ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಆಧುನೀಕರಣ: 50 ಸಾವಿರ ಕೋಟಿ ಯೋಜನೆ

Last Updated 8 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರೈಲ್ವೆ ಜಾಲದ ಆಧುನೀಕರಣ ಹೇಗಿರಬೇಕೆಂಬ ಬಗ್ಗೆ ಸ್ಪಷ್ಟ ಪರಿಕಲ್ಪನೆಗಾಗಿ ತಂತ್ರಜ್ಞ ಸ್ಯಾಮ್ ಪಿತ್ರೋಡ ನೇತೃತ್ವದ ಸಮಿತಿ ಮುಂದಿನ ವಾರ ತನ್ನ ವರದಿ ಸಲ್ಲಿಸುವ ನಿರೀಕ್ಷೆಯಿದ್ದು, ರೈಲ್ವೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಶಿಫಾರಸು ಮಾಡಲಿದೆ.

ಪಿತ್ರೋಡಾ ಸಮಿತಿ ಶಿಫಾರಸು ಅಳವಡಿಸಲು ರೈಲ್ವೆ ಇಲಾಖೆ ಮುಂದಿನ ಐದು ವರ್ಷಗಳಲ್ಲಿ 50 ಸಾವಿರ ಕೋಟಿ ರೂಪಾಯಿ ವ್ಯಯಿಸುವ ಸಾಧ್ಯತೆಯಿದೆ.

ರೈಲು ಹೊರಡುವ, ಬರುವ ಸಂದೇಶಗಳ ರವಾನೆ, ಟ್ರಾಕ್‌ಗಳ ನಿರ್ವಹಣೆ, ನಿಲ್ದಾಣ ಹಾಗೂ ಟರ್ಮಿನಲ್‌ಗಳ ಆಧುನೀಕರಣ ಕೈಗೊಳ್ಳುವಂತೆ ಈ ಸಮಿತಿ ಸಲಹೆ ನೀಡಲಿದೆ. ಅಲ್ಲದೇ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಯುರೋಪ್‌ನಲ್ಲಿ ಪ್ರಸ್ತುತ ಚಾಲ್ತಿಯಲ್ಲಿ ಇರುವಂತೆ ಚಾಲಕನಿಗೆ ಸಂದೇಶ ಕಳುಹಿಸುವ `ಕ್ಯಾಬ್ ಸಿಗ್ನಲಿಂಗ್~ ವ್ಯವಸ್ಥೆ  ಅಳವಡಿಸುವಂತೆ ಹಾಗೂ ಸಂಚಾರ  ಹೆಚ್ಚಿರುವ ರೈಲು ಮಾರ್ಗಗಳಲ್ಲಿ ರೈಲು ಸುರಕ್ಷತಾ ಸೂಚನಾ ವ್ಯವಸ್ಥೆ ಅಳವಡಿಸುವ ಕಾರ್ಯ ತ್ವರಿತಗೊಳಿಸುವಂತೆ ಸೂಚನೆ ನೀಡಲಿದೆ.

ರೈಲು ನಿಲ್ದಾಣಗಳಲ್ಲಿ ಹಳಿಗಳನ್ನು ಬದಲಿಸಲು ಈಗಿರುವ ಯಾಂತ್ರಿಕ ಲಾಕಿಂಗ್ ವ್ಯವಸ್ಥೆಯ ಬದಲಾಗಿ ದೇಶದ 5000 ರೈಲು ನಿಲ್ದಾಣಗಳಲ್ಲಿ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆ ಅಳವಡಿಸುವಂತೆಯೂ ಸಮಿತಿ ಶಿಫಾರಸು ಮಾಡಲಿದೆ.

ರೈಲ್ವೆಯಲ್ಲಿ ಸರ್ಕಾರಿ-ಖಾಸಗಿ ಸಹಭಾಗಿತ್ವದ ಕುರಿತು ಪ್ರಸ್ತಾಪಿಸಿರುವ ಸಮಿತಿ, ಇಲ್ಲಿ 3 ಲಕ್ಷ 58 ಸಾವಿರ ಕೋಟಿಗಳಷ್ಟು ಬಂಡವಾಳ ಹೂಡಿಕೆಗೆ ಅವಕಾಶವಿದೆ ಎಂದಿದೆ.

12ನೇ ಪಂಚವಾರ್ಷಿಕ ಯೋಜನೆಯ ಆರಂಭಕ್ಕೆ ಸರಿಹೊಂದುವಂತೆ ಮುಂದಿನ ಆರ್ಥಿಕ ವರ್ಷದಲ್ಲಿ ರೈಲ್ವೆ ಇಲಾಖೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ಮೀಸಲಿಡುವಂತೆಯೂ ಸಮಿತಿ ಈಗಾಗಲೇ ಸಲಹೆ ನೀಡಿತ್ತು.

ಪಿತ್ರೋಡ ಅವರಲ್ಲದೆ, ಎಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್ ಪಾರೇಖ್, ಎಸ್‌ಬಿಐ ಮಾಜಿ ಅಧ್ಯಕ್ಷ ಎಂ.ಎಸ್. ವರ್ಮಾ, ಐಐಎಂ ಅಹಮದಾಬಾದ್‌ನ ಪ್ರೊ. ರಘುರಾಮ್, ಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕ ಡಾ. ರಾಜೀವ್ ಲಾಲ್, ಫೀಡ್‌ಬ್ಯಾಕ್ ಇನ್‌ಫ್ರಾಸ್ಟ್ರಕ್ಚರ್ ಸರ್ವೀಸಸ್‌ನ ಅಧ್ಯಕ್ಷ ವಿನಾಯಕ ಚಟರ್ಜಿ ಈ ಸಮಿತಿಯಲ್ಲಿದ್ದಾರೆ.

ರೈಲ್ವೆ ಇಲಾಖೆಯಲ್ಲಿ ಈಗ ಬಳಸುತ್ತಿರುವ ವ್ಯವಸ್ಥೆ ತನ್ನ ಪ್ರಸ್ತುತತೆ ಕಳೆದುಕೊಂಡಿದೆ ಎಂದಿದ್ದ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಈ ಸಮಿತಿ ರಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT