ಲಿನ ಟಿ.ಬಿ.ವೃತ್ತದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಗೌರಿಶಂಕರ್ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಜಿ.ಕೃಷ್ಣ, ಎ.ಸಿ.ಮಹೇಶ್, ರಾಮಕೃಷ್ಣ, ಶಿವಮಾಧು, ಆತ್ಮಾನಂದ, ಚನ್ನಪ್ಪ, ಸಿ.ರಘು, ಶೇಖರ್, ಯೋಗೇಶ್, ಸತೀಶ್, ಮನೋಹರ್, ಶೇಖರ್ ಪಾಲ್ಗೊಂಡಿದ್ದರು.

ಅಣಕು ಶವಯಾತ್ರೆ: ಸಮೀಪದ ಶಿವಪುರದಲ್ಲಿ ಚಾಮನಹಳ್ಳಿ ಗ್ರಾಮಸ್ಥರು ಜಯಲಲಿತಾ ಅಣಕು ಶವಯಾತ್ರೆ ನಡೆಸಿದರು. ನಂತರ ಅಲ್ಲಿಂದ ಕೊಪ್ಪ ವೃತ್ತಕ್ಕೆ ಆಗಮಿಸಿ ಅಲ್ಲಿ ಟೈರುಗಳನ್ನಿಟ್ಟು ಅಣಕು ಶವಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಎಪಿಎಂಸಿ ರವಿ, ತ್ಯಾಗರಾಜು, ಶೇಖರ್, ಕೃಷ್ಣ, ಶಿವಣ್ಣ ಗ್ರಾಮಸ್ಥರು ಭಾಗವಹಿಸಿದ್ದರು.

ಯಶ್ ಬೆಂಬಲ: ಚಿತ್ರೀಕರಣಕ್ಕೆ ಮೈಸೂರಿಗೆ ತೆರಳುತ್ತಿದ್ದ ಚಿತ್ರನಟ ಯಶ್ ಚಾಮನಹಳ್ಳಿ ಗ್ರಾಮಸ್ಥರು ನಡೆಸುತ್ತಿದ್ದ ಹೆದ್ದಾರಿ ತಡೆ ಸ್ಥಳದಲ್ಲಿ ಕಾರಿನಿಂದ ಇಳಿದು ಬೆಂಬಲ ವ್ಯಕ್ತಪಡಿಸಿದರು. 

ರಸ್ತೆ ತಡೆ: ಸಮೀಪದ ಶಿವಪುರದ ದ್ವಜಸತ್ಯಾಗ್ರಹಸೌಧದ ಬಳಿ ರಸ್ತೆ ತಡೆ ನಡೆಸಲಾಯಿತು. ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಿ.ನಾಗೇಗೌಡ, ಸಂದರ್ಶ, ಮುಖಂಡರಾದ ವಿಜಯಕುಮಾರ್, ಕಾರ್ತಿಕ್, ಪ್ರತಾಪ್, ಗುರು, ರಘು, ಸತೀಶ್, ಸಂಜಯ್, ಕಿರಣ್, ತೈಲೂರು ಬೊಮ್ಮಯ್ಯ ಸೇರಿದಂತೆ ಹಲವರು ಇದ್ದರು.

ಜೆಡಿಎಸ್ ಬೈಕ್ ರ‌್ಯಾಲಿ: ಸಮೀಪದ ಶಿವಪುರ ಧ್ವಜಸತ್ಯಾಗ್ರಹಸೌಧ ಆವರಣದಿಂದ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರು ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಸೋಮವಾರ ಬೈಕ್‌ರ‌್ಯಾಲಿ ನಡೆಸಿದರು.

ಜೆಡಿಎಸ್ ಅಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಕಾರ್ಯಾಧ್ಯಕ್ಷ ವೆಂಕಟೇಶ್, ಪುರಸಭಾಧ್ಯಕ್ಷ ಅಂಕಪ್ಪ ಎ.ಚಂದು, ಮಾಜಿ ಅಧ್ಯಕ್ಷರಾದ ಅಮರ್‌ಬಾಬು, ವೈ.ಬಿ.ಶಂಕರೇಗೌಡ, ಶಿವಾನಂದ, ಉಪಾಧ್ಯಕ್ಷ ರವಿ, ಜಿಲ್ಲಾ ಪಂಚಾಯಿತಿ ಸದಸ್ಯ ರವಿ, ಮುಖಂಡರಾದ ತೈಲೂರು ರಘು, ತೊಪ್ಪನಹಳ್ಳಿ ಪ್ರಕಾಶ್, ಶಿವಲಿಂಗೇಗೌಡ, ಮರಿಮಾದೇಗೌಡ, ಪಣ್ಣೆದೊಡ್ಡಿ ಸುಧಾಕರ್, ಸ್ವಾಮಿಗೌಡ ಪಾಲ್ಗೊಂಡಿದ್ದರು.

ಹೆದ್ದಾರಿ ತಡೆ: ಇಲ್ಲಿನ ಟಿಬಿ ವೃತ್ತದಲ್ಲಿ ಮಾಜಿ ಶಾಸಕ ಮಧು ಜಿ.ಮಾದೇಗೌಡರ ನೇತೃತ್ವದಲ್ಲಿ ಅವರ ಬೆಂಬಲಿಗರು ಹೆದ್ದಾರಿಯಲ್ಲಿ ಶಾಮಿಯಾನ ಹಾಕಿ ಬೆಳಿಗ್ಗೆಯಿಂದ ಸಂಜೆಯ ವರೆಗೆ ನಿರಂತರವಾಗಿ ರಸ್ತೆ ತಡೆ ನಡೆಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಂಠಿಸುರೇಶ್, ಚಂದೂಪುರ ಪಾಪಣ್ಣ, ಕೆ.ಸಿ.ಭರತೇಶ್, ಶಿವಶಂಕರ್, ಬಸವರಾಜು, ದೊಡ್ಡೇಗೌಡ, ಮಾದೇಗೌಡ, ಯರಗನಹಳ್ಳಿ ಮಹಾಲಿಂಗು, ರಾಜೀವ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ ಕಾರಿನಿಂದ ಇಳಿದು ರಸ್ತೆ ತಡೆ ಬೆಂಬಲ ವ್ಯಕ್ತಪಡಿಸಿದರು.

ರೋಡ್ ಷೋ: ಕಾವೇರಿ ಚಳವಳಿ ರೂಪಿಸುವ ಸಂಬಂಧ ಮಂಡ್ಯದಲ್ಲಿ ಕರೆಯಲಾಗಿದ್ದ ಸಭೆಗೆ ತೆರಳುವ ಮುನ್ನ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಶಿವಪುರ ಧ್ವಜಸತ್ಯಾಗ್ರಹಸೌಧದಿಂದ ಕೊಲ್ಲಿ ವೃತ್ತದವರೆಗೆ ತಮ್ಮ ಬೆಂಬಲಿಗರೊಂದಿಗೆ ಪಟ್ಟಣದಲ್ಲಿ ರೋಡ್ ಷೋ ನಡೆಸಿದರು.

ರಾಜ್ಯ ಉಪಾಧ್ಯಕ್ಷರಾದ ಮಾ.ಸೋ.ಚಿದಂಬರ್, ಸೌಭಾಗ್ಯಮಹದೇವು, ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ತಾಲ್ಲೂಕು ಅಧ್ಯಕ್ಷ ಅಶೋಕ್, ಕೃಷ್ಣಪ್ಪ, ಸೆಲ್ವಿ, ವಾಸು, ಕೃಷ್ಣ, ಚಾಮನಹಳ್ಳಿ ಮಂಜು ಇದ್ದರು.

ಕೊಪ್ಪ: ತಮಿಳುನಾಡಿಗೆ ನೀರುಬಿಟ್ಟಿರುವ ಕ್ರಮ ಖಂಡಿಸಿ ಇಲ್ಲಿ ಕರೆ ನೀಡಲಾಗಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ನಂತರ ಇಲ್ಲಿನ ಸಂತೆ ಮೈದಾನದಿಂದ ಪ್ರತಿಭಟನೆ ಮೆರವಣಿಗೆ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮಾನುಲ್ಲಖಾನ್, ಸದಸ್ಯರಾದ ದಿವಾಕರ್, ಯೋಗಾನಂದ, ಕಾಂತರಾಜು ರೈತಸಂಘದ ಜಿ.ಅಶೋಕ್, ಮೂಡ್ಯಚನ್ನೇಗೌಡ ಇದ್ದರು.

ಆಬಲವಾಡಿ: ಇಲ್ಲಿನ ಗ್ರಾಮಸ್ಥರು ಜಯಲಲಿತಾ ಹಾಗೂ ಮನಮೋಹನಸಿಂಗ್ ಅವರ ಶವಗಳ ಪ್ರತಿಕೃತಿಗಳ ತಯಾರಿಸಿ ಚಟ್ಟ ಕಟ್ಟಿ ಮೆರವಣಿಗೆ ಮಾಡಿದರು. ನಂತರ ಗ್ರಾಮದಿಂದ ಕೊಪ್ಪಕ್ಕೆ ಆಗಮಿಸಿದ 500ಕ್ಕೂ ಹೆಚ್ಚು ಗ್ರಾಮಸ್ಥರು ಅಲ್ಲಿ ಶ್ರಾದ್ಧ ಏರ್ಪಡಿಸಿ, ಅಡುಗೆ ತಯಾರಿಸಿ ಪಂಕ್ತಿ ಭೋಜನ ಸ್ವೀಕರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಟಿ.ಕರೀಗೌಡ, ಪುಟ್ಟಸ್ವಾಮಿ, ಕೃಷ್ಣಪ್ಪ, ಯೋಗೇಶ, ಚಂದ್ರು, ರಾಮಕೃಷ್ಣ, ರವಿ, ತಿಮ್ಮರಾಜು, ಕರಿಯಪ್ಪ, ಪುಟ್ಟಸ್ವಾಮಿ, ತಿಮ್ಮೇಶ್ ನೇತೃತ್ವ ವಹಿಸಿದ್ದರು. 

ಗೊರವನಹಳ್ಳಿ: ಇಲ್ಲಿನ ಗೇಟ್ ಬಳಿ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು. ಗ್ರಾಮದ ಮುಖಂಡರಾದ ಸತೀಶ್, ಪ್ರಸನ್ನ, ಸಿದ್ದರಾಮು, ಸಿ.ಸಿ.ಸುರೇಶ್ ಇದ್ದರು.

ವಕೀಲರ ರ‌್ಯಾಲಿ: ಪಟ್ಟಣದಲ್ಲಿ ಇಂದು ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಬೈಕ್ ರ‌್ಯಾಲಿ ನಡೆಸಿದರು. ನ್ಯಾಯಾಲಯದಿಂದ ಶಿಂಷಾ ಸೇತುವೆವರೆಗೆ ರ‌್ಯಾಲಿ ನಡೆಸಿ ಅಲ್ಲಿ ಕೆಲ ಕಾಲ ಹೆದ್ದಾರಿ ತಡೆ ನಡೆಸಿದರು. ವಕೀಲರಾದ ವಿ.ಎಂ.ವೆಂಕಟೇಶ್, ರವಿಕುಮಾರ್, ಶಿವಣ್ಣ, ಪುಟ್ಟರಾಜು, ಶಿವಶಂಕರ್, ಮಹದೇವಪ್ಪ, ಎನ್.ಎಂ.ಶಿವಣ್ಣ, ಕೆ.ಶಿವಣ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT