ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಯೋಜನೆಗಳಿಗೆ ಉಚಿತ ಭೂಮಿ- ಸಿ.ಎಂ

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಂತರರಾಷ್ಟ್ರೀಯ ದರ್ಜೆ ಸೌಲಭ್ಯಗಳನ್ನು ಒಳಗೊಂಡ ಹುಬ್ಬಳ್ಳಿಯ ನವೀಕೃತ ರೈಲು ನಿಲ್ದಾಣ ಶನಿವಾರ ಉದ್ಘಾಟನೆಯಾಯಿತು. ನೈರುತ್ಯ ರೈಲ್ವೆಯು 29.5 ಕೋಟಿ ರೂಪಾಯಿ ವೆಚ್ಚದಲ್ಲಿ ಈ ನಿಲ್ದಾಣವನ್ನು ನವೀಕರಿಸಿದೆ. ಹವಾನಿಯಂತ್ರಿತ ನಿರೀಕ್ಷಣಾ ಕೊಠಡಿ, ವಿಐಪಿ ಲಾಂಜ್, ಎಸ್ಕಲೇಟರ್, ಲಿಫ್ಟ್, ವಿಶಾಲವಾದ ಆಗಮನ- ನಿಗರ್ಮನ ದ್ವಾರಗಳು, ಆಹಾರ ಮಳಿಗೆ, ಇಂಟರ್‌ನೆಟ್ ಕೆಫೆ, ಮನರಂಜನಾ ಕೇಂದ್ರಗಳ ಸೌಲಭ್ಯ ಕಲ್ಪಿಸಲಾಗಿದೆ. ಪ್ಲಾಟ್‌ಫಾರಂಗಳ ಸಂಖ್ಯೆ ಕೂಡ 4 ರಿಂದ 6ಕ್ಕೆ ಏರಿದೆ.

ಉದ್ಘಾಟನೆ ನೆರವೇರಿಸಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ರೈಲ್ವೆಯು ರಾಜ್ಯದಲ್ಲಿ ಹೊಸದಾಗಿ ಕೈಗೆತ್ತಿಕೊಳ್ಳುವ ಎಲ್ಲ ಯೋಜನೆಗಳಿಗೂ ರಾಜ್ಯ ಸರ್ಕಾರ ಉಚಿತವಾಗಿ ಭೂಮಿ ಒದಗಿಸಲಿದೆ ಎಂದು ಪ್ರಕಟಿಸಿದರು. ಅಲ್ಲದೇ, ರಾಜ್ಯಕ್ಕೆ ಇನ್ನಷ್ಟು ರೈಲ್ವೆ ಯೋಜನೆಗಳನ್ನು ಮಂಜೂರು ಮಾಡುವಂತೆ ಸಮಾರಂಭದಲ್ಲಿ ಹಾಜರಿದ್ದ ರೈಲ್ವೆ ಖಾತೆ ಸಹಾಯಕ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಕೋರಿದರು.

ಬೀದರ್-ಗುಲ್ಬರ್ಗ ನಡುವಿನ ರೈಲು ಮಾರ್ಗ ಮತ್ತು ಬೆಂಗಳೂರು-ಮೈಸೂರು ಜೋಡಿ ಮಾರ್ಗದ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು. ನಿತ್ಯ ಸಂಪರ್ಕ ಕ್ರಾಂತಿ:  ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುನಿಯಪ್ಪ, `ಪ್ರಸ್ತುತ ರೈಲ್ವೆ ಯೋಜನೆಗಳಿಗೆ ಹಣಕಾಸಿನ ಕೊರತೆ ಇರುವುದು ನಿಜ.

ಕೆಲವು ಯೋಜನೆಗಳಿಗೆ ಆಯಾ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಹಣ ಬಿಡುಗಡೆ ಮಾಡಿದ್ದರೂ ತನ್ನ ಪಾಲಿನ ಹಣ ಕೊಡಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಆದರೆ 12ನೇ ಹಣಕಾಸು ಯೋಜನೆಯಡಿ ಕೇಂದ್ರ ಸರ್ಕಾರ ರೈಲ್ವೆ ಇಲಾಖೆಗೆ 1.94 ಲಕ್ಷ ಕೋಟಿ ರೂಪಾಯಿ ನೀಡಲಿದ್ದು ಮುಂದಿನ ಮಾರ್ಚ್ ನಂತರ ಹಣದ ಕೊರತೆ ಎದುರಾಗುವುದಿಲ್ಲ ಎಂದರು.~ ಎಂದು ತಿಳಿಸಿದರು.

ಈ ಭಾಗದ ಜನಪ್ರತಿನಿಧಿಗಳ ಆಗ್ರಹದಂತೆ ಸಂಪರ್ಕಕ್ರಾಂತಿ ರೈಲು ದೀಪಾವಳಿ ನಂತರ ನಿತ್ಯವೂ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಮೂಲಕ ದೆಹಲಿಗೆ ಸಂಚಾರ ಆರಂಭಿಸಲಿದೆ ಎಂದರು. ಹುಬ್ಬಳ್ಳಿ ರೈಲು ನಿಲ್ದಾಣದ ನವೀಕರಣ ಕಾಮಗಾರಿ ಕೈಗೆತ್ತಿಕೊಂಡಿರುವ ಕಂಪೆನಿಗಳಿಗೆ ಕೆಲವು ತಾಂತ್ರಿಕ ಕಾರಣಗಳಿಗೆ ಹಣ ಬಿಡುಗಡೆ ತಡವಾಗಿದೆ. ಶೀಘ್ರದಲ್ಲೇ ಬಾಕಿ ಹಣ ಪಾವತಿಸಲಾಗುವುದು ಎಂದು ಹೇಳಿದರು.

ವೇದಿಕೆಗೆ ಆರೋಪಿ
`ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯ ಸ್ಥಾಪನೆಗೆ ಆಗ್ರಹಿಸಿ ನಡೆದ ಹೋರಾಟದಲ್ಲಿ ನಾನು ಪ್ರಮುಖ ಆರೋಪಿ. ಇದೇ 15 ರಂದು ಮೊಕ್ದ್ದದಮೆಯ ವಿಚಾರಣೆ ನಡೆಯಲಿದೆ. ಆದರೆ ರೈಲ್ವೆ ಇಲಾಖೆ ಆರೋಪಿಯನ್ನೇ  ವೇದಿಕೆಗೆ ಆಹ್ವಾನಿಸಿದೆ~ ಎಂದು ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಚಟಾಕಿ ಹಾರಿಸಿದರು.

`ಪಾಪು ಅವರ ಮಾತಿಗೆ ಉತ್ತರವೆಂಬಂತೆ ಸಚಿವ ಮುನಿಯಪ್ಪ, `ಇನ್ನು ಮುಂದೆ ರೈಲು ಹಳಿ ಮೇಲೆ ಕುಳಿತು ಹೋರಾಟ ಮಾಡಬೇಡಿ. ನಿಲ್ದಾಣದ ಬಾಗಿಲಲ್ಲಿ ಕುಳಿತು ಹೋರಾಟ ಮಾಡಿ. ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣಕ್ಕಾಗಿ ದುಡಿದ ನಿಮ್ಮ ವಿರುದ್ಧ ಕೇಸು ದಾಖಲಿಸುವುದು ನಮ್ಮ ಅಧಿಕಾರಿಗಳಿಗೂ ಮುಜುಗರ~ ಎಂದರು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಹೋರಾಟಗಾರರ ವಿರುದ್ಧದ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವಂತೆ ಸೂಚಿಸುವುದಾಗಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT