ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆಗೆ ಭೂಮಿ ಒದಗಿಸಿ

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕರ್ನಾಟಕದ ಐದು ಮಂದಿ ಮತ್ತು ಇಬ್ಬರು ಹೊರಗಿನ ಕನ್ನಡಿಗರು (ಜಾರ್ಜ್, ಕಲ್ಮಾಡಿ ) ರೈಲ್ವೆ ಸಚಿವರಾದರೂ, ರೈಲ್ವೆ ಯೋಜನೆಗಳ ವಿಷಯದಲ್ಲಿ ಕರ್ನಾಟಕವನ್ನು ಕಡೆಗಣಿಸುತ್ತಾ ಬರಲಾಗಿದೆ ಎಂಬ ಆರೋಪ ಹಳೆಯದು. ವಾಸ್ತವವಾಗಿ ಈ ಆರೋಪವನ್ನು ತಳ್ಳಿಹಾಕಲಾಗದು. ಇದೇ ಆರೋಪ ಈಗಲೂ ಮುಂದುವರಿದಿರುವುದು ದುರದೃಷ್ಟಕರ. ಇದಕ್ಕೆ ದೆಹಲಿಯ ರೈಲ್ವೆ ಭವನದಲ್ಲಿ ಕುಳಿತವರು ಎಷ್ಟು ಕಾರಣವೋ, ಅಷ್ಟೇ ರಾಜ್ಯ ಸರ್ಕಾರ ತೋರುತ್ತಾ ಬಂದ ನಿರ್ಲಕ್ಷ್ಯವೂ ಕಾರಣ ಎನ್ನುವುದೂ ಅಷ್ಟೇ ಸತ್ಯ. ಈ ಬಾರಿಯೂ ನಿರೀಕ್ಷಿಸಿದಷ್ಟು ಯೋಜನೆ ಲಭ್ಯವಾಗಿಲ್ಲ ಎನ್ನುವ ಅಸಮಾಧಾನ ವ್ಯಕ್ತವಾಗಿದೆ. ಆದರೆ ರಾಜ್ಯದಲ್ಲಿ ರೈಲ್ವೆ ಯೋಜನೆಗಳು ಬಂದರೂ, ಅದಕ್ಕೆ ಬೇಕಾದ ಭೂಮಿ ನೀಡುವಲ್ಲಿ ರಾಜ್ಯ ಸರ್ಕಾರ ಉದಾಸೀನ ತೋರುತ್ತಾ ಬಂದಿದೆ ಎಂಬುದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರ ಉತ್ತರ. ಬೆಂಗಳೂರು- ಮೈಸೂರು ರೈಲು ಮಾರ್ಗವನ್ನು ಜೋಡಿ ಮಾರ್ಗವನ್ನಾಗಿ ಪರಿವರ್ತಿಸುವ ಮತ್ತು ವಿದ್ಯುದ್ದೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡು ಐದಾರು ವರ್ಷಗಳಾಯಿತು. ಕಾಮಗಾರಿ ಮಾತ್ರ ಆಮೆ ನಡಿಗೆಯಲ್ಲಿ ನಡೆದಿದೆ. ಬೆಂಗಳೂರು- ಚನ್ನಪಟ್ಟಣದವರೆಗೆ ಕಾಮಗಾರಿ ಮುಗಿದಿದೆ. ಆದರೆ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಇನ್ನೂ 98 ಎಕರೆ ಭೂಮಿ ಬೇಕಾಗಿದೆ. ರೈಲ್ವೆ ಇಲಾಖೆಯ ಸುಪರ್ದಿಗೆ ಈ ಭೂಮಿ ಒದಗಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎನ್ನುವುದು ಗಂಭೀರ ವಿಷಯ.

ಹಾಗೆಯೇ ಕುಡಚಿ-ಬಾಗಲಕೋಟೆ ಮತ್ತು ಹೊಸಪೇಟೆ-ವಾಸ್ಕೋ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾದರೂ, ಭೂಮಿ ನೀಡಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಸಹಕರಿಸದಿರುವುದು ಅಕ್ಷಮ್ಯ. ರಾಜ್ಯದಲ್ಲಿ ಇನ್ನೂ ಹನ್ನೆರಡು ಹೊಸ ರೈಲು ಮಾರ್ಗಗಳಿಗಾಗಿ ಸಮೀಕ್ಷೆ ಕಾರ್ಯ ಮುಗಿದಿದೆ. ಇವುಗಳನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ, ಅದಕ್ಕಾಗಿ ಅವಶ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಿ ಸಕಾಲಕ್ಕೆ ಭೂಮಿ ಒದಗಿಸಲು ರಾಜ್ಯ ಸರ್ಕಾರ ದೃಢ ನಿಲುವು ತೆಗೆದುಕೊಳ್ಳಬೇಕು. ಕೇಂದ್ರ ಸರ್ಕಾರದಿಂದ ಯಾವುದೇ ಯೋಜನೆಯ ಲಾಭ ಪಡೆಯುವಲ್ಲಿ ಕರ್ನಾಟಕ ಸದಾ ಹಿಂದೆ ಬೀಳುವುದು ಈಗಿನ ಬೆಳವಣಿಗೆಯಲ್ಲ ಎನ್ನುವುದು ನಿಜ. ಅದು ಹಲವು ದಶಕಗಳಿಂದಲೇ ನಡೆದು ಬಂದಿರುವ ಜಾಯಮಾನ. ಈ ಆಲಸಿ ಮನೋಭಾವ ತೊಲಗಬೇಕು. ಇದರಿಂದಾಗಿ ಕರ್ನಾಟಕವು ರೈಲ್ವೆ ಸೌಲಭ್ಯದಲ್ಲಿ ಇರಬೇಕಾದ  ರಾಷ್ಟ್ರೀಯ ಸರಾಸರಿಯಲ್ಲಿ ಶೇಕಡಾ 22ರಲ್ಲಿ ಶೇ 17 ಮಾತ್ರ ಇರುವುದಾಗಿ ರೈಲ್ವೆ ಮಾಹಿತಿಯೇ ಹೇಳುತ್ತದೆ. ರಾಜ್ಯದಲ್ಲಿ ಮಾಡಬೇಕೆಂದಿರುವ ಹಲವು ಯೋಜನೆಗಳು ಕಾರ್ಯಗತವಾದರೆ ಅದು ಶೇ 22ನ್ನೂ ಮೀರಲಿದೆ. ರಾಜ್ಯದಾದ್ಯಂತ ರೈಲ್ವೆ ಜಾಲ ಅಭಿವೃದ್ಧಿಯಾದರೆ ಅದು ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವುದರಲ್ಲಿ ಸಂಶಯವಿಲ್ಲ. ಇದು ರಾಜ್ಯ ಸರ್ಕಾರಕ್ಕೆ ತಿಳಿಯದ ಸಂಗತಿಯೇನಲ್ಲ.  ರೈಲ್ವೆ ಯೋಜನೆಗಳು ಮಂಜೂರಾದರೆ ಸಾಲದು, ಅವುಗಳಿಗೆ ಬೇಕಾದ ಭೂಮಿ ಮತ್ತು ತನ್ನ ಪಾಲಿನ ಹಣವನ್ನು ನೀಡಲು ರಾಜ್ಯ ಸರ್ಕಾರ ಇನ್ನಾದರೂ ಹಿಂದೆ ಬೀಳಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT