ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆಗೇಟ್ ವಿರುದ್ಧ ಭುಗಿಲೆದ್ದ ಆಕ್ರೋಶ

Last Updated 14 ಮೇ 2012, 18:55 IST
ಅಕ್ಷರ ಗಾತ್ರ

ಮಂಗಳೂರು: ನಗರದ ಪಡೀಲ್ ರೈಲ್ವೆ ಕ್ರಾಸಿಂಗ್‌ನಲ್ಲಿ ಹಾಕಿದ ಗೇಟ್ ಅನ್ನು ತಾಸುಗಟ್ಟಲೆ ತೆಗೆಯದಿರುವುದನ್ನು ವಿರೋಧಿಸಿ, ಹಾಗೂ ಪಡೀಲಿನಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ಸ್ಥಳೀಯರು ಸೋಮವಾರ ರಾತ್ರಿ ಮೂರು ತಾಸಿಗೂ ಅಧಿಕ ಕಾಲ ರೈಲು ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಇದರಿಂದಾಗಿ ಆರು ರೈಲುಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ಘಟನೆ ವಿವರ: ಪಡೀಲ್ ರೈಲ್ವೆ ಕ್ರಾಸಿಂಗ್‌ನಲ್ಲಿ ಸೋಮವಾರ ರಾತ್ರಿ 8.15ಕ್ಕೆ ರೈಲ್ವೆ ಗೇಟ್ ಹಾಕಿ ಅರ್ಧ ತಾಸು ಕಳೆದರೂ ಯಾವುದೇ ರೈಲು ಸಂಚರಿಸಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಸ್ಥಳೀಯರು, ಹಾಕಿದ ಗೇಟ್ ತೆಗೆಯಲು ರೈಲ್ವೆ ಸಿಬ್ಬಂದಿಗೆ ಅವಕಾಶ ನೀಡಲಿಲ್ಲ. ಗೇಟ್ ತೆಗೆಯಲು ಮುಂದಾದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ಅಲ್ಲದೇ ಹಳಿಯ ಮೇಲೆ ಕಬ್ಬಿಣದ ಪೈಪ್ ಮತ್ತಿತರ ಸಾಮಾಗ್ರಿಗಳನ್ನು ಅಡ್ಡ ಇಟ್ಟು ರೈಲು ಸಂಚರಿಸದಂತೆ ತಡೆದರು. ಇದರಿಂದಾಗಿ ರೈಲ್ವೆ ಹಳಿಯ ಎರಡೂ ಕಡೆ ನೂರಾರು ವಾಹನಗಳು ತಾಸುಗಟ್ಟಲೆ ಸಾಲುಗಟ್ಟಿ ನಿಂತಿದ್ದವು.

ರೈಲ್ವೆ ಕ್ರಾಸಿಂಗ್ ಬಳಿ ಪ್ರತಿಭಟನೆ ನಡೆಯುತ್ತಿದ್ದ ಸುದ್ದಿ ತಿಳಿದು ಸ್ಥಳೀಯರು ಹಳಿ ಮೇಲೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದರು.

`ನಾನು 19 ವರ್ಷದಿಂದ ಇಲ್ಲಿ ನೆಲೆಸಿದ್ದೇನೆ. ಇಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ದಶಕಗಳೇ ಕಳೆದಿವೆ. ಈ ಕ್ರಾಸಿಂಗ್‌ನಲ್ಲಿ ಗೇಟ್ ಬಿದ್ದ ಕಾರಣ ಅನೇಕ ಮಂದಿ ಆಂಬುಲೆನ್ಸ್‌ನಲ್ಲೇ ಪ್ರಾಣ ಬಿಟ್ಟಿದ್ದಾರೆ. ಅನೇಕ ಗರ್ಭಿಣಿಯರು ಇದೇ ಸ್ಥಳದಲ್ಲಿ ಹೆತ್ತಿದ್ದಾರೆ. ಆದರೂ ನಮ್ಮ ಬೇಡಿಕೆಗೆ ಕಿವಿಗೊಟ್ಟಿಲ್ಲ.~ ಎಂದು ಪಡೀಲ್ ನಿವಾಸಿ ಭಾಗ್ಯ ಆಕ್ರೋಶ ವ್ಯಕ್ತಪಡಿಸಿದರು.

`ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಬೆಳಿಗ್ಗೆ ಕೆಲಸಕ್ಕೆ ಹೋಗುವವರು ಎಲ್ಲರೂ ಇಲ್ಲಿ ನಿತ್ಯ ಇಲ್ಲಿ ತಾಸುಗಟ್ಟಲೆ ಸಿಕ್ಕಿ ಹಾಕಿಕೊಂಡು ಪರದಾಡುತ್ತಿದ್ದೇವೆ. ಆದರೂ ರೈಲ್ವೆ ಅಧಿಕಾರಿಗಳಿಗೆ, ಸ್ಥಳೀಯ ಪಾಲಿಕೆಗೆ, ಜನಪ್ರತಿನಿಧಿಗಳಿಗೆ ನಮ್ಮ ಸಮಸ್ಯೆ ಅರ್ಥವಾಗಿಲ್ಲ~ ಎಂದು ಬಜಾಲ್ ನಿವಾಸಿ ಸುಧೀರ್ ದೂರಿದರು.
ರಾತ್ರಿ 11.30ರ ರವರೆಗೂ ಸ್ಥಳೀಯರು ಹಳಿಯಿಂದ ಕದಲಲಿಲ್ಲ. ಪೊಲೀಸರು ಸ್ಥಳೀಯರನ್ನು ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರೂ ಪ್ರಯತ್ನ ಯಶಸ್ವಿಯಾಗಲಿಲ್ಲ.

ಸ್ಥಳಕ್ಕೆ ಜಿಲ್ಲಾ ಮೀಸಲು ಪೊಲೀಸ್ ಪಡೆಯನ್ನು ಕರೆಸಲಾಗಿದೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸದಿದ್ದರೆ ಮಂಗಳವಾರ ಬೆಳಿಗ್ಗೆ ವರೆಗೂ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT