ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಸೇವೆ ಸುಧಾರಣೆಗೆ ಸಕಾಲ

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ದೇಶದ ಬಹುದೊಡ್ಡ ಸಾರಿಗೆ ಸಾಧನವಾಗಿರುವ ರೈಲ್ವೆಗೆ ಕಾಯಕಲ್ಪ ನೀಡುವ ಅಗತ್ಯವನ್ನು ಮಹಾಲೇಖಪಾಲರ (ಸಿಎಜಿ)  ವರದಿಗಳು ಎತ್ತಿ ತೋರಿಸಿವೆ. ರೈಲ್ವೆ ವ್ಯವಸ್ಥೆಯಲ್ಲಿರುವ ಹತ್ತಾರು ಲೋಪಗಳ ಮೇಲೆ ಬೆಳಕು ಚೆಲ್ಲಿವೆ. ರೈಲ್ವೆ ಅವ್ಯವಸ್ಥೆಗಳು  ಸರ್ಕಾರ ಮತ್ತು ಸಾರ್ವಜನಿ ಕರಿಗೆ ಗೊತ್ತಿರುವ ಸಂಗತಿಗಳೇ. ದೇಶದ ರೈಲುಗಳಲ್ಲಿ ನಿತ್ಯ ಸಂಚರಿಸುವ ಕೋಟ್ಯಂತರ ಜನರು ಹಲವು ವರ್ಷಗಳಿಂದ ಈ ಅವ್ಯವಸ್ಥೆಯನ್ನು ಅನುಭವಿಸುತ್ತಲೇ ಇದ್ದಾರೆ. ಈಗ ಸಿಎಜಿ ಅದನ್ನೇ ತನ್ನ ವರದಿಗಳಲೂ್ಲ ಹೇಳುವ ಮೂಲಕ ಪ್ರಯಾಣಿಕರ ಬವಣೆಯನ್ನು ಸರ್ಕಾರದ ಗಮನಕ್ಕೆ ತಂದಿದೆ. ಸಿಎಜಿ ವರದಿಗಳು, ರೈಲ್ವೆ ಅವ್ಯವಸ್ಥೆಯನ್ನು ಪಟ್ಟಿ ಮಾಡಿರುವು ದಲ್ಲದೇ ಅದರ ಒಟ್ಟಾರೆ ಸುಧಾರಣೆಗೆ ಕೆಲ ಮಾರ್ಗದರ್ಶಿ ಸೂತ್ರಗಳನ್ನೂ ಶಿಫಾರಸು ಮಾಡಿವೆ. ಇನ್ನಾದರೂ ಸರ್ಕಾರ ರೈಲ್ವೆಗೆ ಕಾಯಕಲ್ಪ ನೀಡಲು ಮುಂದಾಗಬೇಕು ಎಂಬುದು ದೇಶದ ಜನರ ನಿರೀಕ್ಷೆ. ರೈಲ್ವೆ ಇಲಾಖೆ ಹಾದಿ ತಪ್ಪಿದ್ದು ತೃಣಮೂಲ ಕಾಂಗ್ರೆಸ್ ನಾಯಕರು ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಎಂಬ ಆಘಾತಕಾರಿ ಸಂಗತಿಯನ್ನೂ ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಮೂರು ವರ್ಷಗಳ ಅವಧಿಯಲ್ಲಿ ರೈಲ್ವೆ ನಿಧಿ  ` 21,681 ಕೋಟಿಯಿಂದ ` 1,770 ಕೋಟಿಗೆ ಕುಸಿದದ್ದೇ ಎಲ್ಲ ಅವ್ಯವಸ್ಥೆಗಳಿಗೆ ಕಾರಣ. ಬಜೆಟ್ ತಯಾರಿಸುವ ವಿಷಯದಲ್ಲಿ ಆದ ಲೋಪಗಳು, ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿ ವಿಳಂಬ ಇತ್ಯಾದಿಗಳಿಂದಾಗಿ ರೈಲ್ವೆ ವ್ಯವಸ್ಥೆ ಹದಗೆಟ್ಟಿತು ಎಂದು ಸಿಎಜಿ  ಹೇಳಿದೆ. ರೈಲ್ವೆ ಖಾತೆ ತಮಗೇ ಬೇಕೆಂದು ಪಟ್ಟು ಹಿಡಿದು ಪಡೆದುಕೊಂಡ ತೃಣಮೂಲ ಕಾಂಗ್ರೆಸ್ ಮುಖಂಡರ ಹೊಣೆಗೇಡಿ ವರ್ತನೆಗೆ ಸಾರ್ವಜನಿಕರ ಹಿತ ಬಲಿಯಾದದ್ದು ದುರದೃಷ್ಟಕರ.

ದೇಶದ ಉದ್ದಗಲದಲ್ಲಿನ ರೈಲ್ವೆ ಜಾಲದಲ್ಲಿರುವ ಅವ್ಯವಸ್ಥೆಗಳು ಒಂದೆರ ಡಲ್ಲ. ರೈಲುಗಳು ಮತ್ತು ನಿಲ್ದಾಣಗಳ ಕೊಳಕು ಪರಿಸರ, ನೀರಿನ ಕೊರತೆ, ಕಳಪೆ ಗುಣಮಟ್ಟದ ಆಹಾರ,  ಗುಣಮಟ್ಟ ಪರಿಶೀಲಿಸುವ ವ್ಯವಸ್ಥೆಯೇ ಇಲ್ಲ ದಿರುವುದು, ನಿಲ್ದಾಣಗಳು ಮತ್ತು ರೈಲುಗಳಲ್ಲಿನ ಕೊಳಕು ಶೌಚಾಲಯ ಗಳು, ಅಭದ್ರತೆ ಹೀಗೆ ಹತ್ತಾರು ಲೋಪಗಳನ್ನು ಸಿಎಜಿ ತನ್ನ ವರದಿಯಲ್ಲಿ ಪಟ್ಟಿ ಮಾಡಿದೆ. ಅವ್ಯವಸ್ಥೆಗೆ ಹಣದ ಕೊರತೆ ಒಂದೇ ಕಾರಣವಲ್ಲ. ರೈಲುಗಳ ದೈನಂದಿನ ನಿರ್ವಹಣೆಗೆ ಮೀಸಲಿಟ್ಟ ಹಣವನ್ನು ಬಳಸಿಕೊಳ್ಳುವ ವಿಷಯದಲ್ಲೂ ಇಲಾಖೆ ವಿಫಲವಾಗಿದೆ. ಸೂಕ್ತ ಮೇಲ್ವಿಚಾರಣೆಯ ಅಭಾವ, ಭ್ರಷ್ಟಾಚಾರ ಮತ್ತಿತರ ಕಾರಣಗಳಿಂದ ವ್ಯವಸ್ಥೆ ಹದಗೆಟ್ಟದೆ. ರೈಲ್ವೆ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವ ಸಲಹೆಗಳಿಗೆ ಬರವಿಲ್ಲ. ಪ್ರಯಾಣ ದರ ಹೆಚ್ಚಿಸಿ ಅದರಿಂದ ಸಂಗ್ರಹವಾಗುವ ಹಣ ಬಳಸಿಕೊಂಡು ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ದಿಟ್ಟ ನಿಲುವು ತಾಳಬೇಕು. ಅದಕ್ಕಿಂತ ಮುಖ್ಯವಾಗಿ ಈಗ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡೇ ಉತ್ತಮ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಬೇಕು. ರೈಲ್ವೆ ಇಲಾಖೆಗೆ ದಕ್ಷ ನಾಯಕ ತ್ವದ ಅಗತ್ಯವಿದೆ. ಸೋರಿಕೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರೆ ಪರಿಸ್ಥಿತಿ ಸುಧಾರಿಸೀತು.  ಸಿಎಜಿ ಮಾಡಿರುವ ಶಿಫಾರಸುಗಳನು್ನ  ಜಾರಿಗೆ ತರುವ ಮೂಲಕ ರೈಲ್ವೆ ವ್ಯವಸ್ಥೆ ಸುಧಾರಣೆಗೆ ಕೇಂದ್ರ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಲು ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT