ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಚಕ ಟೈ, ಅಚ್ಚರಿಯ ಗೆಲುವಿನ ನಡುವೆ...

Last Updated 20 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಹತ್ತನೇ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಲೀಗ್ ವ್ಯವಹಾರ ಈಗಾಗಲೇ ಕೊನೆಗೊಂಡಿದೆ. ಈ ಹಿಂದಿನ ಟೂರ್ನಿಗಳಂತೆ ಕೆಲವೊಂದು ಅಚ್ಚರಿಗಳು ನಡೆದು ಹೋದವು. ಲೀಗ್‌ನ ಐದು ಪಂದ್ಯಗಳಿಗೆ ಆತಿಥ್ಯ ವಹಿಸಿದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮೈನವಿರೇಳಿಸುವ ಪಂದ್ಯಗಳಿಗೆ ಸಾಕ್ಷಿಯಾಯಿತು. ಇಲ್ಲಿನ ಹಸಿರು ಹಾಸಿನಲ್ಲಿ ಮೂಡಿದ ದೃಶ್ಯಗಳನ್ನು ಕ್ರಿಕೆಟ್ ಪ್ರಿಯರು ಮತ್ತೆ ಮತ್ತೆ ಮೆಲುಕು ಹಾಕುವುದು ಖಂಡಿತ.

ಭಾರತ- ಇಂಗ್ಲೆಂಡ್ ನಡುವಿನ ‘ಟೈ’ನಲ್ಲಿ ಕೊನೆಗೊಂಡ ಪಂದ್ಯವನ್ನು ಮರೆಯುವುದಾದರೂ ಹೇಗೆ? ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಐರ್ಲೆಂಡ್‌ನ ಕೆವಿನ್ ಒಬ್ರಿಯನ್ ತೋರಿದ ಅಬ್ಬರದ ಇನಿಂಗ್ಸ್ ಮತ್ತೆ ಮತ್ತೆ ನೆನಪಾಗುತ್ತದೆ. ಐರ್ಲೆಂಡ್ ವಿರುದ್ಧ ಯುವರಾಜ್ ನೀಡಿದ ಆಲ್‌ರೌಂಡ್ ಆಟವನ್ನು ಭಾರತದ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿ ಸುಲಭದಲ್ಲಿ ಮರೆಯಲಿಕ್ಕಿಲ್ಲ.

ಮಹೇಂದ್ರ ಸಿಂಗ್ ದೋನಿ ಬಳಗದ ಲೀಗ್ ಹಂತದ ಎರಡು ಪಂದ್ಯಗಳಿಗೆ ಆತಿಥ್ಯ ವಹಿಸುವ ಅವಕಾಶ ಲಭಿಸಿದ್ದು ಈ ಕ್ರೀಡಾಂಗಣಕ್ಕೆ ಮಾತ್ರ. ಭಾರತದ ಬೇರೆ ಯಾವುದೇ ಕ್ರೀಡಾಂಗಣಕ್ಕೆ ಇಂತಹ ‘ಅದೃಷ್ಟ’ ಲಭಿಸಿಲ್ಲ. ನಿಗದಿತ ವೇಳಾಪಟ್ಟಿಯಂತೆ ಇಲ್ಲಿ ಭಾರತ- ಐರ್ಲೆಂಡ್ ನಡುವಿನ ಪಂದ್ಯ ಮಾತ್ರ ನಡೆಯಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಇಂಗ್ಲೆಂಡ್ ವಿರುದ್ಧದ ‘ಹೈ ವೋಲ್ಟೇಜ್’ ಪಂದ್ಯಕ್ಕೂ ಆತಿಥ್ಯ ವಹಿಸುವ ಅವಕಾಶ ದೊರೆಯಿತು. ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬೆಂಗಳೂರಿಗೆ ಸ್ಥಳಾಂತರಿಸಿತ್ತು.

ಅತಿಹೆಚ್ಚು ಲೀಗ್ ಪಂದ್ಯಗಳಿಗೆ ವೇದಿಕೆಯಾದದ್ದು ಕೂಡಾ ಚಿನ್ನಸ್ವಾಮಿ ಕ್ರೀಡಾಂಗಣ. ಇಲ್ಲಿ ಒಟ್ಟು ಐದು ಪಂದ್ಯಗಳು ನಡೆದವು. ಚೆನ್ನೈ, ನಾಗಪುರ ಮತ್ತು ನವದೆಹಲಿಯ ಕ್ರೀಡಾಂಗಣಗಳು ಲೀಗ್‌ನಲ್ಲಿ ತಲಾ ನಾಲ್ಕು ಪಂದ್ಯಗಳಿಗೆ ಆತಿಥ್ಯ ವಹಿಸಿವೆ.

ಭಾರತ - ಇಂಗ್ಲೆಂಡ್ ನಡುವಿನ ಪಂದ್ಯ ‘ಟೈ’ನಲ್ಲಿ ಅಂತ್ಯ ಕಂಡರೆ, ಐರ್ಲೆಂಡ್ ತಂಡ ಇಂಗ್ಲೆಂಡ್‌ಗೆ ಶಾಕ್ ನೀಡಿತು. ಈ ಎರಡು ರೋಚಕ ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಬೆಂಗಳೂರಿನ ಜನತೆಗೆ ಲಭಿಸಿದೆ. ಭಾರತ- ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ನ ಸಂಪೂರ್ಣ ಸೌಂದರ್ಯ ಹೊರಹೊಮ್ಮಿತ್ತು. ಅದ್ಭುತ ಬ್ಯಾಟಿಂಗ್ ಜೊತೆಗೆ ಸೊಗಸಾದ ಬೌಲಿಂಗ್ ಪ್ರದರ್ಶನವೂ ಕಂಡುಬಂತು.

ಸಚಿನ್ ತೆಂಡೂಲ್ಕರ್ ಮತ್ತು ಆ್ಯಂಡ್ರ್ಯೂ ಸ್ಟ್ರಾಸ್ ಶತಕದ ಮೂಲಕ ಮಿಂಚಿದರೆ, ಜಹೀರ್ ಖಾನ್ ಹಾಗೂ ಟಿಮ್ ಬ್ರೆಸ್ನನ್ ಪ್ರಭಾವಿ ಬೌಲಿಂಗ್ ಮೂಲಕ ಪಂದ್ಯಕ್ಕೆ ತಿರುವು ತಂದಿತ್ತರು. ಸಚಿನ್ (120) ಅವರ ಭರ್ಜರಿ ಶತಕದ ನೆರವಿನಿಂದ ಭಾರತ 338 ರನ್ ಪೇರಿಸಿದಾಗ ಸುಲಭ ಗೆಲುವನ್ನು ನಿರೀಕ್ಷಿಸಲಾಗಿತ್ತು. ಆದರೆ ಆ್ಯಂಡ್ರ್ಯೂ ಸ್ಟ್ರಾಸ್ (158) ಅದ್ಭುತ ಇನಿಂಗ್ಸ್ ಕಟ್ಟಿದರು. ಪ್ರೇಕ್ಷಕರನ್ನು ಕೊನೆಯವರೆಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಪಂದ್ಯದಲ್ಲಿ ಯಾರಿಗೂ ಗೆಲುವು ಲಭಿಸಲಿಲ್ಲ. ಅದೇ ರೀತಿ ಸೋಲಿನ ನಿರಾಸೆಯೂ ಉಂಟಾಗಲಿಲ್ಲ.

‘ದುರ್ಬಲ’ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದ ಐರ್ಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿದ್ದು ಈ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಅಚ್ಚರಿ. ಐರ್ಲೆಂಡ್ ಎದುರಿನ ಪಂದ್ಯದಲ್ಲಿ ಇಂಗ್ಲೆಂಡ್ 327 ರನ್ ಪೇರಿಸಿದಾಗ ಪಂದ್ಯ ಏಕಪಕ್ಷೀಯವಾಗಿ ಕೊನೆಗೊಳ್ಳುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ 63 ಎಸೆತಗಳಲ್ಲಿ 113 ರನ್ ಗಳಿಸಿದ ಐರ್ಲೆಂಡ್‌ನ ಕೆವಿನ್ ಒಬ್ರಿಯನ್ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು. ವಿಶ್ವಕಪ್‌ನಲ್ಲಿ ಅತಿವೇಗದ ಶತಕ ಗಳಿಸಿದ ಸಾಧನೆಯನ್ನೂ ಅವರು ತಮ್ಮದಾಗಿಸಿಕೊಂಡರು. ಕೆವಿನ್ ಕೇವಲ 50 ಎಸೆತಗಳಲ್ಲಿ ಮೂರಂಕಿಯ ಗಡಿ ದಾಟಿದ್ದರು.

ಈ ಎರಡು ಪಂದ್ಯಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಕಳೆ ಮತ್ತಷ್ಟು ಹೆಚ್ಚಿರುವುದು ನಿಜ. ಭಾರತ ತಂಡ ಆಡಿದ ಎರಡೂ ಪಂದ್ಯಗಳ ವೇಳೆ ಕ್ರೀಡಾಂಗಣ ಕಿಕ್ಕಿರಿದು ತುಂಬಿತ್ತು. ಐರ್ಲೆಂಡ್ ವಿರುದ್ಧ ಆಲ್‌ರೌಂಡ್ ಪ್ರದರ್ಶನ ನೀಡಿದ ಯುವರಾಜ್ ಸಿಂಗ್ ಸಂಭ್ರಮದ ಅಲೆಯನ್ನೇ ಎಬ್ಬಿಸಿದ್ದರು. ಇತ್ತೀಚಿನ ದಿನಗಳಲ್ಲಿ ಕಳೆಗುಂದಿದ್ದ ‘ಯುವಿ’ಗೆ ಪುಟಿದೆದ್ದು ನಿಲ್ಲಲು ಚಿನ್ನಸ್ವಾಮಿ ಕ್ರೀಡಾಂಗಣ  ವೇದಿಕೆ ಒದಗಿಸಿತು.

ಈ ಕ್ರೀಡಾಂಗಣದಲ್ಲಿ ಬೌಲಿಂಗ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದು ಯುವರಾಜ್ ಎಂಬುದು ವಿಶೇಷ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ‘ಯುವಿ’ 31 ರನ್‌ಗಳಿಗೆ ಐದು ವಿಕೆಟ್ ಪಡೆದಿದ್ದರು. ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದು ಇಬ್ಬರು ಮಾತ್ರ. ಭಾರತದ ಎದುರಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ವೇಗಿ ಟಿಮ್ ಬ್ರೆಸ್ನನ್ 48 ರನ್‌ಗಳಿಗೆ ಐದು ವಿಕೆಟ್ ಕಿತ್ತಿದ್ದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು ಆರು ತಂಡಗಳು ಆಡಿದವು. ಯಾವುದೇ ತಂಡದ ನಾಯಕ ಪಿಚ್ ಬಗ್ಗೆ ಟೀಕೆ ಮಾಡಲಿಲ್ಲ. ವಿಶ್ವಕಪ್‌ಗೆ ಮುನ್ನ ನಡೆದ ಅಭ್ಯಾಸ ಪಂದ್ಯಗಳ ವೇಳೆ ಇಲ್ಲಿನ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡಿರಲಿಲ್ಲ. ಆದರೆ ಬಳಿಕ ಬ್ಯಾಟ್ಸ್‌ಮನ್‌ಗಳ ಮೇಲಾಟ ನಡೆಯಿತು. ಐದು ಪಂದ್ಯಗಳಲ್ಲಿ ಒಟ್ಟು 2760 ರನ್ ಹರಿದುಬಂದಿರುವುದು ಇದಕ್ಕೆ ಸಾಕ್ಷಿ. ಅಂದರೆ ಪ್ರತಿ ಪಂದ್ಯದಲ್ಲಿ ಸರಾಸರಿ 552 ರನ್‌ಗಳು ಬಂದಿವೆ. ಐರ್ಲೆಂಡ್ ವಿರುದ್ಧ ಭಾರತ ಹಾಗೂ ಕೆನಡಾ ಎದುರು ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡಿದ್ದಲ್ಲಿ ಇದು ಇನ್ನಷ್ಟು ಹೆಚ್ಚುವ ಸಾಧ್ಯತೆಯಿತ್ತು.

ಕಹಿಯನ್ನು ಮರೆಯುವಂತಿಲ್ಲ: ಆದರೆ ಈ ವಿಶ್ವಕಪ್ ಟೂರ್ನಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದು ಕಪ್ಪುಚುಕ್ಕೆಯನ್ನು ಬಿಟ್ಟುಹೋಗಿದೆ.ಭಾರತ- ಇಂಗ್ಲೆಂಡ್ ಪಂದ್ಯದ ಟಿಕೆಟ್ ಗಿಟ್ಟಿಸುವ ಶ್ರಮದ ವೇಳೆ ಹಲವರಿಗೆ ಪೊಲೀಸರ ಲಾಠಿ ಏಟು ಬಿದ್ದಿತ್ತು. ಈ ಕಹಿ ಘಟನೆಯನ್ನು ಕ್ರಿಕೆಟ್ ಪ್ರಿಯರು ಮರೆಯಲು ಸಾಧ್ಯವಿಲ್ಲ.

ಕೌಂಟರ್ ಮೂಲಕ ಮಾರಾಟಕ್ಕಿಟ್ಟ ಕೆಲವೇ ಟಿಕೆಟ್‌ಗಳನ್ನು ಕೊಳ್ಳಲು ಸಾವಿರಾರು ಮಂದಿ ಮುಂದಾಗಿದ್ದರು. ಈ ಪ್ರಯತ್ನ ಲಾಠಿ ಏಟಿನಲ್ಲಿ ಕೊನೆಗೊಂಡಿತ್ತು. ಘಟನೆಯಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಾಕಷ್ಟು ಟೀಕೆ ಎದುರಿಸಿತು. ವಿಶ್ವಕಪ್ ವೇಳೆ ಸಾಮಾನ್ಯ ಕ್ರಿಕೆಟ್ ಪ್ರೇಮಿಗಳಿಗೆ ಅನ್ಯಾಯ ಉಂಟಾದದ್ದು ದುರದೃಷ್ಟ ಎನ್ನಬೇಕು.

1996ರ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಈ ಪಂದ್ಯವು ಇದುವರೆಗೂ ಇಲ್ಲಿ ನಡೆದ ವಿಶ್ವಕಪ್‌ನ ಅತ್ಯಂತ ರೋಚಕ ಹಣಾಹಣಿ ಎನಿಸಿತ್ತು. ಇದೀಗ ಭಾರತ- ಇಂಗ್ಲೆಂಡ್ ನಡುವಿನ ‘ಟೈ’ನಲ್ಲಿ ಕೊನೆಗೊಂಡ ಪಂದ್ಯವೂ ಅದರ ಜೊತೆ ಸೇರಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT