ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊಟ್ಟಿ ಬಾಯಿಗೆ ಬರಲೇ ಇಲ್ಲ!

Last Updated 19 ಜನವರಿ 2011, 10:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ರೈಲು ನಿಲ್ದಾಣದ ನೂತನ ಕಟ್ಟಡದ ಪಕ್ಕ ಮಂಗಳವಾರ ಮಧ್ಯಾಹ್ನದ ಹೊತ್ತು. ರೊಟ್ಟಿ  ಬೇಯಿಸಬೇಕಿದ್ದ ಒಲೆ ಇದ್ದಕ್ಕಿದ್ದಂತೆ ಆರಿದಾಗ ಆ ಇಡೀ ಕುಟುಂಬದ ಹೊಟ್ಟೆ ಚುರುಗುಡುತ್ತಿತ್ತು. ಕಲೆಸಿಟ್ಟ ಹಸಿ ಹಿಟ್ಟನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ಮತ್ತೊಂದು ಜಾಗ ಹುಡುಕಿಕೊಂಡು ಹೊರಟರು. ಉತ್ತರ ಭಾರತದಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲೆಂದೇ ಈ ಕುಟುಂಬ ಹುಬ್ಬಳ್ಳಿಯನ್ನು ಹುಡುಕಿಕೊಂಡು ಬಂದಿದೆಯಂತೆ.
 
ಮನೆ-ಮಠ ಏನೂ ಇಲ್ಲದ ಈ ಕುಟುಂಬ ರೈಲು ನಿಲ್ದಾಣದ ಹೊಸ ಕಟ್ಟಡ ಮುಂದಿನ ಖಾಲಿ ಜಾಗೆಯಲ್ಲಿ ಒಲೆ ಹೂಡಿತು. ಕುಟುಂಬದ ಊಟದ ಹೊಣೆಯನ್ನು ಹೊತ್ತ ಮಹಿಳೆ ಯೊಬ್ಬರು ಅಲ್ಲಿಯೇ ಇದ್ದ ಕಲ್ಲುಗಳನ್ನು ಇಟ್ಟು ಒಲೆ ಸಿದ್ಧ ಮಾಡಿ ರೊಟ್ಟಿ ಬೇಯಿಸತೊಡಗಿದಳು. ಒಲೆಯ ಮೇಲೆ ಇನ್ನೂ ಎರಡು ರೊಟ್ಟಿಗಳೂ ಬೇಯ್ದಿರಲಿಲ್ಲ. ಅಷ್ಟರಲ್ಲಿ ರೈಲ್ವೆ ಪೊಲೀಸ್ ಪೇದೆಯ ಆಗಮನವಾಯಿತು. ರೊಟ್ಟಿ ಬೇಯಿಸುತ್ತಿದ್ದ ಮಹಿಳೆ ಯತ್ತ ಆತ ಲಾಠಿ ಬೀಸಿದ. ಗರ್ಭಿಣಿಯಾಗಿದ್ದ ಆಕೆ ಹೆದರಿ ಓಡಿದಳು. ವಾಪಸ್ ಬಂದ ಆಕೆ ಅರ್ಧ ಬೆಂದ ರೊಟ್ಟಿಯನ್ನು ಬೇಯಿಸಲು ಅವಕಾಶ ನೀಡುವಂತೆ ಬೇಡಿಕೊಂಡರೂ ಪೇದೆ ಕಿವಿಗೊಡಲಿಲ್ಲ.

ಕೊನೆಗೆ ಕಲೆಸಿದ ಹಿಟ್ಟನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ಅಡುಗೆ ಮಾಡಲು ಜಾಗೆಯನ್ನು ಹುಡುಕಿಕೊಂಡು ಹೊರಟಿತು ಆ ಕುಟುಂಬ. ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಹೊಸ ಕಟ್ಟಡಕ್ಕೆ ಭೇಟಿ ನೀಡುತ್ತಾರೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಆ ಭಾಗದಲ್ಲಿ ಸ್ವಚ್ಛತೆಯನ್ನು ‘ತೋರಿಸಲು’ ಪೊಲೀಸರು ಆ ರೀತಿ ವರ್ತಿಸಿದ್ದರು. ಆದರೆ, ತುರ್ತು ಕಾರ್ಯದ ಮೇಲೆ ತೆರಳಿದ್ದರಿಂದ ವಿಭಾಗೀಯ ವ್ಯವಸ್ಥಾಪಕರು ಸ್ಥಳಕ್ಕೆ ಭೇಟಿ ನೀಡಲಿಲ್ಲ. ‘ಅಲ್ಲೇ ಪಕ್ಕದಲ್ಲಿ ಗಾಡಿ ತುಂಬಿಕೊಂಡು ಕಸ ತಂದು ಸುರುವುತ್ತಿದ್ದರೂ ಅಧಿಕಾರಿ ಗಳಿಗೆ ಕಾಣುತ್ತಿಲ್ಲ. ಬಡವರು ರೊಟ್ಟಿ ಸುಟ್ಟುಕೊಂಡಿದ್ದೇ ದೊಡ್ಡ ಪ್ರಮಾದವಾಗಿ ಕಂಡಿತು’ ಎಂದು ದಾರಿಹೋಕರು ಹೇಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT