ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಚಕ ಪಂದ್ಯದಲ್ಲಿ ಭಾರತ ಅಚ್ಚುಮೆಚ್ಚು

Last Updated 25 ಫೆಬ್ರುವರಿ 2011, 17:10 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ-ಇಂಗ್ಲೆಂಡ್ ನಡುವಣ ಪಂದ್ಯ ಸಮಬಲ ಹೋರಾಟದ ರೋಚಕ ಪಂದ್ಯ ಆಗಿರುತ್ತದೆ ಎನ್ನುವ ನಿರ್ಧಾರಕ್ಕೆ ಬೆಟ್ಟಿಂಗ್ ವ್ಯವಹಾರ ನಡೆಸುವವರು ಲೆಕ್ಕಾಚಾರ.

ಭಾನುವಾರ ಉದ್ಯಾನ ನಗರಿಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಆತಿಥೇಯ ಭಾರತ ಹಾಗೂ ಇಂಗ್ಲೆಂಡ್ ಮುಖಾಮುಖಿ. ಎರಡೂ ತಂಡಗಳು ಬಲದಲ್ಲಿ ಸಮನಾಗಿದ್ದರೂ, ಮಹೇಂದ್ರ ಸಿಂಗ್ ದೋನಿ ಬಳಗದ ಸ್ಪಿನ್ ಬೌಲಿಂಗ್ ಹೆಚ್ಚು ಪ್ರಭಾವಿ ಎನ್ನುವುದು ಇಲ್ಲಿನ ಬೆಟ್ಟಿಂಗ್ ಏಜೆಂಟ್‌ಗಳ ಲೆಕ್ಕಾಚಾರ. ಆದ್ದರಿಂದ ಭಾರತವನ್ನು ಗೆಲ್ಲುವ ಅಚ್ಚುಮೆಚ್ಚಿನ ತಂಡವೆಂದು ಬಿಗಿದಪ್ಪಿಕೊಂಡಿದ್ದಾರೆ.

‘ಮಹಿ’ ಬಳಗವು ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ ಇಂಗ್ಲೆಡ್ ಬಲದ ಜೊತೆಗೆ ಹೋಲಿಕೆ ಮಾಡಿದಲ್ಲಿ ಜಯದ ಸಾಧ್ಯತೆಯು ಹೆಚ್ಚೇನಿಲ್ಲ. ಆದ್ದರಿಂದಲೇ ಎರಡರಲ್ಲಿ ಒಂದು ತಂಡದ ಮೇಲೆ ಬೆಟ್ ಮಾಡಿದವರ ನಿರೀಕ್ಷೆ ನಿಜವಾದಲ್ಲಿ ಸಿಗುವ ಲಾಭದಲ್ಲಿಯೂ ಭಾರಿ ವ್ಯತ್ಯಾಸವೇನು ಇಲ್ಲ. ಬೆಟ್ಟಿಗ್ ಏಜೆಂಟ್‌ಗಳು ವಿಶ್ಲೇಷಣೆ ಮಾಡಿ ಶುಕ್ರವಾರದ ಸಂಜೆಗೆ ನೀಡಿದ ಮಾಹಿತಿಯಂತೆ ಭಾರತ ಮತ್ತು ಇಂಗ್ಲೆಂಡ್ ಗೆಲುವಿನ ಸಾಧ್ಯತೆಯು ಕ್ರಮವಾಗಿ ಶೇಕಡಾ 54 ಹಾಗೂ 46. ಅಂದರೆ ಇಲ್ಲಿ ಗಟ್ಟಿಯಾಗಿ ಒಂದು ತಂಡವನ್ನು ಫೇವರಿಟ್ ಎಂದು ಪಟ್ಟಕ್ಕೆ ಕಟ್ಟುವುದು ಸಾಧ್ಯವೇ ಇಲ್ಲ.

ಸಾಮಾನ್ಯವಾಗಿ ಬೆಟ್ಟಿಂಗ್ ವ್ಯವಹಾರದ ಚುಕ್ಕಾಣಿ ಹಿಡಿದವರು ಪಂದ್ಯದ ದಿನ ಬೆಳಿಗ್ಗೆ ಮತ್ತೊಮ್ಮೆ ಹೊಸ ‘ಭಾವ್’ (ಬೆಲೆ) ನಿಗದಿ ಮಾಡುತ್ತಾರೆ. ಆದರೆ ಭಾನುವಾರ ಇಲ್ಲಿ ನಡೆಯುವ ಪಂದ್ಯದ ಮೇಲೆ ಈಗ ಹೊರಹಾಕಿರುವ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಆಗದೆಂದು ಸ್ಪಷ್ಟವಾಗಿ ಹೇಳಬಹುದು. ಸದ್ಯ ಬೆಟ್ಟಿಂಗ್ ಏಜೆಂಟ್‌ಗಳು ಭಾರತದ ಮೇಲೆ 100 ರೂಪಾಯಿ ತೊಡಗಿಸುವವರಿಗೆ ರೂ. 80 ಲಾಭವನ್ನು ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ಅದೇ ರೀತಿಯಲ್ಲಿ ಇಂಗ್ಲೆಂಡ್ ಮೇಲೆ ನೂರಕ್ಕೆ ಪ್ರತಿಯಾಗಿ ರೂ. 75ರಿಂದ 76 ಕೊಡಲಿದ್ದಾರೆ.

ವಿಶ್ವಕಪ್ ಹಿನ್ನೆಲೆಯಲ್ಲಿ ನಗರದಲ್ಲಿ ಬೆಟ್ಟಿಂಗ್ ದಂಧೆ ಮೇಲೆ ಕಡಿವಾಣ ಹಾಕಲು ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿದ್ದಾರೆ. ಇದರಿಂದಾಗಿ ಕೆಲವು ಏಜೆಂಟ್‌ಗಳು ತತ್ತರಿಸಿದ್ದಾರೆ. ಆದರೆ ಸ್ವತಂತ್ರವಾಗಿ ಹಾಗೂ ವೈಯಕ್ತಿಕವಾಗಿ ಈ ವ್ಯವಹಾರದಲ್ಲಿ ತೊಡಗಿರುವ ಏಜೆಂಟ್‌ಗಳು ಸುಲಭವಾಗಿ ತಮ್ಮ ವ್ಯವಹಾರ ಮುಂದುವರಿಸಿದ್ದಾರೆ. ಬೆಂಗಳೂರಿನಲ್ಲಿಯೇ ನಡೆಯುವ ಭಾರತ-ಇಂಗ್ಲೆಂಡ್ ನಡುವಣ ಪಂದ್ಯದ ಬಗ್ಗೆ ಸ್ಥಳೀಯರಿಗೆ ಆಸಕ್ತಿ ಹೆಚ್ಚು ಇರುತ್ತದೆ. ಆದ್ದರಿಂದ ಹೆಚ್ಚಿನ ಮೊತ್ತದ ವ್ಯವಹಾರ ನಡೆಯಬಹುದು ಎನ್ನುವ ಆಶಯ ಹೊಂದಿದ್ದಾರೆ ಏಜೆಂಟ್‌ಗಳು.

ಇಂಗ್ಲೆಂಡ್ ಹಾಗೂ ಭಾರತದ ನಡುವೆ ಬೆಟ್ಟಿಂಗ್ ಲಾಭಾಂಶದಲ್ಲಿ ಹೆಚ್ಚಿನ ವ್ಯತ್ಯಾಸ ಏಕಿಲ್ಲ ಎಂದು ಕೇಳಿದರೆ ಪುಡಿ ಬೆಟ್ಟಿಂಗ್ ನಡೆಸುವ ನಾಗರಾಜ್ (ಹೆಸರು ಬದಲಿಸಲಾಗಿದೆ) ‘ಈ ಎರಡೂ ತಂಡಗಳ ಬ್ಯಾಟಿಂಗ್ ಬಲದಲ್ಲಿ ಅಷ್ಟೇನು ಅಂತರ ಕಾಣಿಸುವುದಿಲ್ಲ. ಇಂಗ್ಲೆಂಡ್ ತಂಡದಲ್ಲಿಯೂ ಆಕ್ರಮಣಕಾರಿ ಆಟವಾಡುವಂಥ ಬ್ಯಾಟ್ಸ್‌ಮನ್‌ಗಳಿದ್ದಾರೆ. ಪಂದ್ಯದ ಸ್ವರೂಪ ಬದಲಿಸುವ ಆಲ್‌ರೌಂಡರ್‌ಗಳಿದ್ದಾರೆ. ಭಾರತವು ಸ್ವಲ್ಪ ಹೆಚ್ಚು ತೂಗುವುದು ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಮಾತ್ರ’ ಎಂದು ವಿವರಿಸತ್ತಾನೆ.

ಭಾರತದವರು ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಎದುರು ಹೆಚ್ಚಿನ ಯಶಸ್ಸು ಸಾಧಿಸಿಲ್ಲ. ಆಡಿದ ಮೂರ ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್‌ನವರೇ ಎರಡು ಬಾರಿ ವಿಜಯ ಸಾಧಿಸಿದ್ದಾರೆ. 1985ರ ಜೂನ್ 20ರಂದು ಮುಖಾಮುಖಿ ಆಗಿದ್ದಾಗ ಆತಿಥೇಯರು 46 ಓವರುಗಳಲ್ಲಿ ನೀಡಿದ್ದ 6 ವಿಕೆಟ್ ಕಳೆದುಕೊಂಡು ಪೇರಿಸಿಟ್ಟಿದ್ದ 205 ರನ್‌ಗಳ ಮೊತ್ತಕ್ಕೆ ಇಂಗ್ಲೆಂಡ್ 45 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 206 ರನ್‌ಗಳ ಉತ್ತರ ನೀಡಿ 3 ವಿಕೆಟ್‌ಗಳ ವಿಜಯ ಸಾಧಿಸಿತ್ತು.

1993ರ ಫೆಬ್ರುವರಿ 26ರಲ್ಲಿ ಇಂಗ್ಲೆಡ್‌ನವರು 47 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿ, ಆನಂತರ ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ಭಾರತವನ್ನು 41.4 ಓವರುಗಳಲ್ಲಿ 170 ರನ್‌ಗೆ ಕಟ್ಟಿಹಾಕಿ 48 ರನ್‌ಗಳ ಗೆಲುವು ಪಡೆದಿತ್ತು. ಕೊನೆಯ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಿದ್ದಾಗ ದೋನಿ ನೇತೃತ್ವದಲ್ಲಿಯೇ ಆಡಿತ್ತು. ವಿಶೇಷವೆಂದರೆ 2008ರ ನವೆಬರ್ 23ರಂದು ಮಳೆಯು ಏಕದಿನ ಪಂದ್ಯಕ್ಕೆ ತೊಡಕಾಗಿತ್ತು. ವಿಶ್ವಕಪ್‌ನ ಭಾನುವಾರದ ಪಂದ್ಯಕ್ಕೂ ಮಳೆ ಕಾಡುವ ಆತಂಕವಿದೆ.

‘ಮಹಿ’ ನೇತೃತ್ವದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಇಲ್ಲಿ ಮಣಿಸಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಮಳೆಯ ಅಡ್ಡಿಯ ನಡುವೆ ಆತಿಥೇಯರು ಡಕ್ವರ್ಥ್-ಲೂಯಿಸ್ ನಿಯಮದಂತೆ 19 ರನ್‌ಗಳ ಅಂತರದ ಜಯ ಪಡೆದಿದ್ದರು.

ಆದ್ದರಿಂದಲೇ ಅದೃಷ್ಟದ ಬಲ ಹೊಂದಿರುವ ನಾಯಕ ದೋನಿ ಮುಂದಾಳತ್ವದಲ್ಲಿ ಇಂಗ್ಲೆಂಡ್ ವಿರುದ್ಧ ಮತ್ತೊಂದು ಜಯ ಸಾಧ್ಯವಾಗಬಹುದೆಂದು ಕ್ರಿಕೆಟ್ ಪ್ರೇಮಿಗಳು ಮಾತ್ರವಲ್ಲ ಬೆಟ್ಟಿಂಗ್ ಏಜೆಂಟ್‌ಗಳೂ ನಿರೀಕ್ಷಿಸುತ್ತಿದ್ದಾರೆ.

ಸ್ಪಿನ್ ಬೌಲರ್‌ಗಳು ಇಂಗ್ಲೆಂಡ್ ತಂಡವನ್ನು ಎಷ್ಟು ಬೇಗ ನಿಯಂತ್ರಿಸುತ್ತಾರೆ ಎನ್ನುವುದು ನಿರ್ಣಾಯಕ ಅಂಶವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆ್ಯಂಡ್ರ್ಯೂ ಸ್ಟ್ರಾಸ್ ನೇತೃತ್ವದ ಇಂಗ್ಲೆಂಡ್ ಪಡೆಯ ಬ್ಯಾಟ್ಸ್‌ಮನ್‌ಗಳಿಗೆ ಹರಭಜನ್ ಸಿಂಗ್ ಸೇರಿದಂತೆ ಎಲ್ಲ ಸ್ಪಿನ್ ಬೌಲರ್‌ಗಳು ಕಡಿವಾಣ ಹಾಕಿಬೇಕು. ಜೊತೆಗೆ ವೇಗಿಗಳು ಪ್ರವಾಸಿ ತಂಡದ ಆರಂಭಿಕ ಆಟಗಾರರು ಆಕ್ರಮಣಕಾರಿ ಆಗದಂತೆ ತಡೆಯಬೇಕು. ಅಷ್ಟು ಮಾಡಿದಲ್ಲಿ ಉದ್ಯಾನ ನಗರಿಯಲ್ಲಿ ಇಂಗ್ಲೆಂಡ್ ವಿರುದ್ಧ ದೋನಿ    ಬಳಗವು ಮತ್ತೊಂದು ವಿಜಯದ ಸಂಭ್ರಮ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT