ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಯೋಜನೆಗೆ ಒಪ್ಪಿಗೆ ನೀಡಿ

Last Updated 4 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಒಳಗೊಂಡಂತೆ ವಿವಿಧ ರಾಜ್ಯಗಳಲ್ಲಿ `ವೆಚ್ಚ ಹಂಚಿಕೆ ಆಧಾರ~ದಲ್ಲಿ ಕೈಗೆತ್ತಿಕೊಂಡಿರುವ ರೈಲ್ವೆ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡುವಂತೆ ರೈಲ್ವೆ ಸಚಿವ ಕೆ.ಎಚ್. ಮುನಿಯಪ್ಪ ಯೋಜನಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟಿಕ್‌ಸಿಂಗ್ ಅಹ್ಲುವಾಲಿಯಾ ಅವರನ್ನು ಮುನಿಯಪ್ಪ ಬುಧವಾರ ಭೇಟಿ ಮಾಡಿ ಚರ್ಚಿಸಿದರು. ವಿವಿಧ ರಾಜ್ಯಗಳಲ್ಲಿ 340 ಯೋಜನೆಗಳಿವೆ. ರೂ 1.22ಲಕ್ಷ ಕೋಟಿ ಮೊತ್ತದ ಯೋಜನೆಗಳಿಗೆ ಹಣಕಾಸು ಸಚಿವಾಲಯ ಹಣ ಬಿಡುಗಡೆ ಮಾಡಬೇಕಾಗಿದೆ. ಇದರಲ್ಲಿ ಕೆಲವನ್ನು ಸಮಾನ ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರೈಲ್ವೆ ಯೋಜನೆಗಳನ್ನು ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೆತ್ತಿಕೊಂಡು ತ್ವರಿತವಾಗಿ ಮುಗಿಸಲು ಉದ್ದೇಶಿಸಲಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್, ರಾಜಸ್ತಾನ ರಾಜ್ಯಗಳು ವೆಚ್ಚ ಹಂಚಿಕೆಗೆ ಮುಂದಾಗಿವೆ. ಉಳಿದ ರಾಜ್ಯಗಳಿಗೂ ಮನವೊಲಿಸಲಾಗುತ್ತಿದೆ ಎಂದರು.

ಹಿಂದಿನ ಮೂರು ಹಣಕಾಸು ವರ್ಷದಲ್ಲಿ ಕರ್ನಾಟಕದಲ್ಲಿ ರೂ 5829 ಕೋಟಿ ವೆಚ್ಚದ 1430 ಕಿ.ಮೀ ಉದ್ದದ 14 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಇದರಲ್ಲಿ ರೂ 4975 ಕೋಟಿ ಮೊತ್ತದ  878 ಕಿ.ಮೀ ಉದ್ದದ 7 ಯೋಜನೆಗಳನ್ನು ವೆಚ್ಚ ಹಂಚಿಕೆಯಡಿ ಕೈಗೆತ್ತಿಕೊಳ್ಳಲಾಗಿದೆ. ಮೂರು ವರ್ಷಗಳಲ್ಲಿ ಕರ್ನಾಟಕ ರೂ 753 ಕೋಟಿ ಬಿಡುಗಡೆ ಮಾಡಿದೆ. ಬೆಂಗಳೂರು ಜೋಡಿ ಮಾರ್ಗಕ್ಕೆ 2/3ರಷ್ಟು ವೆಚ್ಚ ಭರಿಸುವುದಾಗಿ ಭರವಸೆ ನೀಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಳೆದ ರೈಲ್ವೆ ಬಜೆಟ್‌ನಲ್ಲಿ ರೂ 3302 ಕೋಟಿ ವೆಚ್ಚದ 626 ಕಿ.ಮೀ ಉದ್ದದ ಯೋಜನೆಗಳನ್ನು ಪ್ರಕಟಿಸಲಾಗಿದ್ದು ತಾತ್ವಿಕ ಒಪ್ಪಿಗೆಗಾಗಿ ಯೋಜನಾ ಆಯೋಗಕ್ಕೆ ಕಳುಹಿಸಲಾಗಿದೆ. ಆಯೋಗ ಶೀಘ್ರ ಅನುಮೋದನೆ ನೀಡಬಹುದು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ರೈಲ್ವೆ ಟಿಕೆಟ್ ಕಾಳಸಂತೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಅಕ್ರಮ ವ್ಯವಹಾರದಲ್ಲಿ ತೊಡಗಿದ್ದವರನ್ನು ಪತ್ತೆ ಹಚ್ಚಿ ದಂಡ ವಸೂಲು ಮಾಡಲಾಗಿದೆ. ಮಧ್ಯವರ್ತಿಗಳ ಜತೆಗೂಡಿದ್ದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ. ಆನ್‌ಲೈನ್‌ನಲ್ಲಿ ಏಕಕಾಲಕ್ಕೆ ಟಿಕೆಟ್ ಕಾದಿರಿಸುವ ಸಾಮರ್ಥ್ಯವನ್ನು ಐದು ಲಕ್ಷದಿಂದ ಏಳು ಲಕ್ಷಕ್ಕೆ ಹೆಚ್ಚಿಸಲಾಗುತ್ತಿದೆ ಎಂದು  ಸ್ಪಷ್ಟಪಡಿಸಿದರು.

ಪಶ್ಚಿಮಘಟ್ಟವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸಿರುವುದರಿಂದ ಹುಬ್ಬಳ್ಳಿ- ಅಂಕೋಲಾ ಯೋಜನೆಗೆ ತೊಂದರೆಯಿಲ್ಲ. ಈ ಯೋಜನೆಯಿಂದ ರೈಲ್ವೆ ಸಚಿವಾಲಯ ಹಿಂದೆ ಸರಿಯುವುದಿಲ್ಲ. ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಪಡೆದು ಯೋಜನೆ ಕೈಗೆತ್ತಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT